Advertisement
ಏಕರಾಷ್ಟ್ರ-ಏಕಚುನಾವಣೆಯ ಸುಧಾರಣೆಯ ಮೊದಲ ಹೆಜ್ಜೆಯಾಗಿ ಕಾನೂನು ಆಯೋಗ 2018 ಆಗಸ್ಟ್ 30ರಂದು ವಿಸ್ತಾರವಾದ ವರದಿಯನ್ನು ತಯಾರಿಸಿ ಕೇಂದ್ರ ಸರಕಾರಕ್ಕೆ ಒಪ್ಪಿಸಿತ್ತು. ಏಕರಾಷ್ಟ್ರ-ಏಕಚುನಾವಣೆಯ ಸಂಕಲ್ಪವನ್ನು ಸಂವಿಧಾನ ಅನುಷ್ಠಾನಗೊಳಿಸುವ ಹೊಸ್ತಿಲಲ್ಲಿಯೇ ಹೊಂದಲಾಗಿತ್ತು. ಆದರೆ ಇದನ್ನು ಸಂವಿಧಾನದಲ್ಲಿ ಅಕ್ಷರಗಳ ರೂಪದಲ್ಲಿ ಜೋಡಿಸುವುದು ಅಷ್ಟು ಸುಲಭವಾಗಿರಲಿಲ್ಲ. 1952ರಿಂದ 1967ರ ವರೆಗಿನ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆದುಕೊಂಡು ಬಂದವು. ಆದರೆ 1970ರ ಅನಂತರದ ಕಾಲಘಟ್ಟಗಳಲ್ಲಿ ನಡೆದ ಚುನಾವಣೆಗಳು ಅವಧಿಯಲ್ಲಿ ಏರುಪೇರುಗಳನ್ನು ಕಂಡವು. 1951-52 ರಿಂದ 1967ರವರೆಗಿನ ಅವಧಿಯಲ್ಲಿ ನಡೆದ ರಾಜ್ಯ- ರಾಷ್ಟ್ರಮಟ್ಟದ ಚುನಾವಣೆಗಳು ಏಕರಾಷ್ಟ್ರ ಏಕ ಚುನಾವಣೆಯ ರೀತಿಯಲ್ಲಿ ನಡೆದು ಬರಲು ಮುಖ್ಯ ಕಾರಣವೆಂದರೆ ಅಂದು ಇಡೀ ರಾಷ್ಟ್ರ ವ್ಯಾಪಿಯಾಗಿ ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಸುಭದ್ರವಾದ ಸರಕಾರ ನೀಡುವಲ್ಲಿ ಸಫಲವಾಗಿತ್ತು. ಹಾಗಾಗಿ ಈ ಕಾಲಾವಧಿಯಲ್ಲಿ ಮಧ್ಯಾವಧಿ ಚುನಾವಣೆ ವಿಷಯ ಹುಟ್ಟಿಕೊಳ್ಳಲೇ ಇಲ್ಲ. 1970ರ ಅನಂತರ ಕಾಂಗ್ರೆಸ್ ನಿಧಾನವಾಗಿ ತನ್ನ ಹಿಡಿತವನ್ನು ಒಂದೊಂದೇ ರಾಜ್ಯಗಳಲ್ಲಿ ಕಳೆದುಕೊಳ್ಳುತ್ತಾ ಬಂತು. ಪ್ರಾದೇಶಿಕ ಪಕ್ಷಗಳು ತಲೆ ಎತ್ತಲು ಪ್ರಾರಂಭವಾಯಿತು. ಮುಂದೆ ಇದು ಬಿಜೆಪಿಯ ಸಮ್ಮಿಶ್ರ ಸರಕಾರದ ಆಡಳಿತದ ಅವಧಿಯಲ್ಲಿ ಮುಂದುವರಿಯಿತು. ಸಂವಿಧಾನದ ಪ್ರಮುಖ ವಿಧಿ 356 ಬಳಕೆಯೂ ಕೂಡಾ ಅದೆಷ್ಟೋ ರಾಜ್ಯಗಳಲ್ಲಿ ಮಧ್ಯಾವಧಿ ಚುನಾವಣೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಿಸಿದನ್ನು ಕಾಣಬಹುದು.
Related Articles
Advertisement
ಇನ್ನೊಂದು ಸಾಂವಿಧಾನಿಕ ಪ್ರಶ್ನೆ ಅಂದರೆ ಇದಾಗಲೇ ಹಳಿ ತಪ್ಪಿಕೊಂಡು ಓಡುತ್ತಿರುವ ಚುನಾಯಿತ ರಾಜ್ಯಗಳ ಹಾಗೂ ಕೇಂದ್ರ ಸರಕಾರವನ್ನು ಒಂದೇ ಹಳಿಗೆ ತರುವುದಾದರೂ ಹೇಗೆ? ಇದಕ್ಕೆ ಸಂವಿಧಾನದ ತಿದ್ದುಪಡಿ ಅನಿವಾರ್ಯವಲ್ಲವೇ? ಒಂದು ವೇಳೆ ಯಾವುದೇ ಸರಕಾರ ತಮ್ಮ ಅವಧಿ ಪೂರೈಸುವ ಮೊದಲೇ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದರೆ ಅಂತಹ ಸರಕಾರಗಳನ್ನು ಐದು ವರ್ಷದ ಅವಧಿಗೆ ಮುಂದುವರಿಸುವುದಾದರೂ ಹೇಗೆ? ಇಂದಿನ ಸಂವಿಧಾನದ ನಿಯಮ ಪ್ರಕಾರ ಆರು ತಿಂಗಳೊಳಗೆ ಚುನಾವಣೆ ನಡೆಸಿ ಹೊಸ ಸರಕಾರ ಸ್ಥಾಪಿಸಬೇಕು. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಮತ್ತೆ ಸಂವಿಧಾನಕ್ಕೆ ಮೂಲಭೂತವಾದ ತಿದ್ದುಪಡಿ ತರಬೇಕಾದ ಅನಿವಾರ್ಯತೆ ಇದೆ.
ಏಕರಾಷ್ಟ್ರ-ಏಕಚುನಾವಣೆಯ ಚಿಂತನೆ ಅಮೆರಿಕದಂತಹ ಅಧ್ಯಕ್ಷೀಯ ಮಾದರಿ ಸರಕಾರಕ್ಕೆ ಒಪ್ಪಬಹುದು ಹೊರತು ಭಾರತದಂತಹ ಸಂಸದೀಯ ಮಾದರಿ ವ್ಯವಸ್ಥೆಗೆ ಸರಿಹೊಂದಬಹುದೇ ಅನ್ನುವುದು ದೊಡ್ಡ ಪ್ರಶ್ನೆ. ಸಂಸದೀಯ ಸರಕಾರದಲ್ಲಿ ಶಾಸಕಾಂಗ ಕಾರ್ಯಾಂಗಕ್ಕೂ ನೇರವಾದ ಸಂಬಂಧವಿದೆ. ಅವಿಶ್ವಾಸದಂತಹ ಅಸ್ತ್ರಗಳು ಸದಾ ಬಳಕೆಯಾಗುತ್ತಿರುವ ಕಾರಣ ಚುನಾಯಿತ ಸರಕಾರ ಯಾವತ್ತೂ ಬೀಳುವ ಸಾಧ್ಯತೆ ಇರುತ್ತದೆ. ಇಲ್ಲಿ ನಮಗೆ ಹೊಳೆಯಬಹುದಾದ ಇನ್ನೊಂದು ಉತ್ತಮ ಮಾದರಿ ಅಂದರೆ ಜಪಾನ್ ಮಾದರಿ ಸಂಸದೀಯ ವ್ಯವಸ್ಥೆ. ಜಪಾನ್‌ನಲ್ಲಿ ನಮ್ಮ ಹಾಗೆ ಬಹುಪಕ್ಷ ಪದ್ಧತಿ ಇರುವ ಕಾರಣ ಯಾವಾಗಲೂ ಅಸ್ಥಿರ ಸರಕಾರ ಕಾಣಬೇಕಾದ ಪರಿಸ್ಥಿತಿ ಬಂದಾಗ ಅವರು ಮಾಡಿಕೊಂಡ ಒಂದು ಸುಧಾರಣೆ ಅಂದರೆ ಆ ದೇಶದ ಪ್ರಧಾನಮಂತ್ರಿಯನ್ನು ಅಲ್ಲಿನ ಸಂಸತ್ತು (ಡೈಟ್) ಆಯ್ಕೆ ಮಾಡುವುದು. ಒಂದು ವೇಳೆ ಆ ಪ್ರಧಾನಮಂತ್ರಿ/ಅರ್ಥಾತ್ ಸರಕಾರ ತೆಗೆಯಬೇಕಾದ ಪ್ರಸಂಗ ಬಂದಾಗ; ಸಂಸತ್ತಿನಲ್ಲಿ (ಡೈಟ್) ಮೊದಲು ಹೊಸ ಪ್ರಧಾನಮಂತ್ರಿ ಆಯ್ಕೆ ಮಾಡಿ; ಆಡಳಿತರೂಢ ಪ್ರಧಾನಮಂತ್ರಿಯನ್ನು ಕೆಳಗಿಳಿಸಬೇಕು. ಇದರಿಂದಾಗಿ ಅಲ್ಲಿ ಅವಧಿಪೂರ್ತಿ ಆಡಳಿತ ನಡೆಸುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ.
ಆದರೆ ಇಂತಹ ಸಮಗ್ರ ತರದ ಸುಧಾರಣೆ ನಮ್ಮ ಸಂವಿಧಾನದಲ್ಲಿ ತರಬೇಕಾದರೆ ಸಂವಿಧಾನಕ್ಕೆ ಮೂಲಭೂತವಾದ ತಿದ್ದುಪಡಿ ತರಬೇಕಾದ ಅನಿವಾರ್ಯತೆ ಇದೆ. ಸುಪ್ರೀಂ ಕೋರ್ಟು ಕೇಶಾವನಂದ ಭಾರತಿ ಮತ್ತು ಕೇರಳ ಸರಕಾರದ ಪ್ರಕರಣದಲ್ಲಿ ನೀಡಿದ ತೀರ್ಪೇಂದರೆ ‘ಇನ್ನು ಮುಂದೆ ಯಾವುದೇ ಸಂವಿಧಾನದ ತಿದ್ದುಪಡಿ ಸಂವಿಧಾನದ ಮೂಲ ಚೌಕಟ್ಟಿಗೆ ಚ್ಯುತಿ ಬಾರದ ತರದಲ್ಲಿ ಇರಬೇಕು ಎಂದು’. ಹಾಗಾಗಿ ಇಂತಹ ಮೂಲಭೂತ ಸ್ವರೂಪದ ಬದಲಾವಣೆ ಸುಲಭದಲ್ಲಿ ಕಾರ್ಯಗತಗೊಳಿಸಲು ಸಾಧ್ಯವಿಲ್ಲ ಅನ್ನುವುದು ಸಂವಿಧಾನ ತಜ್ಞರ ಅಭಿಪ್ರಾಯ.
ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ