Advertisement
ಕೃಷಿ ಮತ್ತು ಕೃಷಿ ಆಧಾರಿತ ಆರ್ಥಿಕ ಚಟುವಟಿಕೆಗಳ ಮೇಲೆ ನಿಂತಿರುವ ಗ್ರಾಮೀಣ ಅರ್ಥವ್ಯವಸ್ಥೆಗೆ ಪೂರಕವಾಗಿ ರಸ್ತೆ, ನೀರು, ವಿದ್ಯುತ್,ಆರೋಗ್ಯ ಮೊದಲಾದ ಮೂಲ ಅವಶ್ಯಕತೆಗಳ ಸೌಲಭ್ಯ ಸುಧಾರಣೆಯಾಗದೆ ಗ್ರಾಮೀಣರ ಜೀವನ ಮಟ್ಟದಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯವಿಲ್ಲ. ಮೂಲ ಅವಶ್ಯಕತೆಗಳ ಕೊರತೆಯಿಂದಾಗಿ ಬದುಕು ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಭವಿಷ್ಯವನ್ನರಸಿಕೊಂಡು ಹಳ್ಳಿಗಳಿಂದ ಪಟ್ಟಣದೆಡೆಗೆ ಗುಳೆ ಹೋಗುತ್ತಿರುವ ಗ್ರಾಮೀಣರಿಂದಾಗಿ ಪಟ್ಟಣಗಳಲ್ಲಿ ಜನದಟ್ಟಣೆ ಹೆಚ್ಚಾಗಿ ಅಲ್ಲಿನ ಸಮಸ್ಯೆಗಳು ಇನ್ನಷ್ಟು ಉಲ್ಬಣಿಸುತ್ತಿವೆ. ‘ರಾ’ ಮುಖ್ಯಸ್ಥರಾಗಿದ್ದ ಹಾಗೂ ಕೇರಳದ ನಿವೃತ್ತ ಡಿಜಿಪಿ ಆಗಿರುವ ಪಿ. ಕೆ. ಹಾರ್ಮಿಸ್ ತಾರಕನ್ ನಿವೃತ್ತಿಯ ಬಳಿಕ ಅಲೆಪ್ಪಿ ಜಿಲ್ಲೆಯ ತಾವು ಹುಟ್ಟಿದ ಹಳ್ಳಿಯಲ್ಲಿ ನೆಲೆಸಿ ತಮ್ಮ ಹಿರಿಯರ ಐದು ಹೆಕ್ಟೇರ್ ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ನಿವೃತ್ತ ಜೀವನವನ್ನು ತೊಡಗಿಸಿಕೊಂಡಿದ್ದು ಇತ್ತೀಚೆಗೆ ವರದಿಯಾಗಿತ್ತು. ಅವರಂತೆಯೇ ಅನೇಕ ವಿದ್ಯಾವಂತರು ಶಹರಗಳಲ್ಲಿನ ಉತ್ತಮ ಉದ್ಯೋಗವನ್ನು ತೊರೆದು ಹಳ್ಳಿಗಳಲ್ಲಿ ನೆಲೆಸುತ್ತಿರುವ ಅನೇಕ ಉದಾಹರಣೆಗಳು ಇವೆಯಾದರೂ ಅಂತಹ ಸಂಖ್ಯೆ ಇನ್ನಷ್ಟು ಹೆಚ್ಚಾಗಬೇಕಾದರೆ ಹಳ್ಳಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಯಾಗಬೇಕು.
Related Articles
Advertisement
ಮಾರುಕಟ್ಟೆ ಅಭಿವೃದ್ಧಿ, ರಸ್ತೆ ಅಭಿವೃದ್ಧಿ, ಸೇತುವೆ ಅಗಲಗೊಳಿಸುವುದು, ಕೆರೆ ಹೂಳೆತ್ತುವಿಕೆ, ಕಾಂಪೌಂಡ್ ನಿರ್ಮಾಣ, ಚರಂಡಿ ನಿರ್ಮಾಣ ಮೊದಲಾದ ಕ್ರಿಯಾ ಯೋಜನೆಗಳು ಒಂದೋ ವಾಸ್ತವದಲ್ಲಿ ಕಾಣ ಸಿಗುವುದೇ ಇಲ್ಲ, ಇಲ್ಲವೇ ಯೋಜನಾ ವೆಚ್ಚದ ಅರ್ಧದಷ್ಟನ್ನೂ ಖರ್ಚು ಮಾಡದೇ ಕಾಮಗಾರಿ ಮುಗಿಸಲಾಗುತ್ತದೆ. ಹಳ್ಳಿಗಳಲ್ಲಿ 100 ಮೀ. ಉದ್ದದ ರಸ್ತೆ ನಿರ್ಮಾಣದಂತಹ ಅನೇಕ ಕಿರು ಕಾಮಗಾರಿಗಳ ಕಾಂಟ್ರಾಕ್ಟ್ ಪಡೆಯುವ ಕೆಲವು ಗುತ್ತಿಗೆದಾರರಿಗೆ ಸಾಮಾನ್ಯ ಶಿಕ್ಷಣವೂ ಇರುವುದಿಲ್ಲ ಮತ್ತು ಕೆಲಸದ ಅನುಭವವೂ ಇರುವುದಿಲ್ಲ. ಅವೈಜ್ಞಾನಿಕವಾಗಿ ನಡೆಯುವ ಇಂತಹ ಕಾಮಗಾರಿಗಳಿಂದ ಸಾರ್ವಜನಿಕ ಹಣದ ಅಪವ್ಯಯವಷ್ಟೇ ವಿನಹ ಅದರಿಂದ ಸಾರ್ವಜನಿಕರಿಗೆ ಪ್ರಯೋಜನವಾಗುವುದು ದೂರದ ಮಾತು. ಸಂಬಂಧಿತ ಎಂಜಿನಿಯರ್‌ಗಳು ಕಾರ್ಯ ಬಾಹುಳ್ಯದ ನೆಪವೊಡ್ಡಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡುಬಿಡುತ್ತಾರೆ. ಕಾಂಟ್ರಾಕ್ಟರ್ ಬಳಿ ಅವರು ನಿರ್ಮಿಸಿದ ರಸ್ತೆಯ ಮಧ್ಯೆ ಅಲ್ಲಲ್ಲಿ ನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಾಗೂ ಕಳಪೆ ಕಾಮಗಾರಿಯ ವಿಷಯದ ಗಮನ ಸೆಳೆದಾಗ, ಅದೇನು ಬಿಡಿ ಇದಕ್ಕೂ ಮೊದಲು ಕೆಸರಿನಲ್ಲಿ ಓಡಾಡುತ್ತಿದ್ದರಲ್ಲ ಅದಕ್ಕಿಂತ ಪರವಾಗಿಲ್ಲ ತಾನೇ ಎಂದು ಸಮಜಾಯಿಷಿ ನೀಡುತ್ತಾರೆಯೇ ಹೊರತು ತನ್ನಿಂದ ಸಾರ್ವಜನಿಕ ಹಣದ ಅಪವ್ಯಯವಾಯಿತಲ್ಲಾ ಎನ್ನುವ ಲವಲೇಷ ಖೇದವೂ ಕಾಣಿಸುವುದಿಲ್ಲ.
ಸಾರ್ವಜನಿಕ ಯೋಜನೆಗಳಿಗೆ ಖರ್ಚು ಮಾಡಲಾಗುವ ಹಣದ ಕುರಿತು ಜನತೆ, ಗುತ್ತಿಗೆದಾರರು, ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ತೋರುವ ಧೋರಣೆ ಬದಲಾಗಬೇಕಿದೆ. ಎಲ್ಲರಿಗೂ ಸೇರಿದ್ದು ಯಾರಿಗೂ ಸೇರಿದ್ದಲ್ಲ ಎನ್ನುವ ಮಾನಸಿಕತೆ ಬದಲಾದಾಗ ಯೋಜನೆಗಳು ಸರಿಯಾಗಿ ಜಾರಿಯಾಗಲು ಸಾಧ್ಯ. ಗುತ್ತಿಗೆದಾರರಿಗೂ ಕನಿಷ್ಠ ವಿದ್ಯಾರ್ಹತೆ ಅಗತ್ಯ ಹಾಗೂ ಅವರಲ್ಲಿ ಸರಕಾರದ ಸಂಪನ್ಮೂಲದ ಕುರಿತು ಕಾಳಜಿ ಇರುವಂತಾಗಬೇಕು. ಕಳಪೆ ಕಾಮಗಾರಿಗಳನ್ನು ನೋಡಿಯೂ ನೋಡದಂತೆ ನಿರ್ಲಕ್ಷ್ಯ ತೋರುವ ಎಂಜಿನಿಯರ್‌ಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ನಿಯಮ ಜಾರಿಗೆ ಬರಬೇಕು.
ಸರಕಾರಿ ಯೋಜನೆಗಳು ಗ್ರಾಮ ಸ್ತರದಲ್ಲಿ ಸರಿಯಾಗಿ ಜಾರಿಗೆಯಾಗಬೇಕಾದರೆ ಈಗಿರುವ ಪಂಚಾಯತ್ ವ್ಯವಸ್ಥೆಗೆ ಜೀವ ತುಂಬಲು ಸಾಕಷ್ಟು ಸಂಖ್ಯೆಯಲ್ಲಿ ಸುಶಿಕ್ಷಿತರು ಮುಂದೆ ಬರಬೇಕು. ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್‌ಗಳ ಪ್ರತಿನಿಧಿಗಳಲ್ಲಿ ಗ್ರಾಮೀಣಾಭಿವೃದ್ಧಿಯ ಕುರಿತಾದ ಕಾಳಜಿ ಇದ್ದರೆ ಮಾತ್ರ ಹಳ್ಳಿಗಳ ಅಭಿವೃದ್ಧಿ ಮತ್ತು ಹಳ್ಳಿಗರ ಜೀವನ ಮಟ್ಟ ಸುಧಾರಣೆ ಸಾಧ್ಯ. ಮೋದಿಯೋರ್ವರಿಂದ ಈ ದೇಶದ ಆಮೂಲಾಗ್ರ ಬದಲಾವಣೆಯಾಗುತ್ತದೆ ಎಂದರೆ ಅದು ಸಾಧ್ಯವಾಗದ ವಿಷಯ. ಹಳ್ಳಿ ಹಳ್ಳಿಗಳಲ್ಲಿ ಸೇವಾ ಮನೋಭಾವದ ಉತ್ಕಟ ಇಚ್ಛೆಯ ಯುವಕರು, ಶಿಕ್ಷಿತರು, ನಿವೃತ್ತರು, ಗಣ್ಯರೆನಿಸಿಕೊಂಡವರು ಸಾರ್ವಜನಿಕ ಹಿತಾಸಕ್ತಿ ಕಾಪಾಡುವ, ಸಾರ್ವಜನಿಕ ಹಣದ ಅಪವ್ಯಯವಾಗದಂತೆ ನೋಡಿಕೊಳ್ಳುವಂತಾಗಬೇಕು.
– ಬೈಂದೂರು ಚಂದ್ರಶೇಖರ ನಾವಡ