“ವಲ್ಡ್ ಫೋಟೊಗ್ರಫಿ ಡೇ’ (ಆ.19ಕ್ಕೆ) ಮತ್ತೆ ಎದುರು ನಿಂತಾಗಿದೆ. ದಿನಪತ್ರಿಕೆಯ ಫೋಟೋಗ್ರಾಫರ್‌ನ ಕ್ಯಾಮೆರಾವಂತೂ ಕಣ್ಣು ಮಚ್ಚುವುದೇ ಇಲ್ಲ. ನೆರೆಬಂದು, ಅಣೆಕಟ್ಟಿನ ಬುಡದಲ್ಲಿ ಪ್ರವಾಹ ಸೃಷ್ಟಿಯಾಗಿ, ಊರೆಲ್ಲ ತೊಳೆದು ಹೋದಾಗ, ಆ ಚಿತ್ರ ತೆಗೆಯುವ ಸಂಕಟ ಹೇಗಿತ್ತು ಎಂಬುದರ ಈ ಪ್ರತ್ಯಕ್ಷ ಚಿತ್ರಣ ಲೆನ್ಸಿನ ಕಣ್ಣಲ್ಲೂ ನೀರು ಜಿನುಗಿಸುವಂತಿದೆ…
ಬಾಗಲಕೋಟೆ ಜಿಲ್ಲೆಗೂ ಪ್ರವಾಹಕ್ಕೂ ಹೊಸ ನಂಟೇನೂ ಇಲ್ಲ. ನಾವೆಲ್ಲ ಆಲಮಟ್ಟಿ ಜಲಾಶಯದ ಹಿನ್ನೀರಿನ ಆಕ್ರಮಣದಿಂದಾಗಿ ಬದುಕು ಕಳಕೊಂಡವರು. ಹೊಸ ಬದುಕು ಹುಡುಕುತ್ತಾ ಬಾಗಲಕೋಟೆಗೆ ಬಂದವ ನಾನು. ಅಂದು ಹೊಲ- ಮನೆ ಮುಳುಗಿದ ಬಳಿಕ ಫೋಟೋಗ್ರಫಿ ವೃತ್ತಿಗೆ ಇಳಿದೆ.
ನಮ್ಮ ಜಿಲ್ಲೆಗೆ ಮಲಪ್ರಭೆ, ಘಟಪ್ರಭೆ ಹಾಗೂ ಕೃಷ್ಣೆ ಜೀವ ನದಿಗಳು. ಈ ನದಿಗಳಲ್ಲಿ ಎರಡು ಬಾರಿ ಬಂದಿದ್ದ ಪ್ರವಾಹ ನಾನು ಕಣ್ಣಾರೆ ಕಂಡಿದ್ದೆ. ಆಗಲೂ ಮುಳುಗಿದ ಹಲವು ಗ್ರಾಮಗಳ, ಜನ ಜೀವನ ಅಭದ್ರಗೊಂಡ ಜನರ ಬದುಕಿನ ಚಿತ್ರಣಗಳ ಸೆರೆ ಹಿಡಿದಿದ್ದೆ. ಆದರೆ, ನನ್ನ 22 ವರ್ಷಗಳ ಈ ವೃತ್ತಿಯಲ್ಲಿ ಈ ಬಾರಿ ಬಂದಂಥ ಪ್ರವಾಹ ಎಂದೂ ಕಂಡಿರಲಿಲ್ಲ. ಮೂರೂ ನದಿಗಳೂ ಒಮ್ಮೆಲೇ ಉಕ್ಕಿ ಬಂದವು. ಅರ್ಧ ಗಂಟೆಯಲ್ಲೇ ಸ್ವತ್ಛಂದವಾಗಿದ್ದ ಗ್ರಾಮಗಳ ಬದುಕನ್ನು ಸ್ಮಶಾನ ಮೌನವನ್ನಾಗಿಸಿಬಿಟ್ಟವು. ಪ್ರವಾಹದ ಆ ರೌದ್ರ ಚಿತ್ರ ಸೆರೆ ಹಿಡಿಯಲು ಹೋಗಿದ್ದ ನನ್ನ ಕೈಗಳು ನಡುಗುತ್ತಿದ್ದವು. “ಸಂಕಷ್ಟದಲ್ಲಿದ್ದವರ ಕೈ ಹಿಡಿದು ಮೇಲೆತ್ತಲಾ? ನನ್ನ ವೃತ್ತಿಗಾಗಿ ಕ್ಯಾಮೆರಾ ಹಿಡಿದು ಪಟ ಪಟನೇ ಫೋಟೋ ತಗೆಯಲಾ?’ ಎಂಬ ಗೊಂದ ಮೂಡುತ್ತಲೇ ಇತ್ತು. ಆದರೂ, ಒಂದು ಫೋಟೋ ತೆಗೆದು, ಕೈ ಹಿಡಿದು ನಡೆದ ಅನುಭವ ನನ್ನದಾಗಿತ್ತು.
ಕೆಲವು ದೃಶ್ಯಗಳನ್ನು ಈಗಲೂ ನನ್ನ ಕಣ್ಣಿಂದ ಅಳಿದು ಹೋಗುತ್ತಿಲ್ಲ. ಅದಾಗಲೇ ಜಿಲ್ಲೆಯ 193 ಗ್ರಾಮಗಳು ಅಕ್ಷರಶಃ ನೀರಿನಲ್ಲಿ ನಿಂತಿದ್ದವು. ಯಾವ ಊರಿಗೆ ಹೋಗಬೇಕು, ಯಾರ ಸಂಕಷ್ಟ ಚಿತ್ರ ತೆಗೆಯಬೇಕು ಎಂಬ ಗೊಂದಲ. ಮೊದಲ ಬಾರಿಗೆ ನಾನು ಹೋಗಿದ್ದು, ಜಮಖಂಡಿಯ ಹಿರೇಪಡಸಲಗಿ ಗ್ರಾಮಕ್ಕೆ. ಅಲ್ಲಿನ ಕುರನ್ ವಸ್ತಿ ಮತ್ತು ಬಿದರಿ ವಸ್ತಿಯ ಜನರು, ಕೈಯಲ್ಲಿ ಕೊಡ, ಆಡು ಹಿಡಿದು, ಎದೆಮಟ್ಟ ನೀರಿನಲ್ಲಿ ನಡೆಯುತ್ತಾ ಬರುತ್ತಿದ್ದರು. ನಮ್ಮ ಹತ್ತಿರಕ್ಕೆ ಬರುತ್ತಿರುವಾಗಲೇ ನೀರಿನಲ್ಲಿದ್ದ ಆಳ ಕಾಣದೇ ವ್ಯಕ್ತಿಯೊಬ್ಬ ಕಾಲು ಜಾರಿ, ಆಳಕ್ಕೆ ಹೋದ. ನಾನೂ ಮೊಣಕಾಲುದ್ದದ ನೀರಿನಲ್ಲಿದ್ದೆ. ಆ ವ್ಯಕ್ತಿಯ ಒಂದು ಫೋಟೊ ಸೆರೆ ಹಿಡಿದು, ಮುಂದೆ ಓಡಿದೆ. ಅಷ್ಟೊತ್ತಿಗೆ ನನ್ನೊಂದಿಗೆ ಇದ್ದ ನಮ್ಮ ವರದಿಗಾರರು, ಕೆಲ ಸ್ನೇಹಿತರು, ಗ್ರಾಮದ ಕೆಲ ಯುವಕರು, ಓಡಿಬಂದು ಆತನನ್ನು ರಕ್ಷಿಸಿದರು.
ಅದೇ ಹಿರೇಪಡಸಲಗಿಯ ಬಿದರಿ ವಸ್ತಿಯ ಗಂಗವ್ವ ಎಂಬ 85ರ ವೃದ್ಧೆ, ತನ್ನ ಆಡು ಮತ್ತು ಮರಿಯೊಂದಿಗೆ ಶೆಡ್‌ನಲ್ಲಿದ್ದರು. ಯಾರು ಎಷ್ಟೇ ಹೇಳಿದರೂ ಹೊಳೆಯ ದಂಡೆಯಿಂದ ಪರಿಹಾರ ಕೇಂದ್ರಕ್ಕೆ ಬರುತ್ತಿರಲಿಲ್ಲ. ಕೊನೆಗೆ ಸೈನಿಕರು ಆ ಅಜ್ಜಿಯನ್ನು ಹೊತ್ತು ಟ್ಯಾಕ್ಟರ್ ಏರಿಸಿದರು. ಪರಿಹಾರ ಕೇಂದ್ರಕ್ಕೆ ತಂದರು. ಆಗ ಅಜ್ಜಿಯ ಕಣ್ಣಲ್ಲಿ ನೀರು ದಳದಳನೆ ಹರಿಯುತ್ತಿತ್ತು. “ನನ್ನ ಆಡು ಎಲ್ಲಿದೆ ನೋಡ್ರಿ…’ ಎಂದು ಮೂಕ ಪ್ರಾಣಿಯ ಕಾಳಜಿ ಮಾಡುತ್ತಿದ್ದಳೇ ಹೊರತು, ತನ್ನ ಪ್ರಾಣದ ಬಗ್ಗೆ ಚಿಂತೆ ಮಾಡುತ್ತಿರಲಿಲ್ಲ. ಅಜ್ಜಿಯ ಕೈ ಹಿಡಿದು ಕಟ್ಟೆಯ ಮೇಲೆ ಕೂಡಿಸುವ ವೇಳೆ ನನ್ನ ಹೃದಯ ಒಡೆದಿತ್ತು.
ಇನ್ನೊಂದು ನನ್ನ ಮನಸ್ಸಿಗೆ ದೊಡ್ಡ ಆಘಾತ ಮೂಡಿಸಿದ್ದು ಮುಧೋಳ ತಾಲೂಕು ಜೀರಗಾಳದ ತಂದೆ-ಮಗನ ಘಟನೆ. ಶ್ರೀಶೈಲ ಉಪ್ಪಾರ ಮತ್ತು ರಮೇಶ ಉಪ್ಪಾರ ಎಂಬ ತಂದೆ-ಮಗ ಇಬ್ಬರೂ ತಮ್ಮ ಜಾನುವಾರು ರಕ್ಷಿಸಲು ಹೋಗಿ ಪ್ರವಾಹದಲ್ಲಿ ಸಿಲುಕಿದ್ದರು. ನಸುಕಿನ 5 ಗಂಟೆಯಿಂದ ಮಧ್ಯಾಹ್ನ 2ರ ವರೆಗೂ ಜೀವ ಕೈಯಲ್ಲಿ ಹಿಡಿದು ಘಟಪ್ರಭಾ ನದಿಯ ಚಿಚಖಂಡಿ ಸೇತುವೆ ಬಳಿ ಇರುವ ಎತ್ತರದ ಪ್ರದೇಶದಲ್ಲಿದ್ದರು. ಅವರ ಸುತ್ತಲೂ 2.27 ಲಕ್ಷ ಕ್ಯೂಸೆಕ್ ನೀರಿನೊಂದಿಗೆ ಘಟಪ್ರಭಾ ನದಿ ಅತಿವೇಗವಾಗಿ ಹರಿಯುತ್ತಿತ್ತು. ಕ್ಷಣಕ್ಷಣಕ್ಕೂ ನದಿಯ ನೀರು ಹೆಚ್ಚುತ್ತಲೇ ಇತ್ತು. ಅವರಿಬ್ಬರು ಕಣ್ಣೆದುರು ಕಾಣುತ್ತಿದ್ದರೂ, ನದಿಯಲ್ಲಿ ಈಜಿ ದಡಕ್ಕೆ ತರುವ ಪರಿಸ್ಥಿತಿ ಇರಲಿಲ್ಲ. ನಡುಗಡ್ಡೆಯಲ್ಲಿದ್ದ ಅವರಿಬ್ಬರೂ, “ಹೇಗಾದ್ರೂ ಮಾಡಿ, ನಮ್ಮನ್ನು ಕಾಪಾಡಿ’ ಎಂದು ಕೂಗುತ್ತಿದ್ದರು. ದಡದಲ್ಲಿ ನಿಂತು ಅವರ ಫೋಟೋ ಚಿತ್ರಿಸುವಾಗ, ಒಳಗೊಳಗೇ ಚಿತ್ರಹಿಂಸೆ. ಅಷ್ಟೊತ್ತಿಗೆ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಹರೀಶ ಡಿ.ವಿ. ಮತ್ತು ಮುಧೋಳ ಪಿಎಸ್‌ಐ ಶ್ರೀಶೈಲ ಬ್ಯಾಕೋಡ ಸರ್ ಬಂದು, ಅವರಿಬ್ಬರಿಗೆ ಮರು ಜನ್ಮ ಕೊಟ್ಟರು.
– ವಿಠ್ಠಲ ಮೂಲಿಮನಿ
ಉದಯವಾಣಿ ಫೋಟೋಗ್ರಾಫರ್, ಬಾಗಲಕೋಟೆ