Advertisement
ದೇವಮಾನವರ ಹಾವಳಿ ದೇಶಕ್ಕೆ ಹೊಸದೇನಲ್ಲ. ದಿ.ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಸಮಗ್ರ ರಾಜಕಾರಣವನ್ನೇ ನಿಯಂತ್ರಿಸುತ್ತಿದ್ದ ಧೀರೇಂದ್ರ ಬ್ರಹ್ಮಚಾರಿ ಎಂಬ ದೇವ ಮಾನವ ತುರ್ತು ಪರಿಸ್ಥಿತಿಯ ಹೇರಿಕೆಯ ಪ್ರಧಾನ ರೂವಾರಿಯಾಗಿದ್ದ ವಿಚಾರ ಎಲ್ಲರಿಗೂ ತಿಳಿದದ್ದೇ. ಇಂದಿರಾ ಅಪಾರ ಚಾಣಾಕ್ಷರಾಗಿದ್ದರೂ ಹೇಗೋ ಏನೋ ಆತನ ಬಲೆಗೆ ಬಿದ್ದು ಒದ್ದಾಡಿದರು. ಅನಂತರ ವಾಸ್ತವವನ್ನರಿತ ಇಂದಿರಾ ಆ ಕಾಲದ ದುಷ್ಟ ಚತುಷ್ಟಯಗಳನ್ನು ದೂರವಿರಿಸಿ ಪುನರಪಿ ಪ್ರಧಾನಿ ಯಾದರು. ಅದು ಇತಿಹಾಸ.
Related Articles
Advertisement
ದಪ್ಪ ಮೀಸೆಯನ್ನು ಬಿಟ್ಟು, ಕನ್ನಡಕ ತೊಟ್ಟು, ಮೋರೆಗೆ ಬಂಗಾರದ ಕಿರೀಟ ತೊಡಿಸಿ,ಅದರ ಅಕ್ಕಪಕ್ಕದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಮಾರುತಿ, ಗಣಪತಿ, ಸುಬ್ರಹ್ಮಣ್ಯ, ದೇವಿ, ಇತ್ಯಾದಿ ದೇವರುಗಳ ಮುಖವನ್ನು ಮುದ್ರಿಸಿಕೊಂಡು ತಾವೇ ಮಹಾವಿಷ್ಣು ಎಂದು ಬಿಂಬಿಸಿಕೊಳ್ಳುವ ಮೂಢರ ಕ್ಯಾಲೆಂಡರನ್ನು ಕೆಲವೆಡೆ ಕಂಡು ದಂಗು ಬಡಿದದ್ದಿದೆ. ಕೇಳಿದರೆ ಅವರೇ ನಿಜವಾದ ದೇವರು ಎಂಬ ಉತ್ತರ ಬೇರೆ. ಇದನ್ನು ಮುಗ್ಧತೆ ಎನ್ನಬೇಕೋ? ಮೌಡ್ಯದ ಪರಾಕಾಷ್ಠೆ ಎನ್ನಬೇಕೋ? ಭಾರತವು ಭೌತಿಕ ರಾಷ್ಟ್ರವಲ್ಲ. ಆಧ್ಯಾತ್ಮಿಕ ದೇಶವೆಂದೇ ಪ್ರಪಂಚದಲ್ಲಿ ಹಿರಿಮೆ ಪಡೆದಿದೆ. ಇಲ್ಲಿ ಹಲವು ಪಂಥ- ಸಿದ್ಧಾಂತ ಗಳಿವೆ. ವೇದ, ಪುರಾಣ, ಉಪನಿಷತ್ತುಗಳ ದಾರ್ಶನಿಕತೆ ಇದೆ. ಸಾವಿರಾರು ಸಾಧು, ಸಂತ, ಮಹಾಂತ, ಮಹಾತ್ಮರ ಇತಿಹಾಸ ವಿದೆ. ಬುದ್ಧ, ಜಿನೇಂದ್ರ, ನಾನಕ, ಆಚಾರ್ಯತ್ರಯರು, ಪತಂಜಲಿ, ಪರಮಹಂಸ, ದಯಾನಂದ, ವಿವೇಕಾನಂದ, ಚೈತನ್ಯ ಮೊದಲಾದ ಸ್ಮರಣೀಯ ನಾಮಗಳು ಹಲವಿವೆ. ಆದರೆ ಇವರಾರು ತಮ್ಮನ್ನು ತಾವು ದೇವರೆಂದು ಹೇಳಿಕೊಳ್ಳಲಿಲ್ಲ. ಪ್ರಾಪಂಚಿ ಕವಾಗಿ ಯೋಚಿಸುವು ದಾದರೆ ಏಸು ಕ್ರಿಸ್ತ, ಪೈಗಂಬ ರರು ಕೂಡ ತಾವು ಅನ್ವೇಷಕರು ಮತ್ತು ಪ್ರವಾದಿಗಳೆಂದೇ ಕರೆಸಿ ಕೊಂಡರು. ಬಹುಶಃ ಆ ಕಾಲದಲ್ಲಿ ದೇವಮಾನವ ಎಂಬ ಶಬ್ದವೇ ಹುಟ್ಟಿರಲಿಲ್ಲ ವೇನೋ? ಏಕೆಂದರೆ ಅವರಿಗೆ ದೇವರು ಎಂದರೆ ಸರ್ವಶಕ್ತ, ಧರ್ಮ ಎಂದರೆ ಆಚರಣೆ, ಮೋಕ್ಷ , ಮುಕ್ತಿ ಎಂದರೆ ವೇದಾಂತ ಅಧ್ಯಾತ್ಮ ಎನ್ನುವುದು ಸ್ಪಷ್ಟವಾಗಿ ತಿಳಿದಿತ್ತು. ದುರಂತವೆಂದರೆ ಇದ್ಯಾವುದರ ಕನಿಷ್ಠ ತಿಳಿವಳಿಕೆಯೂ ಇಲ್ಲದ ಸಾಮಾನ್ಯರು ಇಂದು ಮಂಕು ಬೂದಿ ಎರಚುವ ಏಕೈಕ ಸಿದ್ಧಾಂತದ ಮೂಲಕವೇ ದೇವಮಾನವ, ಆಚಾರ್ಯ, ಸ್ವಾಮಿ, ಮಠಾಧಿಪತಿ, ಪೀಠಾಧಿಪತಿ, ಆಶ್ರಮವಾಸಿ, ಬಾಬಾ ಎಂದು ಸ್ಥಾಪಿಸಿಕೊಳ್ಳುತ್ತಾರೆ. ಭೋಗ-ಲಾಲಸೆ, ಲೋಲುಪತೆಯ ಕೇಂದ್ರಗಳನ್ನು ದೇವರು ಧರ್ಮದ ತೆರೆಯಲ್ಲಿ ತೆರೆದು ಭಾರತದ ಆಧ್ಯಾತ್ಮಿಕ ಪರಂಪರೆಗೆ ಮಸಿ ಬಳಿಯುತ್ತಾರೆ.
ಮಾನವನೆಂದಿಗೂ ದೇವರಾಗಲು ಸಾಧ್ಯವಿಲ್ಲ. ಆದರೆ ದೇವರು ಮಾನವನಾಗಿ ಆವತರಿಸಲು ಸಾಧ್ಯವಿದೆ. ಈ ಎರಡು ತತ್ವ ಸಿದ್ಧಾಂತಗಳ ತುಲನೆಯಲ್ಲಿ ಎಡವುವವರು ಸದಾ ಹರಕೆಯ ಕುರಿಗಳಾಗಿಯೇ ಇರುತ್ತಾರೆ. ಇದು ನಮ್ಮ ದೇಶದ ದುರಂತ.
ಇದೀಗ ಕಲ್ಕಿ ಮಹಾಶಯನಿಗೆ ಒದಗಿದ ದುರ್ಗತಿ ಗಮನಿಸುವಾಗ ಹೊಸ ಆಶಾಕಿರಣವೊಂದು ಮಿನುಗಿದಂತೆ ಆಗುತ್ತಿದೆ. ಅಲ್ಲವೇ?
-ಮೋಹನ್ ದಾಸ್, ಸುರತ್ಕಲ್