ಹೊಸದಿಲ್ಲಿ : ವೆಬ್‌ಸೈಟ್‌ಗಳಲ್ಲಿ ಲೈಂಗಿಕ ಹಿಂಸೆಯ ವಿಡಿಯೋ ಅಪ್ ಲೋಡ್ ಮಾಡುವುದನ್ನು ತಡೆಯಲು ಸಾಧ್ಯವೇ ಎಂದು ತಿಳಿಸುವಂತೆ ಸುಪ್ರೀಂ ಕೋರ್ಟ್ ಇಂದು ಇಂಟರ್‌ನೆಟ್ ಸೇವಾ ಪೂರೈಕೆದಾರ ಗೂಗಲ್ ಸಂಸ್ಥೆಯನ್ನು ಕೇಳಿಕೊಂಡಿದೆ.
ಲೈಂಗಿಕ ಹಿಂಸೆಯ ವಿಡಿಯೋಗಳನ್ನು ಅಪ್ ಲೋಡ್ ಮಾಡುವ ಪ್ರಕ್ರಿಯೆಯನ್ನು ತಡೆಯುವ ಬಗ್ಗೆ ಗೂಗಲ್ ಸಂಸ್ಥೆಯೊಳಗೆ ಯಾವ ರೀತಿಯ ವ್ಯವಸ್ಥೆ ಇದೆ; ವೆಬ್‌ಸೈಟ್‌ಗಳಿಗೆ ಅಂತಹ ಅಶ್ಲೀಲ ವಿಡಿಯೋ ಅಪ್ ಲೋಡ್ ಮಾಡುವುದನ್ನು ಎಷ್ಟರ ಮಟ್ಟಿಗೆ ಗುರುತಿಸಲು ಮತ್ತು ತಡೆಯಲು ಸಾಧ್ಯವಿದೆ ಎಂದು ಜಸ್ಟಿಸ್ ಎಂ ಬಿ ಲೋಕೂರ್ ಮತ್ತು ಯು ಯು ಲಲಿತ್ ಅವರನ್ನು ಒಳಗೊಂಡ ಪೀಠವು ಗೂಗಲ್ ಸಂಸ್ಥೆಯನ್ನು ಕೇಳಿತು.
“ನಾವು ಸರಳವಾಗಿ ನಿಮ್ಮನ್ನು ಕೇಳುತ್ತಿದ್ದೇವೆ – ಅಶ್ಲೀಲ ವಿಡಿಯೋಗಳನ್ನು ವೆಬ್‌ಸೈಟ್‌ಗಳಿಗೆ ಅಪ್‌ಲೋಡ್ ಮಾಡುವುದನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲವೇ?’ ಎಂದು ನ್ಯಾಯ ಪೀಠವು ಗೂಗಲ್ ಇಂಡಿಯಾ ಸಂಸ್ಥೆಯನ್ನು ಪ್ರತಿನಿಧಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಪ್ರಶ್ನಿಸಿತು.
ಈ ವಿಷಯದಲ್ಲಿ ಬೇಷರತ್ ಆಗಿ ಸಹಕರಿಸಲು ಕಂಪೆನಿಯು ಸಿದ್ಧವಿದೆ; ಅಶ್ಲೀಲ ವಿಡಿಯೋಗಳು ಅಪ್‌ಲೋಡ್ ಆದಾಗ ಆ ಬಗ್ಗೆ ಕಂಪೆನಿಗೆ ತಿಳಿಸಿದಲ್ಲಿ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುವುದು ಎಂದು ಸಿಂಘ್ವಿ ಹೇಳಿದರು.
ಆದರೆ ಇಂತಹ ಮಾಹಿತಿಯು ಸರಕಾರದಿಂದ ಅಥವಾ ನ್ಯಾಯ ತೀರ್ಮಾನದ ಅಧಿಕಾರಿಯಿಂದ ಕಂಪೆನಿಗೆ ದೊರಕಬೇಕು; 36 ತಾಸುಗಳ ಒಳಗೆ ಅಂತಹ ಅಶ್ಲೀಲ ವಿಡಿಯೋಗಳನ್ನು ವೆಬ್‌ಸೈಟ್‌ಗಳಿಂದ ಅಳಿಸಿ ಹಾಕಲು ಸಾಧ್ಯವಿದೆ ಎಂದು ಸಿಂಘ್ವಿ ಹೇಳಿದರು.