Advertisement
ನಾನು ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎ. ಓದುತ್ತಿದ್ದಾಗ ಮೊದಲ ಬಾರಿಗೆ ಗಿರೀಶ್ ಕಾರ್ನಾಡರನ್ನು ನೋಡಿದೆ. ಆಗ ಪ್ರೊ. ಬಿ. ಚಂದ್ರಶೇಖರ್ ಅವರು, ಕಾರ್ನಾಡರ “ತುಘಲಕ್’ ನಾಟಕವನ್ನು ನಿರ್ದೇಶಿಸಿದ್ದರು. ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕದ ಪ್ರದರ್ಶನವಿತ್ತು. ಅದೊಂದು ಅದ್ಭುತ ಪ್ರದರ್ಶನ. ಸಿ.ಆರ್. ಸಿಂಹ ಅವರು ತುಘಲಕ್ ಪಾತ್ರವನ್ನು ಜೀವಂತಗೊಳಿಸಿದ್ದರು. ಪ್ರದರ್ಶನದ ಕೊನೆಯಲ್ಲಿ ರಂಗತಂಡದ ಜೊತೆ ಕಾರ್ನಾಡರು ಕಾಣಿಸಿಕೊಂಡರು. ಅವರು ಬಂದಿದ್ದ ಸುಳಿವು ನನ್ನನ್ನೂ ಸೇರಿ, ಬಹುಪಾಲು ಪ್ರೇಕ್ಷಕರಿಗೆ ಇರಲಿಲ್ಲ.
Related Articles
Advertisement
ಅದೂ ಯಾವುದಾದರೂ ಸಮಾರಂಭಗಳ ಸಂದರ್ಭದಲ್ಲಿ. ಆಗ ಅವರು ಯಾವುದೇ ಬಿಗುಮಾನವಿಲ್ಲದೆ ನಡೆದುಕೊಳ್ಳುತ್ತಿದ್ದರು. ದೊಡ್ಡಸ್ತಿಕೆಯ ಮಣಭಾರ ಹೊತ್ತ ಮೆದುಳು ಅವರದಾಗಿರಲಿಲ್ಲ. ವ್ಯಾಸಂಗ ಮಾಡಿದ ಆಕ್ಸ್‌ಫರ್ಡ್, ಮೊದಲು ನೆಲೆಸಿದ ಮುಂಬೈ, ಈಗಿನ ವಾಸದ ಬೆಂಗಳೂರು, ಬಾಲ್ಯದ ಧಾರವಾಡ -ಎಲ್ಲವನ್ನೂ ಒಳಗೊಂಡ, ವಿಭಿನ್ನ ನೆಲೆಗಳನ್ನು ಒಂದಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಪ್ರಾಮಾಣಿಕ ಪ್ರತೀಕದಂತೆ ನನಗೆ ಅವರ ನಡೆ-ನುಡಿ ಕಾಣಿಸುತ್ತಿತ್ತು.
ಬರಬರುತ್ತ ಬೆಂಗಳೂರನ್ನು ಒಗ್ಗಿಸಿಕೊಂಡು ಬೆಳೆದ ಅವರ ವ್ಯಕ್ತಿತ್ವದಲ್ಲಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ನಡವಳಿಕೆಗಳ ಬೆಸುಗೆಯ ಬಿಂಬವೊಂದು ರೂಪುಗೊಂಡಿತ್ತು. ಕಾರ್ನಾಡರ ಸರಳತೆಗೆ ನನ್ನದೇ ಒಂದೆರಡು ನಿದರ್ಶನಗಳಿವೆ. ಅವರು ಮರಾಠಿ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾಡಿದ ಭಾಷಣದ ವರದಿಯನ್ನು ನಾನು ಓದಿದ್ದೆ. ಆ ವರದಿಯಲ್ಲಿ ಪ್ರಸ್ತಾಪಗೊಂಡ ವಿವರಗಳಲ್ಲಿ ಅವರ ಕೆಲವು ಒಳನೋಟಗಳಿದ್ದವು. ಒಮ್ಮೆ ಅವರು ಸಿಕ್ಕಿದಾಗ, “ನಿಮ್ಮ ಭಾಷಣದ ಪ್ರತಿ ಪ್ರಿಂಟಾಗಿದ್ರೆ ಮನೆಗೆ ಬಂದು ತಗೊಂಡ್ ಬರಿನಿ ಸಾರ್’ ಎಂದೆ.
ಅವರು, “ಅದಕ್ಕೇನಂತೆ ಖಂಡಿತಾ ಬನ್ನಿ’ ಎಂದರು. ಆದರೆ, ಮಾರನೇದಿನ ನನಗೊಂದು ಅಚ್ಚರಿ ಕಾದಿತ್ತು. ಸ್ವತಃ ಕಾರ್ನಾಡರೇ ತಮ್ಮ ಭಾಷಣದ ಮುದ್ರಿತ ಪ್ರತಿಯನ್ನು ನನ್ನ ಮನೆಗೆ ತಂದುಕೊಟ್ಟರು! ಅವರು ಬಂದಾಗ ನಾನು ಮನೆಯಲ್ಲಿ ಇರಲಿಲ್ಲ. ನನ್ನ ಪತ್ನಿಯ ಕೈಗೆ ಪ್ರತಿಯನ್ನು ಕೊಟ್ಟು ಹೋಗಿದ್ದರು. ಇದೊಂದು ಅಪರೂಪದ ನಡವಳಿಕೆ. ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದ ಕಾಲ. 1993-94ಕ್ಕೆ ನನ್ನ ಅವಧಿ ಮುಗಿಯುತ್ತಿತ್ತು. ನನ್ನ ಅವಧಿಯ ಕಡೆಯ ಪ್ರಶಸ್ತಿಗಳನ್ನು ನಿರ್ಧರಿಸಬೇಕಿತ್ತು. ಹಿಂದಿನ ಪಟ್ಟಿಯನ್ನು ನೋಡಿದಾಗ, ಗಿರೀಶ್ ಕಾರ್ನಾಡರಿಗೆ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಸಂದಿಲ್ಲವೆಂಬ ಅಂಶ ಗಮನಕ್ಕೆ ಬಂತು.
ನಾನು ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದೆ. ಕಾರ್ನಾಡರಿಗೆ ಸಿಕ್ಕಿದ ರಾಷ್ಟ್ರೀಯ ಪ್ರಸಿದ್ಧಿಯೇ ಅವರ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ “ಅಡ್ಡಿ’ಯಾಗಿತ್ತೆಂದು ಆಗ ಅರಿವಾಯಿತು. ಅಷ್ಟೆಲ್ಲ ಪ್ರಸಿದ್ಧರಿಗೆ ಮತ್ತೂಂದು ಪ್ರಶಸ್ತಿ ಯಾಕೆ ಎಂಬ ಪ್ರಶ್ನೆಯ ಜೊತೆಗೆ, ಅವರದ್ದು ನಾಟಕ ಕ್ಷೇತ್ರವಾದ್ದರಿಂದ ನಾಟಕ ಅಕಾಡೆಮಿಯ ವ್ಯಾಪ್ತಿಗೆ ಸೇರುತ್ತದೆಂಬ ವಾದವೂ ಇತ್ತು. ಆಗ ನಾನು ಕೊಟ್ಟ ಸ್ಪಷ್ಟನೆಗೆ ಸರ್ವ ಸದಸ್ಯರು ಸಮ್ಮತಿಸಿದರು.
“ನಾಟಕವು ಮೂಲತಃ ಸಾಹಿತ್ಯ ಕೃತಿಯಾಗಿರುತ್ತದೆ. ಆನಂತರ ರಂಗಕೃತಿ ಯಾಗುತ್ತದೆ. ಆದ್ದರಿಂದ ನಾಟಕಕಾರರನ್ನೂ ಸಾಹಿತ್ಯ ಅಕಾಡೆಮಿ ಗೌರವಿಸಬೇಕು. ಅನೇಕ ಪ್ರಶಸ್ತಿಗಳಿಂದ ಪ್ರಸಿದ್ಧರಾಗಿದ್ದಾರೆಂಬ ಕಾರಣದಿಂದ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಕೊಡದೇ ಇರುವುದು ಅಕಾಡೆಮಿಗೆ ಗೌರವ ತರುವುದಿಲ್ಲ. ನಾಟಕ ಸಾಹಿತ್ಯಕ್ಕೆ ಅವರು ಅಪೂರ್ವ ಕೊಡುಗೆ ನೀಡಿದ್ದಾರೆ ಎಂಬುದೇ ಮಾನದಂಡವಾಗಲಿ’- ಎಂಬ ನನ್ನ ಮಾತುಗಳಿಗೆ ಸದಸ್ಯರು ಮರು ಮಾತಾಡದೆ ಒಪ್ಪಿಕೊಂಡರು. ನಾವು ಪ್ರಶಸ್ತಿ ಪ್ರಕಟಿಸಿದಾಗ ಕಾರ್ನಾಡರು ನನ್ನನ್ನು ಸಂಪರ್ಕಿಸಿ ಅತೀವವಾಗಿ ಸಂತೋಷಪಟ್ಟರು.
ತುಮಕೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಎಲ್ಲ ಪ್ರಶಸ್ತಿ ಪುರಸ್ಕೃತರಿಗೂ ಪ್ರಯಾಣ ಮತ್ತು ವಸತಿ ವ್ಯವಸ್ಥೆಯನ್ನು ಮಾಡುವ ಜವಾಬ್ದಾರಿ ಅಕಾಡೆಮಿಯದಾಗಿತ್ತು. ಕಾರ್ನಾಡರನ್ನು ನಾನು ಸಂಪರ್ಕಿ ಸಿದೆ. ಅವರು, “ನನ್ನ ಪ್ರಯಾಣ ಮತ್ತು ವಸತಿ ಬಗ್ಗೆ ಯೋಚಿಸಬೇಡಿ. ಅದೆಲ್ಲ ನಾನೇ ನೋಡ್ಕೊತೇನೆ’ ಎಂದವರು, ವೈಎನ್‌ಕೆ ಅವರ ಜೊತೆ ಸಮಾರಂಭಕ್ಕೆ ಬಂದರು. ಇದಿಷ್ಟು ಅನುಭವದ ಮಾತು.
ನಾಡಿಗೆ ಗಿರೀಶ್ ಕಾರ್ನಾಡರ ಕೊಡುಗೆ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾಗಿ ಹೇಳಬಯಸುತ್ತೇನೆ. ಕಾರ್ನಾಡರು ತಮ್ಮ ನಾಟಕಗಳ ಮೂಲಕ ಬೆಳೆಸಿದ ಪರಂಪರೆಯ ಪರಿಶೀಲನಾ ವಿವೇಕ ಅಪರೂಪದ್ದಾಗಿದೆ. ಅವರು ನಾಟಕಕ್ಕೆ ಆಯ್ಕೆ ಮಾಡಿಕೊಂಡ ವಸ್ತುಗಳು ಪ್ರಧಾನವಾಗಿ ಚರಿತ್ರೆ ಮತ್ತು ಪುರಾಣಗಳನ್ನು ಅವಲಂಬಿಸಿವೆ. ತುಘಲಕ್, ತಲೆದಂಡ, ಟಿಪ್ಪುವಿನ ಕನಸುಗಳು ಮುಂತಾದ ನಾಟಕಗಳಲ್ಲಿ ಚರಿತ್ರೆಯ ವಸ್ತುವಿದೆ.
ಯಯಾತಿ, ಹಿಟ್ಟಿನ ಹುಂಜ, ಹಯವದನ ಮುಂತಾದವುಗಳಲ್ಲಿ ಪುರಾಣ ಮತ್ತು ಐತಿಹ್ಯಾಧಾರಿತ ವಸ್ತುಗಳಿವೆ. ಕಾರ್ನಾಡರು ಚರಿತ್ರೆ ಮತ್ತು ಪುರಾಣಗಳನ್ನು ಪ್ರವೇಶಿಸಿ, ಆ ಕಾಲ ಮತ್ತು ಈ ಕಾಲಗಳನ್ನು ಒಂದಾಗಿಸುವ “ವಿವೇಕ’ದಿಂದ ತಮ್ಮ ಸೃಷ್ಟಿ ಕ್ರಿಯೆಯನ್ನು ವಿಶಿಷ್ಟಗೊಳಿಸಿದ್ದಾರೆ. ಅಂದರೆ, ಚರಿತ್ರೆ ಮತ್ತು ಪುರಾಣಗಳನ್ನು ಕುರುಡಾಗಿ ನಿರಾಕರಿಸದೆ/ ಇದ್ದಂತೆಯೇ ಸ್ವೀಕರಿಸದೆ, ಪುನರ್‌ಪರಿಶೀಲನೆಗೆ ಒಡ್ಡುತ್ತಾರೆ. ಸಮಕಾಲೀನ ವಿವೇಕದಿಂದ ಚಾರಿತ್ರಿಕ ಮತ್ತು ಪೌರಾಣಿಕ ವಸ್ತು ವಿಷಯಗಳೊಂದಿಗೆ ಅನುಸಂಧಾನಿಸುತ್ತಾರೆ; ಹೊಸ ಅರ್ಥ ಕೊಡುತ್ತಾರೆ; ಹೊಸದಾಗಿ ವ್ಯಾಖ್ಯಾನಿಸುತ್ತಾರೆ.
ಸಾಹಿತ್ಯ ಸೃಷ್ಟಿ ವಲಯದಲ್ಲಿ ಕಾರ್ನಾಡರು ಅನುಸಂಧಾನದ ಗುಣವಾದರೆ, ಸಾರ್ವಜನಿಕ ವಲಯದಲ್ಲಿ ಮುಖಾಮುಖಿಯ ಗುಣ. ಸಮಾಜದ ಆಗುಹೋಗುಗಳಿಗೆ ಅವರು ಮುಖಾಮುಖಿಯಾಗುತ್ತ ನೇರ, ನಿಷ್ಠುರ ವಿಚಾರಗಳನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ವಿಶೇಷವಾಗಿ ಧಾರ್ಮಿಕ ಮೂಲಭೂತವಾದಿ ರಾಜಕೀಯಕ್ಕೆ ದಿಟ್ಟವಾಗಿ ಮುಖಾಮುಖಿಯಾಗಿದ್ದಾರೆ. ಈ ಮುಖಾಮುಖಿಯು ಅವರ ನಿರ್ದಿಷ್ಟ ವಿಚಾರಧಾರೆಯ ಫಲ. ಆದರೆ, ಅವರು ತಕ್ಷಣದಲ್ಲಿ ನೀಡಿದ ಪ್ರತಿಕ್ರಿಯೆಗಳು ಕೆಲವೊಮ್ಮೆ ವಿವಾದಕ್ಕೆ ಅವಕಾಶ ಮಾಡಿಕೊಟ್ಟಿವೆ.
ವಿಚಾರದ ಪ್ರತಿಪಾದನೆ ಮತ್ತು ಪ್ರತಿಕ್ರಿಯೆಗಳಿಗೆ ಕೆಲವೊಮ್ಮೆ ಅಂತರವಿರುತ್ತದೆ. ವಿಚಾರಧಾರೆಯು ಚಿಂತನೆಯ ಫಲವಾದರೆ, ಪ್ರತಿಕ್ರಿಯೆಗಳು ತಕ್ಷಣಕ್ಕೆ ಎದುರಾದ ಪ್ರಶ್ನೆಗಳಿಗೆ ಕೊಟ್ಟ ಉತ್ತರಗಳಾಗಿರುತ್ತವೆ. ಎದುರಾದ ಪ್ರಶ್ನೆಯ ರೀತಿಯೂ ಪ್ರತಿಕ್ರಿಯೆಯ ದಾಟಿಯನ್ನು ಪ್ರೇರೇಪಿಸುತ್ತದೆ; ಹಸಿಬಿಸಿಗೂ ಕಾರಣವಾಗುತ್ತದೆ. ಕಾರ್ನಾಡರ ಇಂಥ ಪ್ರತಿಕ್ರಿಯೆಗಳು ಕೆಲವೊಮ್ಮೆ ದೊಡ್ಡ ವಿರೋಧ ಮತ್ತು ಪ್ರತಿರೋಧವನ್ನು ಉಂಟು ಮಾಡಿವೆ.
ಹಾಗೆಂದು ಕಾರ್ನಾಡರ ಪ್ರಜಾಸತ್ತಾತ್ಮಕ ಹಕ್ಕನ್ನು ನಾವು ಕಿತ್ತುಕೊಳ್ಳಲಾಗದು. ಅವರ ಅಭಿಪ್ರಾಯ ಒಪ್ಪಿತವಾಗದಿದ್ದರೆ ಪ್ರಜಾಸತ್ತಾತ್ಮಕವಾಗಿಯೇ ಅದಕ್ಕೆ ಪ್ರತಿಕ್ರಿಯಿಸುವುದು ಸರಿಯಾದ ವಿಧಾನ. ಈ ವಿಧಾನದ ಉಲ್ಲಂಘನೆಯಾದಾಗಲೂ ಕಾರ್ನಾಡರು ತಮ್ಮ ಪ್ರತಿಕ್ರಿಯೆಗಳ ಪಟ್ಟು ಸಡಿಲಿಸಲಿಲ್ಲ! ಈಗ ಅದೆಲ್ಲ ಆಗಿ ಹೋದ ವಿಷಯ. ವಿವಾದಗಳ ಕಾರಣಕ್ಕಾಗಿ ಕಾರ್ನಾಡರ ಕೊಡುಗೆಯನ್ನು ಕಡೆಗಣಿಸಬೇಕಿಲ್ಲ.
ಕಡೆಯದಾಗಿ ಒಂದು ಮಾತು: ಗಿರೀಶ್ ಕಾರ್ನಾಡರದು ಸಾಹಿತ್ಯ ವಲಯದಲ್ಲಿ ಅನುಸಂಧಾನ ಸೃಷ್ಟಿ, ಸಾರ್ವಜನಿಕ ವಲಯದಲ್ಲಿ ಮುಖಾಮುಖಿ ದೃಷ್ಟಿ.
* ಬರಗೂರು ರಾಮಚಂದ್ರಪ್ಪ, ಸಾಹಿತಿ- ನಿರ್ದೇಶಕ