Advertisement

ಮಂಗಳೂರು ಗಲಭೆಕೋರರ ಆಸ್ತಿ ಜಪ್ತಿ ಮಾಡಲು ಸಾಧ್ಯವೇ?

10:42 PM Dec 28, 2019 | Lakshmi GovindaRaj |

ಬೆಂಗಳೂರು: ಮಂಗಳೂರಿನಲ್ಲಿ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಗಲಭೆ ವೇಳೆ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಉಂಟಾದ ಹಿನ್ನೆಲೆಯಲ್ಲಿ ಗಲಭೆಕೋರರಿಂದಲೇ ಆಸ್ತಿ ನಷ್ಟ ಭರಿಸುವ ಕಾನೂನು ತರಬೇಕೆಂಬ ಒತ್ತಾಯ ಹೆಚ್ಚಾಗಿದ್ದು, ಸರ್ಕಾರ ಕೂಡ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ. ಆದರೆ, ಹೊಸ ಕಾನೂನು ರೂಪಿಸಿದ ಬಳಿಕವಷ್ಟೇ ಈ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯ.

Advertisement

ಹೀಗಾಗಿ, ಮಂಗಳೂರು ಗಲಭೆ ಪ್ರಕರಣಕ್ಕೆ ಇದು ಪೂರ್ವಾನ್ವಯವಾಗುವುದೇ ಎಂಬ ಬಗ್ಗೆ ಕಾನೂನು ಜಿಜ್ಞಾಸೆ ಆರಂಭವಾಗಿದೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರ ಸಂಭವಿಸಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೂ ನಷ್ಟ ಉಂಟಾಗಿತ್ತು. ಪ್ರತಿಭಟನೆ ನೆಪದಲ್ಲಿ ಹಲವರು ಮುಸುಕುಧಾರಿಗಳಾಗಿ ದಾಂಧಲೆ ನಡೆಸಿದ್ದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಪರಿಸ್ಥಿತಿಯ ಲಾಭ ಪಡೆದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗುವುದನ್ನು ನಿಯಂತ್ರಿಸಲು ನಷ್ಟವನ್ನು ದಾಂಧಲೆಕೋರರಿಂದಲೇ ಭರಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ. ಇನ್ನೊಂದೆಡೆ, ಕರ್ನಾಟಕದ ಜನ ಶಾಂತಿಪ್ರಿಯ ರಾಗಿದ್ದು, ನಿರಂತರವಾಗಿ ಹಿಂಸಾಚಾರ, ಗಲಭೆ ನಡೆಯುವ ಪರಿಸ್ಥಿತಿ ಯಿಲ್ಲ. ಹಾಗಾಗಿ, ಉತ್ತರ ಪ್ರದೇಶದ ಕಾನೂನು ರಾಜ್ಯಕ್ಕೆ ಅಗತ್ಯವೇ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸದ್ಯ ಈ ವಿಚಾರದ ಬಗ್ಗೆ ವ್ಯಾಪಕ ಚರ್ಚೆ ನಡೆದಿ ದ್ದು, ಸರ್ಕಾರದ ನಡೆ ಬಗ್ಗೆ ಕುತೂಹಲ ಮೂಡಿಸಿದೆ.

ವಾದ-ಪ್ರತಿವಾದವೇನು?: ಯಾವುದೇ ಹಿಂಸಾಚಾರ ಇಲ್ಲವೇ ಅಪರಾಧ ಕೃತ್ಯ ಸಂಭವಿಸಿದಾಗ ಆಗ ಜಾರಿಯಲ್ಲಿರುವ ಕಾನೂನಿನನ್ವಯವಷ್ಟೇ ಕ್ರಮ ಜರುಗಿಸಬಹುದು. ಘಟನೆ ಬಳಿಕ ಹೊಸ ಕಾಯ್ದೆ ತಂದು ಪೂರ್ವಾನ್ವಯ ಮಾಡಿ ಕ್ರಮ ಜರುಗಿಸಲು ಅವಕಾಶವಿಲ್ಲ ಎಂದು ಕೆಲ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಇನ್ನೂ ಕೆಲ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಮಾಣ ತೀವ್ರವಾಗಿದ್ದರೆ ಪೂರ್ವಾನ್ವಯಕ್ಕೂ ಅವಕಾಶವಿರಲಿದೆ ಎಂದಿದ್ದಾರೆ. ಹಾಗಾಗಿ, ಈ ಬಗ್ಗೆ ಕಾನೂನಿನಲ್ಲೇ ಜಿಜ್ಞಾಸೆ ಇದ್ದಂತಿದೆ.

ಪ್ರತ್ಯೇಕ ನ್ಯಾಯಾಧಿಕರಣ ಸೂಕ್ತ: ಗಲಭೆ, ಹಿಂಸಾಚಾರ ಸಂಭವಿಸಿ ಆಸ್ತಿಪಾಸ್ತಿಗೆ ನಷ್ಟ ಉಂಟಾದರೆ ಆ ಬಗ್ಗೆ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು ಅಪರಾಧ ಕೃತ್ಯ ಸಾಬೀತಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಬೇಕಾ ಗುತ್ತದೆ. ಇದರಿಂದ ತ್ವರಿತ ವಿಚಾರಣೆ ಸಾಧ್ಯವಾಗದು ಎನಿ ಸಿ ದರೆ ಇಂತಹ ಪ್ರಕರಣಗಳಿಗೆಂದೇ ಪ್ರತ್ಯೇಕ ನ್ಯಾಯಾ ಧಿಕರಣ ರಚನೆಗೆ ಕಾಯ್ದೆ ರೂಪಿಸಿ ಜಾರಿಗೊಳಿಸಿದರೆ ತ್ವರಿತ ವಿಚಾರಣೆಗೆ ಅನುಕೂಲ ವಾಗಲಿದೆ ಎಂಬ ಅಭಿಪ್ರಾಯವೂ ಇದೆ.

Advertisement

ಚರ್ಚೆಯಾಗಿಲ್ಲ: ಉತ್ತರ ಪ್ರದೇಶ ಮಾದರಿಯ ಕಾನೂನನ್ನು ರಾಜ್ಯದಲ್ಲೂ ಜಾರಿಗೊಳಿಸುವ ಬಗ್ಗೆ ಈವರೆಗೆ ಚರ್ಚೆಯಾಗಿಲ್ಲ. ಅಲ್ಲದೇ ಉತ್ತರ ಪ್ರದೇಶಕ್ಕೂ, ಕರ್ನಾಟಕಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಪ ರೂಪದ ಸಂದರ್ಭ ಹೊರತು ಪಡಿಸಿದರೆ ಉಳಿದಂತೆ ರಾಜ್ಯ ಸದಾಕಾಲ ಶಾಂತವಾ ಗಿರುತ್ತದೆ. ಹಾಗಾಗಿ, ಈ ರೀತಿಯ ಕಾನೂನು ರಾಜ್ಯದಲ್ಲಿ ಅಗತ್ಯವಿ ದೆಯೇ ಎಂಬ ಬಗ್ಗೆಯೂ ಚರ್ಚೆ ನಡೆಯ ಬೇಕಾಗುತ್ತದೆ. ಒಟ್ಟಾರೆ ಸಾಧಕ- ಬಾಧಕ ಪರಿಶೀಲಿ ಸಿಯೇ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಬಿಜೆಪಿ ಹಿರಿಯ ನಾಯಕ ರೊಬ್ಬರು ತಿಳಿಸಿದ್ದಾರೆ.

ವಿಚಾರಣೆ ಬಳಿಕ ಕ್ರಮ: ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಾಗ ಯಾರನ್ನೂ ಹೊಣೆ ಮಾಡಿ ಏಕಾಏಕಿ ಅವರಿಂದಲೇ ನಷ್ಟ ಭರಿಸಲು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ.ಆಚಾರ್ಯ ಹೇಳಿದ್ದಾರೆ. ಅಪರಾಧ ಕೃತ್ಯಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯ ವಿಚಾರಣೆ ನಡೆಸಿ, ತೀರ್ಪು ನೀಡಿದ ಬಳಿಕವಷ್ಟೇ ಮುಂದಿನ ಪ್ರಕ್ರಿಯೆ ಕೈಗೊಳ್ಳ ಬಹುದು. ಸಿವಿಲ್‌ ಪ್ರಕರಣಗಳ ವಿಚಾರಣೆ ಮಾದರಿಯಲ್ಲೇ ಈ ಪ್ರಕರಣಗಳಲ್ಲೂ ವಿಚಾರಣೆ ನಡೆಸಿ ಅಪರಾಧಿ ಎಂದು ದೃಢಪಟ್ಟ ಬಳಿಕ ಕ್ರಮ ಜರುಗಿಸಬಹುದು. ಈ ರೀತಿಯ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ನ್ಯಾಯಾಧಿಕರಣ ಆರಂಭಿಸಲು ಕಾಯ್ದೆ ರೂಪಿಸಿದರೆ ತ್ವರಿತ ವಿಚಾರಣೆ ನಡೆಸಲು ಅನುಕೂಲ ವಾಗಲಿದೆ. ಗಲಭೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎನಿಸಿದರೆ ಕಾಯ್ದೆಯನ್ನು ಪೂರ್ವಾನ್ವಯವಾಗಿ ಜಾರಿಗೊಳಿಸಬಹುದು ಎನಿಸುತ್ತದೆ ಎಂದು ತಿಳಿಸಿದ್ದಾರೆ.

ಪೂರ್ವಾನ್ವಯ ಅಸಾಧ್ಯ: ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಿದವರಿಂದಲೇ ನಷ್ಟ ಭರಿಸಬೇಕೆಂಬ ಕಾಯ್ದೆ ಸದ್ಯ ಜಾರಿಯಲ್ಲಿ ಇಲ್ಲದ ಕಾರಣ ಮಂಗಳೂರು ಗಲಭೆ ಪ್ರಕರಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ವಾಗಿದ್ದರೂ ಅದನ್ನು ಅಪರಾಧಿ ಗಳಿಂದ ಭರಿಸಲು ಅವಕಾಶ ವಿಲ್ಲ ಎಂದು ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ.ರವಿ ವರ್ಮ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ. ಯಾವುದೇ ಆರೋಪ, ಅಪರಾಧಕ್ಕೆ ಸಂಬಂಧ ಪಟ್ಟಂತೆ ಘಟನೆ ನಡೆದ ದಿನದ ಕಾಯ್ದೆ, ಕಾನೂನು ಮಾತ್ರ ಅನ್ವಯವಾಗುತ್ತದೆ. ಘಟನೋತ್ತರವಾಗಿ ಜಾರಿಗೊಳಿಸುವ ಕಾಯ್ದೆಯನ್ನು ಪೂರ್ವಾನ್ವಯ ಮಾಡಲು ಸಾಧ್ಯವಿಲ್ಲ.

ಜಾರಿಗೆ ಗಂಭೀರ ಚಿಂತನೆ: ಉತ್ತರ ಪ್ರದೇಶ ರೀತಿಯ ವ್ಯವಸ್ಥೆಯನ್ನು ರಾಜ್ಯದಲ್ಲೂ ಜಾರಿಗೊಳಿಸಬೇಕೆಂಬ ಒತ್ತಾಯ ಇತ್ತೀಚೆಗೆ ಕೇಳಿ ಬರಲಾರಂಭಿಸಿದೆ. ಇದಕ್ಕೆ ಪೂರಕವಾಗಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು, ಗಲಭೆಕೋರರಿಂದಲೇ ನಷ್ಟ ಭರಿಸುವ ವ್ಯವಸ್ಥೆ ತರುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಹೇಳಿದ್ದರು. ಇದಕ್ಕೆ ಹಲವು ಸಚಿವರು ದನಿಗೂಡಿಸಿ ಈ ಸಂಬಂಧ ಸಿಎಂಗೆ ಮನವಿ ಮಾಡುವುದಾಗಿಯೂ ಹೇಳಿದ್ದಾರೆ. ಆದರೆ, ಪ್ರತಿಭಟನೆ, ಪ್ರತಿರೋಧದ ಹೆಸರಿನಲ್ಲಿ ದಾಂಧಲೆ ನಡೆಸಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟಾದರೆ ಅದನ್ನು ಹಾನಿ ಮಾಡಿದವರಿಂದಲೇ ಭರಿಸುವ ವ್ಯವಸ್ಥೆ ತರಲು ಹೊಸ ಕಾನೂನು ಜಾರಿಗೊಳಿಸಬೇಕಾಗುತ್ತದೆ. ನಂತರವಷ್ಟೇ ಕ್ರಮ ಜರುಗಿಸಲು ಕಾನೂನು ಬಲ ಬರಲಿದೆ. ಜತೆಗೆ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾದ ಘಟನೆ ಸಂಭವಿಸಿದಾಗ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪ ಸಾಬೀತಾದ ಬಳಿಕವಷ್ಟೇ ಅಪರಾಧಿಗಳಿಂದ ನಷ್ಟ ಭರಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಾಗಾಗಿ, ಯಾರನ್ನೂ ಏಕಾಏಕಿ ಹೊಣೆ ಮಾಡಿ ನಷ್ಟ ಭರಿಸಲು ಕ್ರಮ ಕೈಗೊಳ್ಳಲು ಸಾಧ್ಯವಾಗದು ಎಂದು ಕಾನೂನು ತಜ್ಞರು ಹೇಳುತ್ತಾರೆ.

ಆಸ್ತಿ ಮುಟ್ಟುಗೋಲಿಗೆ ನಿರ್ಧಾರ: ಪ್ರತಿಭಟನೆಗಳ ಸಂದರ್ಭ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡುವವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಶನಿವಾರ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಸಾಕಷ್ಟು ಆಸ್ತಿಪಾಸ್ತಿ ಹಾನಿಯಾಗಿ ದ್ದರಿಂದ ಅಲ್ಲಿನ ಸರ್ಕಾರ ಹಾನಿಗೆ ಕಾರಣರಾದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ಕೈಗೊಂಡಿದೆ. ನಮ್ಮ ರಾಜ್ಯದಲ್ಲೂ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿಸಿ ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿ ಹಾನಿಗೆ ಮುಂದಾದರೆ ಸರ್ಕಾರ ಉತ್ತರ ಪ್ರದೇಶ ಮಾದರಿಯಲ್ಲಿ ಕ್ರಮ ಕೈಗೊಂಡರೆ ತಪ್ಪೇನು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next