ಬೀಜಿಂಗ್: ಕೋವಿಡ್ 19 ವೈರಸ್ ಒಬ್ಬ ವ್ಯಕ್ತಿಯ ಸಮೀಪದ ಉಸಿರಾಟದಿಂದ, ಗಾಳಿಯ ಮೂಲಕ, ಕೆಮ್ಮು, ಜತೆಗೆ ಹೆಚ್ಚಾಗಿ ಬೆರೆಯುವ ಮೂಲಕ ಹರಡುತ್ತದೆ ಎಂಬ ಬಗ್ಗೆ ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಮತ್ತೊಂದೆಡೆ ಪುರುಷನ ವೀರ್ಯಾಣುವಿನಲ್ಲಿಯೂ ಕೋವಿಡ್ 19 ವೈರಸ್ ಪತ್ತೆಯಾಗಿರುವುದನ್ನು ಚೀನಾದ ಸಂಶೋಧಕರು ಪತ್ತೆ ಹಚ್ಚಿರುವುದಾಗಿ ವರದಿ ತಿಳಿಸಿದೆ.
ಕೋವಿಡ್ 19 ಸೋಂಕಿಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 38 ವ್ಯಕ್ತಿಗಳಲ್ಲಿ ಆರು ಮಂದಿಯ ವೀರ್ಯಾಣುವಿನಲ್ಲಿ ಕೋವಿಡ್ 19 ವೈರಸ್ ಪತ್ತೆಯಾಗಿರುವುದನ್ನು ಖಚಿತಪಡಿಸಿದೆ. ಇದರಲ್ಲಿ ನಾಲ್ವರು ಗಂಭೀರವಾಗಿ ಸೋಂಕಿಗೆ ಒಳಗಾಗಿದ್ದು, ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿ ವಿವರಿಸಿದೆ.
ಚೀನಾದ ಶಾಂಗ್ ಕಿಯೂ ಮುನ್ಸಿಪಲ್ ಆಸ್ಪತ್ರೆಯ ವರದಿಯನ್ನು ಆಧರಿಸಿ ಜಾಮಾ ನೆಟ್ ವರ್ಕ್ ಈ ಲೇಖನವನ್ನು ಪ್ರಕಟಿಸಿದೆ. ವಿರ್ಯಾಣುವಿನಲ್ಲಿ ಕೋವಿಡ್ ವೈರಸ್ ಪತ್ತೆಯಾಗಿದೆ, ಆದರೆ ಲೈಂಗಿಕ ಕ್ರಿಯೆ ಮೂಲಕ ಸೋಂಕು ಹರಡಲಿದೆಯೇ ಎಂಬುದನ್ನು ಸಂಶೋಧನೆ ದೃಢಪಡಿಸಿಲ್ಲ ಎಂದು ವರದಿ ಹೇಳಿದೆ.
ವೀರ್ಯಾಣುವಿನಲ್ಲಿ ಈ ವೈರಸ್ ಎಷ್ಟು ಕಾಲ ಜೀವಂತವಾಗಿರುತ್ತದೆ ಎಂಬುದು ಖಚಿತವಾಗಿಲ್ಲ, ಅಥವಾ ಒಂದು ವೇಳೆ ಪುರುಷ ಲೈಂಗಿಕ ಕ್ರಿಯೆ ನಡೆಸುವ ಮೂಲಕ ಪತ್ನಿಗೆ ಸೋಂಕು ಹರಡುವ ಸಾಧ್ಯತೆ ಇದೆಯಾ ಎಂಬ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದು ತಿಳಿಸಿದೆ.
ಕೋವಿಡ್ 19 ಸೋಂಕು ತಗುಲಿದ 34 ಮಂದಿ ಚೀನಾ ಪುರುಷರನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದ್ದು, ಅಮೆರಿಕ ಮತ್ತು ಚೀನಾ ಸಂಶೋಧಕರ ಪ್ರಕಾರ ಕೋವಿಡ್ ಸೋಂಕಿತ ವ್ಯಕ್ತಿಯ ವೀರ್ಯಾಣುವನ್ನು 8 ದಿನ ಹಾಗೂ 3 ತಿಂಗಳ ಬಳಿಕ ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ವಿವರಿಸಿದೆ.
ನೂತನ ಅಧ್ಯಯನದ ಪ್ರಕಾರ, ಕೋವಿಡ್ 19 ವೈರಸ್ ಮುಖ್ಯವಾಗಿ ಮನುಷ್ಯನ ಕೆಮ್ಮದಿಂದ ಹರಡುತ್ತದೆ. ಅಲ್ಲದೇ ಸಮೀಪ ಇರುವ ವ್ಯಕ್ತಿಗೂ ಹರಡಬಲ್ಲದು ಎಂದು ತಿಳಿಸಿದೆ. ಕೆಲವು ಅಧ್ಯಯನದ ಪ್ರಕಾರ ಕೋವಿಡ್ ವೈರಸ್ ರಕ್ತ, ಮಲ ಹಾಗೂ ಕಣ್ಣೀರಿನಲ್ಲಿ ಪತ್ತೆಯಾಗಿದೆ ಎಂದು ವಿವರಿಸಿದೆ.
ಝೀಕಾ ಹಾಗೂ ಎಬೋಲಾ ವೈರಸ್ ಪೀಡಿತ ವ್ಯಕ್ತಿಗಳು ಲೈಂಗಿಕ ಕ್ರಿಯೆ ನಡೆಸಿದಾಗ ಸೋಂಕು ಹರಡುವ ಸಾಧ್ಯತೆ ಇರಬಹುದು ಎಂದು ಅಧ್ಯಯನ ವರದಿ ತಿಳಿಸಿದ್ದು, ಕೋವಿಡ್ 19 ವೈರಸ್ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಇನ್ನಷ್ಟು ಆಳವಾದ ಅಧ್ಯಯನ ನಡೆಯಬೇಕಾಗಿದೆ ಎಂದು ಡಾ.ಜಾನ್ ತಿಳಿಸಿದ್ದಾರೆ.