ನಿನ್ನನ್ನು ಮನಸ್ಸಿಗೆ ಹಚ್ಚಿಕೊಂಡ ಮೇಲೆ ಹೃದಯದಲ್ಲಿ ಬರೀ ಪ್ರೇಮಗೀತೆಗಳೇ ಪ್ಲೇ ಆಗುತ್ತಿವೆ. ಅನುಮಾನ ಬೇಡ, ನನ್ನಂಥ ಒಳ್ಳೆ ಹುಡುಗ ಬೆಂಗಳೂರಿನಲ್ಲಿ ಸಿಗುವುದಿಲ್ಲ. ಪ್ರೀತಿ ಎಂಬ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸು.
ಅವತ್ತು ಈ ಮಾಯಾನಗರಿಯಲ್ಲಿ ನನ್ನ ಮೊದಲ ದಿನ. ಇಂಟರ್ನ್ಶಿಪ್‌ಗೆ ಅಂತ ಬೆಂಗಳೂರಿಗೆ ಬಂದಿದ್ದೆ. ನೀನು ಬರೋದಕ್ಕಿಂತ ಎರಡು ದಿನ ಮುಂಚೆಯೇ ಆಫೀಸ್‌ಗೆ ಸೇರಿದ್ದೆ ನಾನು. ಮೊದಲೆರಡು ದಿನ ಆ ಹೊಸ ಜಾಗದಲ್ಲಿ ನಂಗೆ ಉಸಿರಾಡಲೂ ಕಷ್ಟ ಅನ್ನಿಸುತ್ತಿತ್ತು. ಹೇಗಪ್ಪಾ ದಿನ ಕಳೆಯೋದು ಅಂತ ಚಿಂತಿಸುತ್ತಿದ್ದಾಗ, ಮೂರನೇ ದಿನ ಬೆಳಗ್ಗೆ ತಂಗಾಳಿಯಂತೆ ಆಫೀಸೊಳಗೆ ಬಂದುಬಿಟ್ಟೆ ನೀನು! ಅವತ್ತಿಡೀ ನಿನ್ನನ್ನೇ ನೋಡುತ್ತಾ ಸಮಯ ಕಳೆದಿದ್ದೇ ಗೊತ್ತಾಗಲಿಲ್ಲ.
ಮೊದಲ ದಿನವೇ ಮನಸ್ಸು ಕದ್ದ ನೀನು, ಮಂಗಳೂರಿನಿಂದ ಬಂದ ಬಾಂಗಡೆ ಮೀನು ಅಂತ ಗೊತ್ತಾಯ್ತು. ಮಂಗಳೂರಿನವರು ಚಂದ ಇರ್ತಾರೆ ಅಂತ ಕೇಳಿದ್ದೆ, ಆದರೆ ಇಷ್ಟೊಂದ್ ಚಂದ ಇರ್ತಾರೆ ಅಂತ ಗೊತ್ತಿರಲಿಲ್ಲ. ನಿನ್ನ ತುಳು ಮಿಶ್ರಿತ ಕನ್ನಡ ನನ್ನ ತಲೆ ಕೆಡಿಸಿದೆ. ನಸುನಗೆಯ ಆ ಕೆಂದುಟಿ, ತುಸುವೇ ಕೆಂಪಾಗಿ ಕಾಣುವ ಕೆನ್ನೆ, ಜೀನ್ಸ್ ಧರಿಸಿ ಬರುವ ಆ ನಿನ್ನ ಸ್ಟೈಲು, ನಕ್ಷತ್ರದಂತೆ ಹೊಳೆಯುವ ಕಂಗಳು.. ಇನ್ನೇನು ಬೇಕು ಬ್ರಹ್ಮಚಾರಿ ಹುಡುಗನೊಬ್ಬನ ದಿಲ್ ಹಾಳಾಗೋದಕ್ಕೆ?
ನೀನು ಆವತ್ತು ಮೆಟ್ಟಿಲು ಹತ್ತಿಕೊಂಡು ಬಂದಿದ್ದು ಬರೀ ಆಫೀಸಿಗಲ್ಲ, ನೇರವಾಗಿ ನನ್ನ ಹೃದಯದೊಳಕ್ಕೇ ಬಂದಿದ್ದೀಯ! ನೀನು ಬಂದ ಮೇಲೆ ಆಫೀಸ್‌ಗೊಂದು ಕಳೆ ಬಂದಿದೆ. ಇಂಟರ್ನ್ಶಿಪ್ ಅಲ್ವಾ, ನಡಿಯುತ್ತೆ ಬಿಡು ಅಂತ ಸೋಮಾರಿಯಾಗಿದ್ದ ನನ್ನೊಳಗೊಬ್ಬ ಜಂಟಲ್‌ವುನ್ ಹುಟ್ಟಿಕೊಂಡಿದ್ದಾನೆ. ದಿನಾ ಬೆಳಗ್ಗೆ ಎದ್ದು ಇಸಿŒ ಮಾಡಿದ ಅಂಗಿ ಹಾಕಿ, ಸಮಯಕ್ಕೆ ಸರಿಯಾಗಿ ಆಫೀಸಿಗೆ ಬರುವಷ್ಟು ಒಳ್ಳೆಯವನಾಗಿದ್ದೇನೆ ನಾನು. ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ, ರೈತರ ಸಾಲ ಅರ್ಧದಷ್ಟು ಮನ್ನಾ ಆಗಿದೆ. ವಿರೋಧ ಪಕ್ಷಗಳೇ ಮುನಿಸು ಮರೆತು ಒಂದಾಗಿ ಸರ್ಕಾರ ನಡೆಸುತ್ತಿವೆ!
ಇಷ್ಟೆಲ್ಲಾ ಒಳ್ಳೆಯದಾಗಿರುವಾಗ ನೀನು ಮಾತ್ರ ನನ್ನ ಪ್ರೇಮ ಪತ್ರಕ್ಕೆ ಉತ್ತರ ಹೇಳದೆ, ಸೈಲೆಂಟ್ ಆಗೇ ಉಳಿದಿದೀಯ! ನಿನ್ನನ್ನು ಮನಸ್ಸಿಗೆ ಹಚ್ಚಿಕೊಂಡ ಮೇಲೆ ಹೃದಯದಲ್ಲಿ ಬರೀ ಪ್ರೇಮಗೀತೆಗಳೇ ಪ್ಲೇ ಆಗುತ್ತಿವೆ. ಇಬ್ಬರೂ ಹೊಸದಾಗಿ ಬೆಂಗಳೂರಿಗೆ ಬಂದಿದ್ದೇವೆ. ಕಬ್ಬನ್‌ಪಾರ್ಕ್, ಲಾಲ್‌ಬಾಗ್, ನಂದಿ ಬೆಟ್ಟ…ಸುತ್ತಾಡೋಕೆ ಎಷ್ಟೊಂದೆಲ್ಲಾ ಜಾಗಗಳಿವೆ. ಅನುಮಾನ ಬೇಡ, ನನ್ನಂಥ ಒಳ್ಳೆ ಹುಡುಗ ಬೆಂಗಳೂರಿನಲ್ಲಿ ಸಿಗುವುದಿಲ್ಲ. ಪ್ರೀತಿ ಎಂಬ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸು.
ಯಾನ್ ನಿಕ್ಕೋಸ್ಕರ ಕಾತೊಂದುಪ್ಪುವೆ, ಪ್ಲೀಸ್ ನನ್ ಲವ್ ಮಾಲ್ಪುವ ಅತಾ ಬಾಂಗಡೆ..
– ಲೋಕೇಶ ಡಿ. ಶಿಕಾರಿಪುರ