Advertisement

ICC ಹೊಸ ನಿಯಮ: ನಿವೃತ್ತಿ ಘೋಷಿಸಿದ ಅಂತರಾಷ್ಟ್ರೀಯ ಕ್ರಿಕೆಟ್‌ನ ಮೊದಲ ತೃತೀಯ ಲಿಂಗಿ

11:14 AM Nov 22, 2023 | Team Udayavani |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) ಮಂಗಳವಾರ(ನ.21 ರಂದು) ಪುರುಷ ಲಕ್ಷಣ ಹೊಂದಿರುವ ವ್ಯಕ್ತಿಗಳು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಿಳಿಸಿದೆ. ಈ ನಿಯಮದಿಂದ ಇದೀಗ ತೃತೀಯ ಲಿಂಗಿ ಆಟಗಾರರೊಬ್ಬರು ನಿವೃತ್ತಿ ಘೋಷಿಸಿದ್ದಾರೆ.

Advertisement

ಈ ನಿಯಮ ಬಂದ ಕೆಲವೇ ಗಂಟೆಗಳಲ್ಲಿ ಕೆನಡಾ ತಂಡದಲ್ಲಿ ಆಡುತ್ತಿದ್ದ ತೃತೀಯ ಲಿಂಗಿ  ಡೇನಿಯಲ್ ಮೆಕ್‌ಗಾಹೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಇದೇ ವರ್ಷದ ಆರಂಭದಲ್ಲಿ ಕೆನಡಾದ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವ ಮೂಲಕ ಡೇನಿಯಲ್ ಮೆಕ್‌ಗಾಹೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು.

ನಿವೃತ್ತಿ ಘೋಷಿಸಿರುವ ಜೊತೆಗೆ ಜಾಗತಿಕ ಕ್ರಿಕೆಟ್ ಸಂಸ್ಥೆಯ ತೀರ್ಪಿನ ಬಗ್ಗೆ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

“ಐಸಿಸಿ ನಿರ್ಧಾರವನ್ನು ಅನುಸರಿಸಿ, ನಿರಾಶೆಯಿಂದ ನನ್ನ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವು ಇಲ್ಲಿಗೆ ಮುಗಿದಿದೆ ಎಂದು ಹೇಳುತ್ತಿದ್ದೇನೆ. ಆರಂಭವಾದದ್ದು ಕೊನೆಗೊಳ್ಳಲೇ ಬೇಕು. ನನ್ನ ಪ್ರಯಾಣದಲ್ಲಿ ಜೊತೆಯಾಗಿ, ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನನ್ನ ತಂಡದ ಸಹ ಆಟಗಾರರು, ಎದುರಾಳಿ ತಂಡಗಳು, ಕ್ರಿಕೆಟ್ ಸಮುದಾಯ ಮತ್ತು ನನ್ನ ಪ್ರಾಯೋಜಕರಿಗೆ ಧನ್ಯವಾದಗಳೆಂದು” 29 ವರ್ಷದ ಮೆಕ್‌ಗಾಹೆ ಬರೆದಿದ್ದಾರೆ.

Advertisement

ಐಸಿಸಿ ನಿರ್ಧಾರ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿರುವ ಅವು, “ಐಸಿಸಿಯ ನಿರ್ಧಾರ ಈಗಿನ ಕಾಲಕ್ಕೆ  ಅಪ್ರಸ್ತುತವಾಗಿವೆ. ಇದರಿಂದ ಲಕ್ಷಾಂತರ ತೃತೀಯ ಲಿಂಗಿಗಳಿಗೆ ಯಾವ ಸಂದೇಶ ಹೋಗುತ್ತದೆ ಎನ್ನುವುದು ಮುಖ್ಯವಾಗಿ ಗಮನಿಸಬೇಕು. ಈ ಸಂದೇಶ ನಾವು ಇಲ್ಲಿಗೆ ಸೇರಿದವರಲ್ಲ ಎನ್ನುವುದನ್ನು ಸಾರುತ್ತದೆ. ನಾನು ಭರವಸೆ ನೀಡುತ್ತೇನೆ, ಸಮಾನತೆಗಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ. ಕ್ರೀಡೆಯಲ್ಲಿ, ನಾವು ಅತ್ಯುನ್ನತ ಮಟ್ಟದಲ್ಲಿ ಕ್ರಿಕೆಟ್ ಆಡುವ ಹಕ್ಕನ್ನು ಹೊಂದಿದ್ದೇವೆ. ನಾವು ಕ್ರೀಡೆಯ ಸಮಗ್ರತೆ ಅಥವಾ ಸುರಕ್ಷತೆಗೆ ಬೆದರಿಕೆಯಲ್ಲ” ಎಂದು ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಐಸಿಸಿಯ ಹೊಸ ನಿಯಮವೇನು?:

ಐಸಿಸಿಯೊಳಗೆ ನಡೆದ ಆಂತರಿಕ ವಿಚಾರ ವಿನಿಮಯ, ಪರಿಶೀಲನೆಯ ಅನಂತರ, ಯಾವುದೇ ವಿಧದಲ್ಲಿ ಪುರುಷ ಲಕ್ಷಣ ಹೊಂದಿರುವ ವ್ಯಕ್ತಿಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಿಳಿಸಿದೆ. ಒಂದು ವೇಳೆ ಸಂಬಂಧಪಟ್ಟ ವ್ಯಕ್ತಿಗಳು ಲಿಂಗ ಪರಿವರ್ತನೆ, ಲಿಂಗ ಮರುಜೋಡಣೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿರಲಿ, ಮಾಡಿಸಿಕೊಳ್ಳದೇ ಇರಲಿ, ಅವು ಯಾವುವನ್ನೂ ಪರಿಗಣಿಸದೇ ಅಂತಹ ಕ್ರಿಕೆಟಿಗರನ್ನು ಮಹಿಳಾ ಕ್ರಿಕೆಟ್‌ನಿಂದ ನಿಷೇಧಿಸಲಾಗುತ್ತದೆ ಎಂದು ಐಸಿಸಿ ಹೇಳಿದೆ.

ಮಹಿಳಾ ಕ್ರಿಕೆಟಿಗರ ಸಮಗ್ರತೆಯನ್ನು ಕಾಪಾಡಲು, ಆಟಗಾರರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ದೇಶಿ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಆಯಾ ಮಂಡಳಿಗಳಿಗೆ ಬಿಡಲಾಗಿದೆ. ಅವು ತಮ್ಮ ನೆಲದಲ್ಲಿರುವ ಕಾನೂನಿಗೆ ತಕ್ಕಂತೆ ತೀರ್ಮಾನ ಮಾಡಬಹುದು ಎಂದು ಐಸಿಸಿ ಹೇಳಿದೆ.

ಯಾರು ಈ ಮೆಕ್‌ಗಾಹೆ:

ಏಪ್ರಿಲ್ 14, 1994 ರಂದು ಆಸ್ಟ್ರೇಲಿಯಾದಲ್ಲಿ ಜನಿಸಿದ ಮೆಕ್‌ಗಾಹೆ, ಫೆಬ್ರವರಿ 2020 ರಲ್ಲಿ ಆಸ್ಟ್ರೇಲಿಯಾದಿಂದ ಕೆನಡಾಕ್ಕೆ ಹೋಗಿ ನೆಲೆಸಿದರು. ಅದೇ ವರ್ಷದ ನವೆಂಬರ್‌ನಲ್ಲಿ ಸಾಮಾಜಿಕವಾಗಿ ಪರಿವರ್ತನೆಗೊಂಡು,  ಮತ್ತು ಮೇ 2021 ರಲ್ಲಿ ಅವರ ವೈದ್ಯಕೀಯ ಪರಿವರ್ತನೆಯನ್ನು ಪ್ರಾರಂಭಿಸಿದರು.

ಆ ಬಳಿಕ ದೇಶೀಯ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದದರು. ಮಹಿಳಾ T20 ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪಂದ್ಯಾವಳಿಯ ಏಕೈಕ ಶತಕ ಸೇರಿದಂತೆ ಮೂರು ಇನ್ನಿಂಗ್ಸ್‌ಗಳಲ್ಲಿ 237 ರನ್‌ ಗಳಿಸಿ ಗಮನ ಸೆಳೆದರು. ಅಕ್ಟೋಬರ್‌ನಲ್ಲಿ ನಡೆದ 2024 ರ ಮಹಿಳಾ T20 ವಿಶ್ವಕಪ್ ಕ್ವಾಲಿಫರ್‌ನಲ್ಲಿ ಕೆನಡಾ ಪರ ಆಡಿದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಕೆನಡಾ ಪರ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 6 ಪಂದ್ಯಗಳನ್ನು ಆಡಿ, 118 ರನ್ ಗಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next