Advertisement

ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟ್‌ ಸ್ಪರ್ಧೆ ಸಾಧ್ಯವೇ?

11:44 PM Nov 22, 2020 | mahesh |

ಮಣಿಪಾಲ: ಕ್ರಿಕೆಟ್‌ ಮೇಲಿರುವ ದೊಡ್ಡ ಕಳಂಕವೆಂದರೆ ಅದು “ಸಮಯ ಕೊಲ್ಲುವ ಕ್ರೀಡೆ’ ಎಂಬುದು. ವಿಶ್ವದ ಮಹೋನ್ನತ ಕ್ರೀಡಾಕೂಟವಾದ ಅಂಥ ಒಲಿಂಪಿಕ್ಸ್‌ ಪಂದ್ಯಾವಳಿಯೇ 15 ದಿನಗಳಲ್ಲಿ ಮುಗಿಯುವಾಗ, ವಿಶ್ವಕಪ್‌ ಹಾಗೂ ಐಪಿಎಲ್‌ನಂಥ ಕ್ರಿಕೆಟ್‌ ಟೂರ್ನಿ ಬರೋಬ್ಬರಿ ಒಂದೆರಡು ತಿಂಗಳ ಕಾಲ ಸಾಗುತ್ತದೆ! ಇಂಥ ಕಾರಣಗಳಿಂದಾಗಿಯೇ ಒಲಿಂಪಿಕ್ಸ್‌ನಿಂದ ಕ್ರಿಕೆಟನ್ನು ದೂರವೇ ಇಡಲಾಗಿದೆ.

Advertisement

ಆದರೆ ಈಗ ಕ್ರಿಕೆಟ್‌ ಆಡಳಿತ ಸಂಸ್ಥೆಯಾದ ಐಸಿಸಿ ಒಲಿಂಪಿಕ್ಸ್‌ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿದೆ. 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟನ್ನು ಪದಕ ಕ್ರೀಡೆಯಾಗಿ ಪರಿಗಣಿಸುವ ಬಗ್ಗೆ ಮುಂದಡಿ ಇಡುತ್ತಿದೆ. ಅದರಂತೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಕಾಮನ್ವೆಲ್ತ್‌ ಗೇಮ್ಸ್‌ ನಲ್ಲಿ ವನಿತಾ ಕ್ರಿಕೆಟ್‌ ಸ್ಪರ್ಧೆಗೆ ವೇದಿಕೆ ಸಿದ್ಧಗೊಂಡಿದೆ. ಐಸಿಸಿ ಬುಧವಾರ ಇದಕ್ಕೆ ಸಂಬಂಧಿಸಿದಂತೆ ಪ್ರಕಟನೆಯೊಂದನ್ನು ಬಿಡುಗಡೆ ಮಾಡಿದ್ದು, ಮುಂದಿನ ವರ್ಷದ ಎಪ್ರಿಲ್‌ ಒಂದಕ್ಕೆ ಅಂತ್ಯಗೊಳ್ಳುವ ರ್‍ಯಾಂಕಿಂಗ್‌ ಮಾನದಂಡದಂತೆ ಅಗ್ರ 6 ತಂಡಗಳ ಜತೆಗೆ ಆತಿಥೇಯ ಇಂಗ್ಲೆಂಡಿಗೆ ನೇರ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ಇದಕ್ಕೆ ಕಾರಣ, ಕ್ರಿಕೆಟಿನ ಕಿರು ಸ್ವರೂಪ. ಇದೀಗ 5 ದಿನದ ಟೆಸ್ಟ್‌ ಪಂದ್ಯಗಳಿಂದ ಹಂತ ಹಂತವಾಗಿ 10 ಓವರ್‌ಗಳಿಗೆ ಇಳಿದಿದೆ. ಇದರಿಂದ ಉಳಿದ ಕ್ರೀಡೆಗಳಂತೆಯೇ ಕ್ರಿಕೆಟನ್ನೂ ವಿಶ್ವ ದರ್ಜೆಯ ಕ್ರೀಡಾಕೂಟಗಳಿಗೆ ಸೇರ್ಪಡೆಗೊಳಿಸಬಹುದು ಎಂಬುದು ಐಸಿಸಿ ಲೆಕ್ಕಾಚಾರ.

128 ವರ್ಷಗಳ ಬಳಿಕ…
ಒಂದು ವೇಳೆ 2028ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ನಲ್ಲಿ ಕ್ರಿಕೆಟಿಗೆ ಅವಕಾಶ ನೀಡಿದ್ದೇ ಆದರೆ 128 ವರ್ಷಗಳ ಬಳಿಕ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ಬ್ಯಾಟ್‌-ಬಾಲ್‌ ಕದನವನ್ನು ಕಾಣಬಹುದಾಗಿದೆ! ಹಾಗಾದರೆ ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕಾಣಿಸಿಕೊಂಡಿತ್ತೇ ಎಂಬುದು ನಿಮ್ಮ ಪ್ರಶ್ನೆ ತಾನೆ? ಹೌದು, 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಒಂದು ಪದಕ ಸ್ಪರ್ಧೆಯಾಗಿತ್ತು! ಇಲ್ಲಿ ಯಾರು ಚಿನ್ನ ಗೆದ್ದರು ಎಂಬುದನ್ನು ತಿಳಿಯುವ ಮೊದಲು ಇದರ ಸ್ವಾರಸ್ಯಕರ ಹಿನ್ನೆಲೆಯನ್ನೊಮ್ಮೆ ತಿಳಿದುಕೊಳ್ಳೋಣ.

ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್‌ ಆಡಲಾಗಿತ್ತು ಎಂಬ ಕುತೂಹಲವೊಂದು ಸ್ಫೋಟಗೊಂಡದ್ದು 1984ರ ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ ವೇಳೆ. ಕೂಟಕ್ಕೂ ಮುನ್ನ ಸಂಘಟಕರು ಪುಸ್ತಕವೊಂದನ್ನು ಬಿಡುಗಡೆ ಮಾಡಿದ್ದರು. ಒಲಿಂಪಿಕ್ಸ್‌ ನಲ್ಲಿ ಹಿಂದೆ ಆಡಲಾಗಿದ್ದ, ಇಂದು ಅವಕಾಶ ವಂಚಿತವಾದ ಕ್ರೀಡೆಗಳ ಬಗ್ಗೆ ಇದರಲ್ಲಿ ಮಾಹಿತಿ ಇದ್ದಿತ್ತು. ಈ ಯಾದಿಯಲ್ಲಿ ಕ್ರಿಕೆಟ್‌ ಕೂಡ ಇದ್ದದ್ದು ಬಹಳ ಅಚ್ಚರಿಗೆ ಕಾರಣವಾಗಿತ್ತು. ಹಾಗಾದರೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಅಳವಡಿಸಿದ್ದು ಯಾವಾಗ ಎಂಬ ಬಗ್ಗೆ ಎಲ್ಲರೂ ಸಂಶೋಧನೆಗೆ ಇಳಿದರು! ಆಗಲೇ 1900ರ ಇತಿಹಾಸ ಬಿಚ್ಚಿಕೊಳ್ಳತೊಡಗಿದ್ದು.

Advertisement

ಎರಡನೇ ನಿದರ್ಶನ
ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ವನಿತಾ ಕ್ರಿಕೆಟ್‌ ಸ್ಪರ್ಧೆಯನ್ನು ಅಳವಡಿಸುತ್ತಿರುವುದು ಇದೇ ಮೊದಲು. ಒಟ್ಟಾರೆಯಾಗಿ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಕ್ರಿಕೆಟ್‌ ಕಾಣಿಸಿಕೊಳ್ಳುತ್ತಿರುವುದು ಇದು 2ನೇ ಸಲವಾಗಿದೆ. 1998ರ ಕೌಲಾಲಂಪುರ ಗೇಮ್ಸ್‌ನಲ್ಲಿ ಪುರುಷರ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಮೊದಲ ಕ್ರಿಕೆಟ್‌ ಚಿನ್ನ
1978ರಲ್ಲಿ ಇಂಗ್ಲೆಂಡಿನ ಕ್ರೀಡಾ ಪತ್ರಕರ್ತರಾದ ಡೇವಿಡ್‌ ಟೆರ್ರಿ ಮತ್ತು ಜಾನ್‌ ಗಿಲ್‌ಸ್ಟೋನ್‌ ಸೇರಿಕೊಂಡು “ಒಲಿಂಪಿಕ್ಸ್‌ ಮತ್ತು ಕ್ರಿಕೆಟ್‌’ ಬಗ್ಗೆ ಅಧ್ಯಯನ ನಡೆಸಿದ್ದರು. “ನ್ಪೋರ್ಟ್ಸ್ ಕ್ವಾರ್ಟರ್ಲಿ ಮ್ಯಾಗಝಿನ್‌’ನ 1978ರ ಸಂಚಿಕೆಯೊಂದರಲ್ಲಿ ಈ ಬಗ್ಗೆ ಲೇಖನ ಪ್ರಕಟವಾಗಿತ್ತು.
ಇನ್ನೂ ಆಳಕ್ಕಿಳಿದಾಗ 1882-1914ರ ಅವಧಿಯಲ್ಲಿ ಲಂಡನ್‌ನಿಂದ ಪ್ರಕಟವಾಗುತ್ತಿದ್ದ “ಕ್ರಿಕೆಟ್‌: ಎ ವೀಕ್ಲಿ ರೆಕಾರ್ಡ್‌ ಆಫ್‌ ದಿ ಗೇಮ್‌’ ಪತ್ರಿಕೆಯಲ್ಲಿ ಇದಕ್ಕೆ ಸಾಕ್ಷ್ಯ ಲಭಿಸುತ್ತದೆ. ಅಷ್ಟೇ ಅಲ್ಲ, 1900ರ ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಆಡಲಾದ ಕ್ರಿಕೆಟ್‌ ಪಂದ್ಯಗಳ ಸ್ಕೋರ್‌ ಕಾರ್ಡ್‌ ಕೂಡ ಇದರಲ್ಲಿ ಸಿಗುತ್ತದೆ!

ಆದರೆ ಇಲ್ಲಿ ಯಾವುದೇ ರಾಷ್ಟ್ರಗಳು ಕ್ರಿಕೆಟ್‌ ಆಡಿರಲಿಲ್ಲ. ಡೇವನ್‌ ಕೌಂಟಿ ವಾಂಡರರ್ ಮತ್ತು ಆಲ್‌ ಪ್ಯಾರಿಸ್‌ ಎಂಬ ತಂಡಗಳೆರಡರ ನಡುವೆ ಮುಖಾಮುಖೀ ಏರ್ಪಟ್ಟಿತ್ತು. ಇತ್ತಂಡಗಳಲ್ಲೂ 12 ಮಂದಿ ಆಟಗಾರರಿದ್ದರು. ಟೆಸ್ಟ್‌ ಮಾದರಿಯಲ್ಲಿ ನಡೆದ ಈ ಪಂದ್ಯಕ್ಕೆ ಕೇವಲ 2 ದಿನಗಳನ್ನು ಮೀಸಲಿಡಲಾಗಿತ್ತು. ಡೇವನ್‌ ಕೌಂಟಿ ವಾಂಡರರ್ ತಂಡ 158 ರನ್ನುಗಳಿಂದ ಗೆದ್ದು ಸ್ವರ್ಣ ಪದಕವನ್ನು ತನ್ನದಾಗಿಸಿಕೊಂಡಿತ್ತು!

ಅಂದಹಾಗೆ, 1998ರ ಕಾಮನ್ವೆಲ್ತ್‌ ಗೇಮ್ಸ್‌ ಏಕದಿನ ಕ್ರಿಕೆಟ್‌ನಲ್ಲಿ ಚಿನ್ನದ ಪದಕ ದಕ್ಷಿಣ ಆಫ್ರಿಕಾ ಪಾಲಾಗಿತ್ತು. ಫೈನಲ್‌ನಲ್ಲಿ ಅದು ಆಸ್ಟ್ರೇಲಿಯವನ್ನು ಮಣಿಸಿತ್ತು. ಇದರಲ್ಲಿ 16 ತಂಡಗಳು ಪಾಲ್ಗೊಂಡಿದ್ದವು. ಅಜಯ್‌ ಜಡೇಜ ನಾಯಕತ್ವದ ಭಾರತ ಗ್ರೂಪ್‌ ಹಂತದಲ್ಲೇ ನಿರ್ಗಮಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next