ಒಟ್ಟಾವಾ: ಕೆನಡಾದ ಬೋಚಸನ್ವಾಸಿ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ದೇವಾಲಯದ ಗೋಡೆಗಳ ಮೇಲೆ ಮಂಗಳವಾರ ಅಪರಿಚಿತ ದುಷ್ಕರ್ಮಿಗಳು ಭಾರತ ವಿರೋಧಿ ಘೋಷಣೆಗಳನ್ನು ಬರೆದಿದ್ದಾರೆ.
ಭಾರತದ ಹೈ ಕಮಿಷನ್ ಅಧಿಕಾರಿಗಳು ಘಟನೆಯನ್ನು ಬಲವಾಗಿ ಖಂಡಿಸಿದ್ದು,ಕೆನಡಾದ ಉನ್ನತ ಅಧಿಕಾರಿಗಳ ಬಳಿ ವಿಚಾರವನ್ನು ಪ್ರಸ್ತಾವಿಸಿ ತನಿಖೆ ನಡೆಸಿ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ದೇವಾಲಯದ ಗೋಡೆಗಳಲ್ಲಿ ಖಾಲಿಸ್ಥಾನ ಬೆಂಬಲಿಸಿ ಬರೆಯಲಾದ ಬರಹಗಳ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಬ್ರಾಂಪ್ಟನ್ ಮೇಯರ್ ಪ್ಯಾಟ್ರಿಕ್ ಬ್ರೌನ್ ಅವರು ಘಟನೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು,“ಟೊರೊಂಟೊದ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದಲ್ಲಿ ನಡೆದ ವಿಧ್ವಂಸಕ ಕೃತ್ಯವನ್ನು ಕೇಳಿ ತುಂಬಾ ನೋವಾಗಿದೆ. ಈ ರೀತಿಯ ದ್ವೇಷಕ್ಕೆ ಜಿಟಿಎ ಅಥವಾ ಕೆನಡಾದಲ್ಲಿ ಸ್ಥಾನವಿಲ್ಲ. ತಪ್ಪಿತಸ್ಥರನ್ನು ಶೀಘ್ರವಾಗಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಆಶಿಸೋಣ” ಎಂದು ಟ್ವೀಟ್ ಮಾಡಿದ್ದಾರೆ.
“ಮಂದಿರದಲ್ಲಿ ನಡೆದ ವಿಧ್ವಂಸಕ ಕೃತ್ಯದಿಂದ ನಾನು ವಿಚಲಿತನಾಗಿದ್ದೇನೆ. ನಾವು ಬಹುಸಾಂಸ್ಕೃತಿಕ ಮತ್ತು ಬಹು-ನಂಬಿಕೆಯ ಸಮುದಾಯದಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ಪ್ರತಿಯೊಬ್ಬರೂ ಸುರಕ್ಷಿತವಾಗಿರಲು ಅರ್ಹರಾಗಿರುತ್ತಾರೆ. ಅವರ ಕೃತ್ಯಗಳ ಪರಿಣಾಮಗಳನ್ನು ಎದುರಿಸಲು ಹೊಣೆಗಾರರನ್ನು ಪತ್ತೆಹಚ್ಚಬೇಕು ”ಎಂದು ಬ್ರಾಂಪ್ಟನ್ ದಕ್ಷಿಣ ಸಂಸದೆ ಸೋನಿಯಾ ಸಿಧು ಹೇಳಿದ್ದಾರೆ.