Advertisement

ನೀರು ಹರಿಸದಿದ್ರೆ ಕಾಲುವೆಗಳು ಧ್ವಂಸ

05:22 PM Dec 10, 2018 | Team Udayavani |

ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿನ ನೀರಿನ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಿಗೂ ತಪ್ಪು ಮಾಹಿತಿ ನೀಡುತ್ತಿರುವ ತುಂಗಭದ್ರಾ ಜಲಾಶಯ ನೀರಾವರಿ ಇಲಾಖೆಯ ಅಧಿಕಾರಿಗಳು ಆಂಧ್ರ ಅಧಿಕಾರಿಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದರಿಂದ ರಾಜ್ಯದ ಜನರಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಆರೋಪಿಸಿದರು.

Advertisement

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.18ರಂದು ನಡೆದಿದ್ದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಎಲ್‌ಎಲ್‌ಸಿ ಕಾಲುವೆಗೆ ಡಿ.26 ರಿಂದ ಮಾರ್ಚ್‌ 31ರ ವರೆಗೆ ನೀರು ಹರಿಸುವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಸಭೆಯ ನಿರ್ಣಯದಂತೆ ಆಂಧ್ರದವರು ಸಹ ಜಲಾಶಯದಿಂದ ನೀರು ಪಡೆಯಬೇಕು. ಆದರೆ, ಕಳೆದ ಮೂರು ದಿನಗಳ ಹಿಂದೆ ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯ ಜಿಲ್ಲಾಧಿಕಾರಿಗಳು ಜ.10ರ ನಂತರ ತುಂಗಭದ್ರಾ ಜಲಾಶಯದಿಂದ ನೀರು ಪಡೆಯುವುದು ಬೇಡ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಆಂಧ್ರದವರು ನೀರು ಸ್ಥಗಿತಗೊಳಿಸಿದರೆ ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ. ಐಸಿಸಿ ಸಭೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸೇರಿ ಕೈಗೊಂಡ ನಿರ್ಣಯಕ್ಕೆ ಬೆಲೆ ಇಲ್ಲದಂತಾಗಲಿದೆ. ಹಾಗಾಗಿ ಐಸಿಸಿ ನಿರ್ಣಯದಂತೆ ಅಂತಾರಾಜ್ಯಗಳ ಕೋಟಾದ ನೀರು ಪಡೆಯಬೇಕು ಎಂದು ಒತ್ತಾಯಿಸಿದರು.

ಎಲ್‌ಎಲ್‌ಸಿ ಕಾಲುವೆ ವ್ಯಾಪ್ತಿಯಲ್ಲಿನ ರೈತರು ಈಗಾಗಲೇ ಎರಡನೇ ಬೆಳೆ ಬಿತ್ತನೆಗೆ ಹೊಲಗಳನ್ನು ಸಿದ್ಧತೆ ಮಾಡಿಕೊಂಡಿದ್ದಾರೆ. ಆಂಧ್ರದವರು ತಮ್ಮ ಕೋಟಾದ ನೀರನ್ನು ಜ.10ಕ್ಕೆ ಸ್ಥಗಿತಗೊಳಿಸಿದರೆ, ಕರ್ನಾಟಕ ಪಾಲಿನ ಕೇವಲ ದಿನಕ್ಕೆ 450 ಕ್ಯುಸೆಕ್‌ ನೀರನ್ನು ಮಾತ್ರ ಕಾಲುವೆಗೆ ಹರಿಸಬೇಕಾಗುತ್ತದೆ. ಈ ನೀರು ವಿತರಣಾ ಕಾಲುವೆಗಳಿಗೆ ಹರಿಯುವುದಿಲ್ಲ.

ಕಾಲುವೆಗಳನ್ನು ಸಹ ಅಂತಾರಾಜ್ಯಗಳಿಗೆ ನೀರು ಹರಿಸುವ ಸಲುವಾಗಿ ಜಂಟಿಯಾಗಿ ನಿರ್ಮಿಸಲಾಗಿದೆ. ಹಾಗಾಗಿ ಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಡಿ.26 ರಿಂದ ಮಾರ್ಚ್‌ 31ರ ವರೆಗೆ ಕರ್ನಾಟಕದ ಪಾಲಿನ ನೀರಿನೊಂದಿಗೆ ಆಂಧ್ರದವರು ಸಹ ನೀರನ್ನು ಪಡೆಯಬೇಕು. ಒಂದು ವೇಳೆ ಜ.10ಕ್ಕೆ ಆಂಧ್ರವು ತನ್ನ ಪಾಲಿನ ನೀರನ್ನು ಸ್ಥಗಿತಗೊಳಿಸಿದ್ದೇ ಆದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ.

ಇದರಿಂದ ಜಿಲ್ಲೆಯ ರೈತರು ಆಕ್ರೋಶಗೊಂಡಿದ್ದು, ಕಾಲುವೆಗಳನ್ನೇ ಧ್ವಂಸಗೊಳಿಸಬೇಕಾಗುತ್ತದೆ ಎಂದು ಪುರುಷೋತ್ತಮಗೌಡ ಎಚ್ಚರಿಕೆ ನೀಡಿದರು. ಅದೇ ರೀತಿ ಐಸಿಸಿ ಸಭೆಯಲ್ಲಿ ಎಚ್‌ಎಲ್‌ಸಿ ಕಾಲುವೆಗೂ ಸಹ ಡಿ.5ರ ವರೆಗೆ ಅಧಿಕೃತವಾಗಿ ಹಾಗೂ ಡಿ.30ರ ವರೆಗೆ ಮೌಖೀಕವಾಗಿ ನೀರು ಬಿಡುವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಕಳೆದ ಡಿ.5ಕ್ಕೆ ಎಚ್‌ಎಲ್‌ಸಿ ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸಲಾಗಿದೆ. ಇದರಿಂದ ಕೈಗೆ ಬಂದಿರುವ ಮೆಣಸಿನಕಾಯಿ ಸೇರಿದಂತೆ ಇನ್ನಿತರೆ ಬೆಳೆಗಳಿಗೆ ಕೊನೆಯ ದಿನಗಳಲ್ಲಿ ನೀರಿಲ್ಲದಂತಾಗಿದ್ದು, ರೈತರು ನಷ್ಟದ ಭೀತಿ ಎದುರಿಸುವಂತಾಗಿದೆ. ಈ ಕುರಿತು ಕೇಳಿದರೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಹ ಮಂಡಳಿಯ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಹಾಗಾಗಿ ತುಂಗಭದ್ರಾ ನೀರಾವರಿ ಇಲಾಖೆಯಲ್ಲಿನ ಮುಖ್ಯ ಇಂಜಿನಿಯರ್‌ ಮಂಜಪ್ಪ ಅವರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕಾಗಿದೆ. ಅಥವಾ ಅವರು
ರಾಜೀನಾಮೆ ಪಡೆದರೂ ಅದನ್ನು ಜಿಲ್ಲೆಯ ರೈತರು ಸ್ವಾಗತಿಸುತ್ತಾರೆ ಎಂದು ತಿಳಿಸಿದರು.

Advertisement

ಆಂಧ್ರದ ಕಡಪ ಹಾಗೂ ಕರ್ನೂಲ್‌ ಭಾಗದ ಕಾಲುವೆಯಲ್ಲಿರುವ 2 ಟಿಎಂಸಿ ನೀರನ್ನು ಬಳಕೆ ಮಾಡದೆ ಹಾಗೆ ಉಳಿಸಿದ್ದು, ಆ ನೀರನ್ನು ರಾಜ್ಯದ ರೈತರಿಗೆ ನೀಡುವಂತೆ ಆಂಧ್ರದ ಸಚಿವರೊಂದಿಗೆ ಜಿಲ್ಲೆಯ ಜನಪ್ರತಿನಿಧಿಗಳು ಚರ್ಚೆ ನಡೆಸಿದ್ದಾರೆ. ಇದಕ್ಕೆ ಒಪ್ಪಿಗೆ ಸೂಚಿಸಿ ಡಿ.20ರಂದು ನೀರು ಬಿಡುವುದಾಗಿ ತಿಳಿಸಿದ್ದು, ಅಲ್ಲಿಯವರೆಗೆ ರೈತರು ಬೆಳೆದ ಬೆಳೆಗಳು ಒಣಗುವ ಆತಂಕ ಕಾಡುತ್ತಿದೆ. ಹಾಗಾಗಿ ಡಿ.15ರಿಂದ ನೀರು ಬಿಡುವಂತೆ ಟಿಬಿ ಬೋರ್ಡ್‌ ಅಧಿಕಾರಿಗಳು ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಮುಷ್ಟಗಟ್ಟಿ ಭೀಮನಗೌಡ, ಮಸೀದಿಪುರ ಬಸವನಗೌಡ, ದರೂರು ರಾಮನಗೌಡ, ಶಿವಯ್ಯ, ಗಂಗಾವತಿ ವೀರೇಶ್‌, ಶ್ರೀಧರ ಗಡ್ಡೆ ವೀರನ ಗೌಡ ಇನ್ನಿತರರಿದ್ದರು. 

ಐಸಿಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಡಿ.26 ರಿಂದ ಮಾರ್ಚ್‌ 31ರ ವರೆಗೆ ಕರ್ನಾಟಕದ ಪಾಲಿನ ನೀರಿನೊಂದಿಗೆ ಆಂಧ್ರದವರು ಸಹ ನೀರನ್ನು ಪಡೆಯಬೇಕು. ಒಂದು ವೇಳೆ ಜ.10ಕ್ಕೆ ಆಂಧ್ರವು ತನ್ನ ಪಾಲಿನ ನೀರನ್ನು ಸ್ಥಗಿತಗೊಳಿಸಿದ್ದೇ ಆದಲ್ಲಿ ರಾಜ್ಯದ ರೈತರಿಗೆ ಅನ್ಯಾಯವಾಗಲಿದೆ. ಇದರಿಂದ ಜಿಲ್ಲೆಯ ರೈತರು ಆಕ್ರೋಶಗೊಂಡಿದ್ದು, ಕಾಲುವೆಗಳನ್ನೇ ಧ್ವಂಸಗೊಳಿಸಬೇಕಾಗುತ್ತದೆ. 
 ದರೂರು ಪುರುಷೋತ್ತಮಗೌಡ, ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next