ಕೆನಡಾ: ಭಾರತದ ವಿರುದ್ಧ ರಾಜತಾಂತ್ರಿಕ ಸಂಬಂಧದಲ್ಲಿ ಘರ್ಷಣೆಗೆ ಇಳಿದಿರುವ ಪ್ರಧಾನಿ ಟ್ರುಡೋ ರಾಜೀನಾಮೆ ನೀಡುವಂತೆ ಲಿಬರಲ್ ಪಕ್ಷದ ಸಂಸದರು ಒತ್ತಾಯಿಸಿದ್ದು, ಅಕ್ಟೋಬರ್ 28ರ ಅಂತಿಮ ಗಡುವು ವಿಧಿಸಿರುವುದಾಗಿ ವರದಿ ತಿಳಿಸಿದೆ.
ಪಾರ್ಲಿಮೆಂಟ್ ಹಿಲ್ ನಲ್ಲಿ ನಡೆದ ಗೌಪ್ಯ ಸಭೆಯಲ್ಲಿ ತನ್ನದೇ ಲಿಬರಲ್ ಪಕ್ಷದ ಸಂಸದರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿರುವುದಾಗಿ ಸಿಬಿಸಿ ವರದಿ ವಿವರಿಸಿದೆ.
ಪಕ್ಷದೊಳಗೆ ಭಾರೀ ಒತ್ತಡ ಎದುರಿಸುತ್ತಿರುವ ಜಸ್ಟಿನ್ ಟ್ರುಡೋಗೆ ಬಂಡಾಯ ಎದ್ದ ಸಂಸದರು ಅಕ್ಟೋಬರ್ 28ರೊಳಗೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಅಂತಿಮ ಗಡುವು ವಿಧಿಸಿದ್ದಾರೆ.
ಬುಧವಾರ ನಡೆದ ಸಭೆಯಲ್ಲಿ ಟ್ರುಡೋ ರಾಜೀನಾಮೆಗೆ ಒತ್ತಾಯಿಸಲಾಗಿತ್ತು. ಆದರೆ ಒಂದು ವೇಳೆ ಅಂತಿಮ ಗಡುವಿನೊಳಗೆ ರಾಜೀನಾಮೆ ನೀಡದಿದ್ದಲ್ಲಿ ಮುಂದಿನ ನಿಲುವು ಏನು ಎಂಬುದರ ಬಗ್ಗೆ ಸ್ಪಷ್ಟವಾಗಿ ಲಿಬರಲ್ ಪಕ್ಷದ ಸಂಸದರು ತಿಳಿಸಿಲ್ಲ ಎಂದು ವರದಿ ಹೇಳಿದೆ.
ರೇಡಿಯೋ ಕೆನಡಾ ಜತೆ ಮಾತನಾಡಿರುವ ಮೂಲಗಳ ಪ್ರಕಾರ, ಲಿಬರಲ್ ಪಕ್ಷದ ಮುಖಂಡ ಟ್ರುಡೋ ಪ್ರಧಾನಿ ಗದ್ದುಗೆಯಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿ 24 ಮಂದಿ ಸಂಸದರು ಸಹಿ ಹಾಕಿರುವುದಾಗಿ ತಿಳಿಸಿದೆ.