ಬೆಂಗಳೂರು: ಒಂದು ಕಾಲದಲ್ಲಿ ದಂಡುಪಾಳ್ಯ ಗ್ಯಾಂಗ್ ಎಂದರೆ ರಾಜ್ಯ ಬೆಚ್ಚಿ ಬೀಳುತ್ತಿತ್ತು. ಇದೀಗ ಆ ಗ್ಯಾಂಗ್‌ನ ಕೆಲ ಸದಸ್ಯರು ಮೃತಪಟ್ಟರೆ, ಕೆಲವರು ಜೈಲಿನಲ್ಲಿದ್ದಾರೆ. ಈಗಲೂ ದಂಡುಪಾಳ್ಯ ಹೆಸರು ಕೇಳಿದರೆ ಅಂದಿನ ಭಯಾನಕ ಕೃತ್ಯಗಳು, ಗ್ಯಾಂಗ್‌ನ ವಿಕೃತಿ ಪ್ರದರ್ಶಿಸುವ ಸಿನೆಮಾಗಳ ನೆನಪಿಗೆ ಬರುತ್ತದೆ.
ಈ ಮಧ್ಯೆ ನಗರದ ಮನೆ ಮಾಲಕರೊಬ್ಬರು ದಂಡುಪಾಳ್ಯ ಊರಿನವರಿಗೆ ಮನೆ ಬಾಡಿಗೆ ನೀಡಬಹುದೇ? ಎಂದು ಪೊಲೀಸರ ಸಲಹೆ ಕೇಳಿದ್ದಾರೆ. ಮನೆ ಮಾಲಕ ಕೃಷ್ಣಮೂರ್ತಿ ಮನೆಗೆ ಇತ್ತೀಚೆಗೆ ಒಬ್ಬ ಬಾಡಿಗೆದಾರ ಬಂದಿದ್ದು, ಅವರ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಹಳ್ಳಿಯ ಹೆಸರನ್ನು ದಂಡುಪಾಳ್ಯ ಎಂದು ನಮೂದಿಸಲಾಗಿತ್ತು. ಅದರಿಂದ ಆತಂಕಗೊಂಡ ಮನೆ ಮಾಲಕ ದಂಡುಪಾಳ್ಯದವರಿಗೆ ಮನೆ ಬಾಡಿಗೆ ಕೊಡಬಹುದೇ? ಎಂದು ಸಾಮಾಜಿಕ ಜಾಲತಾಣ ಟ್ವೀಟರ್ ಮೂಲಕ ಪೊಲೀಸರ ಸಲಹೆ ಕೇಳಿದ್ದಾರೆ.
ಇದನ್ನೂ ಓದಿ:ಅರುಣಾಚಲ ಪ್ರದೇಶ: ಹಿಮಪಾತಕ್ಕೆ ಸಿಲುಕಿದ್ದ 7 ಯೋಧರು ಹುತಾತ್ಮ
ದಂಡುಪಾಳ್ಯ ಹಳ್ಳಿಯ ಜನರು ಕ್ರೂರವಾಗಿ ಕೊಲೆ ಮಾಡುತ್ತಾರೆ. ಈ ಕುರಿತು ನಾನು ಹಲವು ಸಿನೆಮಾಗಳನ್ನು ನೋಡಿದ್ದೇನೆ. ಈಗ ಅವರಿಗೆ ಮನೆ ಬಾಡಿಗೆ ಕೊಟ್ಟರೆ ಸರಿಯೇ? ದಯವಿಟ್ಟು ನನಗೆ ನೀವು ಸಹಾಯ ಮಾಡಬಹುದೇ? ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಟ್ವೀಟ್‌ಗೆ ಪೊಲೀಸರು, ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ. ಅವರು ನಿಮಗೆ ಸಲಹೆ ನೀಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.