Advertisement

ಕಾಲುವೆ ಕುಸಿತ: ತುರ್ತು ದುರಸ್ತಿಗೆ ಸಲಹೆ

03:39 PM Mar 12, 2022 | Team Udayavani |

ಸಿಂಧನೂರು: ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ ಚೈನ್‌ 28ರಲ್ಲಿ ಕುಸಿತ ಕಂಡಿದ್ದ ಹಿನ್ನೆಲೆಯಲ್ಲಿ ದುರಸ್ತಿ ಕೆಲಸವನ್ನು ಶೀಘ್ರವೇ ಮುಗಿಸುವಂತೆ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸಲಹೆ ನೀಡಿದರು.

Advertisement

ತುಂಗಭದ್ರಾ ಎಡದಂಡೆ ಕಾಲುವೆ ಸಮೀಪವೇ ಕುಸಿತವಾಗಿದ್ದರಿಂದ ದುರಸ್ತಿ ಸಮರೋಪಾದಿಯಲ್ಲಿ ನಡೆಯಬೇಕು. ಹಗಲು-ರಾತ್ರಿ ಕೆಲಸ ಕೈಗೊಳ್ಳಬೇಕು ಎಂದರು. ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಸಿಇ ಕೃಷ್ಣೋಜಿ ಚವ್ಹಾಣ, ಎಸ್‌ಇ ಎಲ್‌.ಬಸವರಾಜ್‌ ಅವರು ಕೆಲಸದ ವಿವರ ನೀಡಿದರು.

ಬೆಳಗ್ಗೆ 3ಗಂಟೆಗೆ ಕಾಲುವೆ ಕುಸಿತ ಗೊತ್ತಾಗುತ್ತಿದ್ದಂತೆ ನೀರು ನಿಲುಗಡೆ ಮಾಡಿ, ಒಂದೇ ತಾಸಿನಲ್ಲಿ ದುರಸ್ತಿಗೆ ಸಿದ್ಧತೆ ಆರಂಭಿಸಲಾಗಿದೆ. ಹಗಲು-ರಾತ್ರಿ ಕೆಲಸ ನಡೆಯಲಿದ್ದು, ನಾಳೆ ಸಾಯಂಕಾಲದ ಹೊತ್ತಿಗೆ ಸಂಪೂರ್ಣ ಕಾಮಗಾರಿ ಮುಗಿಯಲಿದೆ. ಈಗಾಗಲೇ ಗುತ್ತಿಗೆದಾರ ಆರ್‌.ಎನ್‌. ಶೆಟ್ಟಿ ಕಂಪನಿಯವರಿಗೆ ಈ ಬಗ್ಗೆ ಗುರಿ ನಿಗದಿಪಡಿಸಲಾಗಿದೆ ಎಂದರು. ಆಗ ಹೆಚ್ಚುವರಿ ಮಿಷನ್‌ಗಳನ್ನು ಬಳಸಿಕೊಂಡು ತ್ವರಿತವಾಗಿಯೇ ಕೆಲಸ ಮುಗಿಸಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೂಚಿಸಿದರು.

ಗ್ರೇಡ್‌ ವಾಲ್‌ ನಿರ್ಮಿಸಿ

ಇದೇ ಸಂದರ್ಭದಲ್ಲಿ ಕಾಲುವೆ ಆರಂಭಿಕ ಭಾಗದಲ್ಲಿ 1 ಕಿ.ಮೀ. ನಷ್ಟು ಉದ್ದದ ಗ್ರೇಡ್‌ ವಾಲ್‌ ನಿರ್ಮಿಸುವಂತೆ ಸಲಹೆ ನೀಡಲಾಯಿತು. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಕಾಲುವೆ ಒಡ್ಡಿನ ಮೇಲೆ ಗಿಡಮರ ಬೆಳೆದಿದ್ದು, ಬೇರುಗಳು ಒಳಗಡೆ ಬಿಟ್ಟಿವೆ. ಮುಂಜಾಗ್ರತಾ ಕ್ರಮವಾಗಿ ಗ್ರೇಡ್‌ವಾಲ್‌ ಕಟ್ಟಬೇಕು. ಆಡಳಿತಾತ್ಮಕ ಅನುಮೋದನೆ ದೊರೆತು 340 ಕೋಟಿ ರೂ. ಹಣವಿದೆ. ಇರುವ ಮೊತ್ತವನ್ನು ಇದಕ್ಕಾಗಿ ಬಳಸಿಕೊಳ್ಳಿ ಎಂದರು.

Advertisement

ಶಾಸಕ ಬಸವರಾಜ್‌ ದಢೇಸುಗೂರು ಇದಕ್ಕೆ ಪ್ರತಿಕ್ರಿಯಿಸಿ, ರೈತರ ಹಿತದೃಷ್ಟಿಯಿಂದ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಎನ್‌.ಶಿವನಗೌಡ ಗೋರೆಬಾಳ, ಬಸವರಾಜ ಹಿರೇಗೌಡರ್‌, ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ್‌ ಸಾಲಗುಂದಾ, ಬಿಜೆಪಿ ಯುವ ಘಟಕದ ಅಧ್ಯಕ್ಷ ಸಿದ್ದು ಹೂಗಾರ್‌, ವೀರರಾಜು, ಕಾಂಗ್ರೆಸ್‌ ಮುಖಂಡರಾದ ಎನ್‌.ಭೀಮನಗೌಡ ನೆಟೆಕಲ್‌ ಸೇರಿದಂತೆ ಅನೇಕರು ಇದ್ದರು.

ವಿಳಂಬವಿಲ್ಲದೇ ಕೆಲಸ

ಕೆವಿ ನೀರಾವರಿ ಇಲಾಖೆಯ ಅಧಿಕಾರಿಗಳು ತಾಂತ್ರಿಕ ಸಲಹೆ ಪಡೆದುಕೊಂಡು ದುರಸ್ತಿ ಕೆಲಸ ಶೀಘ್ರ ಮುಗಿಸಲಿದ್ದಾರೆ. ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಸ್ಥಳದಲ್ಲೇ ಇದ್ದು, ಅಗತ್ಯ ಸಲಹೆ ನೀಡುತ್ತಿದ್ದಾರೆ. ದಿನದ 24 ಗಂಟೆಯೂ ಕಾಮಗಾರಿ ನಡೆದರೆ, ಎರಡು ದಿನದಲ್ಲಿ ಕೆಲಸ ಮುಗಿಯಲಿದೆ. ಕೆಳಭಾಗದ ರೈತರಿಗೆ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಅಧಿವೇಶನದಲ್ಲಿ ಶಾಸಕರ ಪ್ರಸ್ತಾಪ ತುಂಗಭದ್ರಾ ಎಡದಂಡೆ ಕಾಲುವೆಗೆ ಬೋಂಗಾ ಬಿದ್ದ ವಿಷಯದ ಕುರಿತು ಶಾಸಕ ವೆಂಕಟರಾವ್‌ ನಾಡಗೌಡ ಸದನದಲ್ಲಿ ಪ್ರಸ್ತಾಪಿಸಿದ್ದು, ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವ ಆರ್‌.ಅಶೋಕ ಸರಕಾರದ ಪರವಾಗಿ ಉತ್ತರಿಸಿದ್ದಾರೆ. ಬೆಳಗಿನ ಜಾವ ಕಾಲುವೆಗೆ ಬೋಂಗಾ ಬಿದ್ದಿದ್ದು, ತ್ವರಿತವಾಗಿ ದುರಸ್ತಿ ಕೆಲಸ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

ಎರಡು ದಿನದಲ್ಲಿ ಸಮರೋಪಾದಿಯಲ್ಲಿ ಕಾಮಗಾರಿ ಮುಗಿಸಿ, ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಸಚಿವ ಆರ್‌.ಅಶೋಕ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next