Advertisement
ಗೆಳತಿ,ಪರಿಚಯವಾದಾಗ ನಮ್ಮಿಬ್ಬರಿಗೂ ಹದಿ ಹರೆಯದ ವಯಸ್ಸು. ನಾವಾಗ ಪಿಯುಸಿ ಓದುತ್ತಿದ್ದೆವು. ಹಳ್ಳಿಯಲ್ಲಿ ಎಸ್‌ಎಸ್‌ಎಲ್‌ಸಿ ಓದಿ ಬಂದ ನಾನು, ಓದಿನಲ್ಲಿ ನಿನಗಿಂತ ದಡ್ಡನೇ. ಅರ್ಧವಾರ್ಷಿಕ ಪರೀಕ್ಷೆಯ ದಿನ ಏನು ಬರೆಯಬೇಕೆಂದು ಗೊತ್ತಾಗದೆ ಕಣ್ ಕಣ್ ಬಿಡುತ್ತ ಕುಳಿತಿದ್ದ ನನಗೆ, ನೀನು ಉತ್ತರ ಪತ್ರಿಕೆಯನ್ನೇ ಎತ್ತಿ ಕೊಟ್ಟಿದ್ದೆ!
ಹಾಗೂ ಹೀಗೂ ಪರೀಕ್ಷೆ ಮುಗಿಯಿತು. ನಾವಿಬ್ಬರೂ ಪರಸ್ಪರ ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದೇವೆ ಅಂತ ನಮಗೆ ಅರ್ಥವಾಗಿದ್ದೇ ಆಗ. ಎರಡು ತಿಂಗಳ ರಜೆಯಲ್ಲಿ ಒಬ್ಬರನ್ನೊಬ್ಬರು ನೋಡದೆಯೇ ಇರಬೇಕಲ್ಲ ಅನ್ನೋ ನೋವು ಇಬ್ಬರನ್ನೂ ಕಾಡತೊಡಗಿತು. ಆಗ ನೀನೇ ಬಂದು, “ನಿನ್ನ ನಂಬರ್ ಕೊಡು’ ಅಂತ ಕೇಳಿದೆ. ಎರಡನೇ ವರ್ಷದ ಪಿ.ಯು.ಸಿ ಕ್ಲಾಸುಗಳು ಪ್ರಾರಂಭವಾದ ಮೇಲೆ, ನಾವು ಕ್ಲಾಸ್‌ನಲ್ಲಿ ಕುಳಿತಿದ್ದಕ್ಕಿಂತ ಹೊರಗಡೆ ಸುತ್ತಾಡಿದ್ದೇ ಹೆಚ್ಚು. ನಾವಿಬ್ಬರೂ ಅಗಲುವುದೇ ಇಲ್ಲ ಅಂತ ಭಾವಿಸಿದ್ದು, ಕೆಲವೇ ದಿನಗಳಲ್ಲಿ ಸುಳ್ಳಾಯಿತು. ಪರೀಕ್ಷೆ ಮುಗಿಯಿತು. ಇಬ್ಬರೂ ಪದವಿ ಓದಲು ಬೇರೆ ಬೇರೆ ಕಾಲೇಜಿನ ದಾರಿ ಹಿಡಿದೆವು. ಒಂದೆರಡು ತಿಂಗಳು ಎಲ್ಲವೂ ಮೊದಲಿನಂತೇ ಇತ್ತು. ಆಮೇಲೆ ನೀನು ನಿಧಾನಕ್ಕೆ ನನ್ನನ್ನು ನಿರ್ಲಕ್ಷಿಸತೊಡಗಿದೆ. ಮೊದಲು ನನಗದು ಅರ್ಥವೇ ಆಗಲಿಲ್ಲ. ಅರ್ಥವಾಗಿದ್ದರೆ, ಹೇಗಾದರೂ ಮಾಡಿ ನಿನ್ನನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಅರ್ಥವಾಗುವಷ್ಟರಲ್ಲಿ, ಎಲ್ಲವೂ ನನ್ನ ಕೈ ಮೀರಿ ಹೋಗಿತ್ತು.
Related Articles
Advertisement
ಕೆಂಚಪ್ಪ ಎಸ್. ಮುಮ್ಮಿಗಟ್ಟಿ