Advertisement

ರೈತರಿಂದಲೇ ಕಾಲುವೆ ಸ್ವತ್ಛತೆ

06:01 PM Aug 05, 2018 | Team Udayavani |

ಗೊರೇಬಾಳ: ತುಂಗಭದ್ರಾ ಜಲಾಶಯದಿಂದ ಮುಖ್ಯ ಕಾಲುವೆಗೆ ನೀರು ಹರಿಬಿಟ್ಟು 20 ದಿನ ಕಳೆದರೂ ಉಪ ಕಾಲುವೆಗಳಿಂದ ಕೆಳಬಾಗದ ಗ್ರಾಮಗಳಿಗೆ ನೀರು ಹರಿಯದ ಕಾರಣ ಸಿಂಧನೂರ ತಾಲೂಕಿನ ರಾಮಾಕ್ಯಾಂಪ್‌
ರೈತರು ಸ್ವಂತ ಹಣದಿಂದಲೇ ಕಾಲುವೆಯಲ್ಲಿ ತುಂಬಿದ ಹೂಳು, ಕಸಕಡ್ಡಿಗಳನ್ನು ಜೆಸಿಬಿಯಿಂದ ತೆರವುಗೊಳಿಸುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ರಾಮಾಕ್ಯಾಂಪ್‌ನ ಹಿರಿಯ ರೈತ ಮುಖಂಡ ಬಾಲಪ್ಪ ಮಾತನಾಡಿ, ಹಳ್ಳಿಗಳಲ್ಲಿ ವಿಧಾನಸಭೆ ಚುನಾವಣೆ ಮುನ್ನ ಏಪ್ರಿಲ್‌ ತಿಂಗಳಲ್ಲಿ ಕೆರೆ, ಕಟ್ಟೆಗಳನ್ನು ತುಂಬಿಸಲಾಗಿತ್ತು. ನೀರು ತುಂಬಿಸಿ ನಾಲ್ಕು ತಿಂಗಳು ಕಳೆಯುತ್ತಿದೆ. ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ಈ ಬಾರಿ
ತುಂಗಭದ್ರಾ ಜಲಾಶಯ ತ್ವರಿತಗತಿಯಲ್ಲಿ ತುಂಬಿರುವ ಕಾರಣ ಕಾಲುವೆಗೆ ಬೇಗ ನೀರು ಬರುವ ನಿರೀಕ್ಷೆ ಇತ್ತು. ಹೀಗಾಗಿ ರೈತರು ಕಳೆದ ತಿಂಗಳು ಹೊಲಗಳಲ್ಲಿನ ಅರೆಬರೆ ನೀರು ಹೊಂದಿದ ಕೆರೆಗಳಲ್ಲಿನ ನೀರು ಬಳಸಿಕೊಂಡು ಭತ್ತದ ಸಸಿ ಮಡಿ ಹಾಕಿದ್ದಾರೆ.

ಈಗ ಒಂದು ತಿಂಗಳಿನಿಂದ ಈ ಭಾಗದಲ್ಲಿ ಮಳೆ ಸುರಿದಿಲ್ಲ, ಅತ್ತ ಕಾಲುವೆಗೂ ನೀರು ಹರಿಯುತ್ತಿಲ್ಲ. ಇದರಿಂದ ಭತ್ತ ನಾಟಿಗೆ ಹಾಕಿದ ಸಸಿ ಮಡಿಗಳು ಒಣಗುತ್ತಿವೆ. ಮುಖ್ಯ ಕಾಲುವೆಗೆ ನೀರು ಬಿಟ್ಟು 20 ದಿನಗಳಾಗುತ್ತ ಬಂದರೂ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ವಾರಾಬಂದಿ ಮಾಡುವುದನ್ನು ಬಿಟ್ಟು ಮೇಲ್ಭಾಗದ ದೊಡ್ಡ ದೊಡ್ಡ ರೈತರ ಜತೆ ಹೊಂದಾಣಿಕೆ ಮಾಡಿಕೊಂಡು ಅವರ ಹೊಲಗಳಲ್ಲಿ ಭತ್ತ ನಾಟಿ ಮಾಡಿಸಲು ಮುಂದಾಗುತ್ತಿದ್ದಾರೆ. ಕೆಳ ಭಾಗದ ರೈತರ ಪರಿಸ್ಥಿತಿ ಗಂಭೀರವಾಗಿದ್ದು ಇದು ಹೀಗೇ ಮುಂದುವರಿದರೆ ರಸ್ತೆತಡೆ ಸೇರಿದಂತೆ ತಾಲೂಕಿನ ನೀರಾವರಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
 
ರೈತ ಮುಖಂಡರಾದ ನಾರಾಯಣರಾವ್‌, ಶ್ರೀನಿವಾಸ, ರಾದಪ್ಪ, ಮಲ್ಲಿಕಾರ್ಜುನ ಹಿರೇಗೌಡ, ದಾನಪ್ಪಗೌಡ, ಗಾದೆಪ್ಪ ಡೆಂಗಿ, ಶಿವಪ್ಪ ಕೊನ್ನಹಟ್ಟಿ, ವಲಿಬಾಷಾ ಅಗೆದಾಳ, ಶೇಷಗಿರಿರಾವ್‌ ಲಕ್ಷ್ಮೀಕ್ಯಾಂಪ್‌, ಸತ್ಯಪ್ಪ, ಅಯ್ಯನಗೌಡ ಉಗ್ರಾಣ ಸೇರಿ ಅನೇಕ ರೈತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next