Advertisement

ಕೆನರಾ ಬ್ಯಾಂಕ್‌ಗೆ 281 ಕೋಟಿ ರೂ. ನಿವ್ವಳ ಲಾಭ​​​​​​​

07:00 AM Jul 26, 2018 | Team Udayavani |

ಬೆಂಗಳೂರು: ಪ್ರತಿಷ್ಠಿತ ಕೆನರಾ ಬ್ಯಾಂಕ್‌ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ 281 ಕೋಟಿ ರೂ.ನಿವ್ವಳ
ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.11.51ರಷ್ಟು ಬೆಳವಣಿಗೆ ಸಾಧಿಸಿದೆ.

Advertisement

ನಗರದ ಜೆ.ಸಿ.ರಸ್ತೆಯಲ್ಲಿರುವ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಬುಧವಾರ 2018-19ನೇ ಸಾಲಿನ ಮೊದಲ ತ್ತೈಮಾಸಿಕ ಫ‌ಲಿತಾಂಶ ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರೂ ಆದ ಸಿಇಒ ರಾಕೇಶ್  ಶರ್ಮಾ,  ಹಿಂದಿನ ಅರ್ಥಿಕ ವರ್ಷದ ಮೊದಲ ತ್ತೈಮಾಸಿಕದಲ್ಲಿ ಬ್ಯಾಂಕ್‌ 252 ಕೋಟಿ ರೂ.ನಿವ್ವಳ ಲಾಭ ಗಳಿಸಿತ್ತು. ಈ ಬಾರಿ ನಿವ್ವಳ ಲಾಭ ಪ್ರಮಾಣ ಹೆಚ್ಚಾಗಿದ್ದು, ಅತ್ಯುತ್ತಮ ಸಾಧನೆ ತೋರಿದೆ ಎಂದು ಹೇಳಿದರು.

ಇದೇ ಅವಧಿಯಲ್ಲಿ ಬ್ಯಾಂಕ್‌ನ ಒಟ್ಟು ಲಾಭ ಪ್ರಮಾಣ 2,933 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.18.65ರಷ್ಟು ಬೆಳವಣಿಗೆ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು ಲಾಭ ಮೊತ್ತ 2,472 ಕೋಟಿ ರೂ.ನಷ್ಟಿತ್ತು. ನಾಲ್ಕೈದು ವರ್ಷಗಳ ಹಿಂದೆ ಬ್ಯಾಂಕ್‌ ಒತ್ತಡದಲ್ಲಿತ್ತು. ಕೆಲ ಪ್ರಮುಖ ಬದಲಾವಣೆ ತರಲಾಗಿದ್ದು, ಉತ್ತಮ ಫ‌ಲಿತಾಂಶ ನೀಡುತ್ತಿದೆ.

ಮುಂದಿನ ತ್ತೈಮಾಸಿಕದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಮೊದಲ ತ್ತೈಮಾಸಿಕದಲ್ಲಿ 3,883 ಕೋಟಿ ರೂ.ನಿವ್ವಳ ಬಡ್ಡಿ ಆದಾಯ ಸಂಗ್ರಹವಾಗಿದ್ದು, ಶೇ.43.13ರಷ್ಟು ಬೆಳವಣಿಗೆ ಕಂಡಿದೆ. ಮುಂಗಡಗಳ ಮೇಲಿನ ಬಡ್ಡಿ ಆದಾಯವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.14.87ರಷ್ಟು ಬೆಳವಣಿಗೆ ಸಾಧಿಸಿದ್ದರೆ, 1833 ಕೋಟಿ ರೂ.ಬಡ್ಡಿಯೇತರ ಆದಾಯ ಸಂಗ್ರಹವಾಗಿದೆ ಎಂದು ಹೇಳಿದರು.

ಬ್ಯಾಂಕ್‌ನ ಒಟ್ಟು ಜಾಗತಿಕ ವ್ಯವಹಾರದಲ್ಲಿ ಶೇ.10.96ರಷ್ಟು ಬೆಳವಣಿಗೆಯಾಗಿದ್ದು, ವ್ಯವಹಾರ ಮೊತ್ತ 9.2 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟು ಜಾಗತಿಕ ಠೇವಣಿ ಮೊತ್ತ 5.33 ಲಕ್ಷ ಕೋಟಿ ರೂ.ಗೆ ಹೆಚ್ಚಳವಾಗುವ ಮೂಲಕ ಶೇ.9.75ರಷ್ಟು ಬೆಳವಣಿಗೆ ಸಾಧಿಸಿದೆ. ಒಟ್ಟಾರೆ ಮುಂಗಡಗಳು 3.86 ಲಕ್ಷ ಕೋಟಿ ರೂ.ತಲುಪಿದೆ ಎಂದು ವಿವರ ನೀಡಿದರು.

Advertisement

ಅನುತ್ಪಾದಕ ಆಸ್ತಿ ಮೊತ್ತವನ್ನು ಇಳಿಕೆ ಮಾಡಲು ಆದ್ಯತೆ ನೀಡಲಾಗಿದೆ. 2017-2018ನೇ ಸಾಲಿನ ಕೊನೆಯ ತ್ತೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣ ಶೇ.7.48ರಿಂದ ಶೇ.6.91ಕ್ಕೆ ಇಳಿಕೆಯಾಗಿದೆ. ಹಾಗೆಯೇ ಒಟ್ಟು ಅನುತ್ಪಾದಕ ಆಸ್ತಿ ಪ್ರಮಾಣವು ಹಿಂದಿನ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.11.84ರಿಂದ ಶೇ.11.05ಕ್ಕೆ ಇಳಿಕೆಯಾಗಿದೆ.

ಪ್ರಸಕ್ತ ಸಾಲಿನಲ್ಲಿ 3,537 ಕೋಟಿ ರೂ.ವಸೂಲಿ ಮಾಡಲಾಗಿದೆ ಎಂದು ಹೇಳಿದರು. ಆ.1ರಂದು ಎಸ್‌ಎಲ್‌ಬಿಸಿ ಸಭೆ: ಬ್ಯಾಂಕ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಎಂ.ವಿ.ರಾವ್‌ ಮಾತನಾಡಿ, ರಾಜ್ಯದ ರೈತರ ಸಾಲ ಮನ್ನಾ ಕುರಿತಂತೆ ತೀರ್ಮಾನಿಸಲು ರಾಜ್ಯ ಮಟ್ಟದ ಬ್ಯಾಂಕರ್‌ ಸಮಿತಿ (ಎಸ್‌ಎಲ್‌ಬಿಸಿ) ಗ್ರಾಮೀಣ ಬ್ಯಾಂಕ್‌ಗಳು ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಎರಡು ತಂಡ ರಚಿಸಲಾಗಿದೆ. ಎರಡೂ ತಂಡಗಳು ಆ.1ರಂದು ನಡೆಯುವ ಎಸ್‌ಎಲ್‌ಬಿಸಿ ಸಭೆಯಲ್ಲಿ ಭಾಗವಹಿಸಲಿದ್ದು, ಸಾಲಮನ್ನಾ ಕುರಿತು ತೀರ್ಮಾನ ಕೈಗೊಳ್ಳಲಿವೆ. ಆ ತೀರ್ಮಾನಗಳನ್ನು ಪರಾಮರ್ಶಿಸಿ ಬ್ಯಾಂಕ್‌ನ ಆಡಳಿತ ಮಂಡಳಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಪ್ರತಿಕ್ರಿಯೆ ನೀಡಿದರು.ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ದೆಬರ್‌ಶಿಶ್‌ ಮುಖರ್ಜಿ, ಪಿ.ವಿ.ಭಾರತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next