Advertisement
ಬೆಂಗಳೂರು: “ನಮ್ಮ ಮೆಟ್ರೋ’ ಮೊದಲ ಹಂತ ಸಂಪೂರ್ಣವಾಗಿ ವಾಣಿಜ್ಯ ಸೇವೆಗೆ ಮುಕ್ತಗೊಳ್ಳುತ್ತಿರುವ ಬೆನ್ನಲ್ಲೇ ಎರಡನೇ ಹಂತದ ಯೋಜನೆ ಚುರುಕುಗೊಂಡಿದ್ದು, ಗೊಟ್ಟಿಗೆರೆ-ನಾಗವಾರ ಕಾರಿಡಾರ್ ನಿರ್ಮಾಣಕ್ಕೆ ಅಡ್ಡಿಯಾಗಲಿರುವ 690 ಮರಗಳನ್ನು ತೆರವುಗೊಳಿಸಲು ಉದ್ದೇಶಿಸಲಾಗಿದೆ.
Related Articles
Advertisement
ಉದ್ದೇಶಿತ ಕಾರಿಡಾರ್‌ನಲ್ಲಿ 7 ಕಿ.ಮೀ. ಎತ್ತರಿಸಿದ ಮತ್ತು 13.8 ಕಿ.ಮೀ. ಸುರಂಗ ಮಾರ್ಗ ಬರುತ್ತದೆ. ಈ ಪೈಕಿ ಎತ್ತರಿಸಿದ ಮಾರ್ಗದ ಮಧ್ಯದಿಂದ ಎರಡೂ ಕಡೆ 19 ಮೀ. ಅಗಲ ಮತ್ತು 140 ಮೀ. ಎತ್ತರದಲ್ಲಿ ಹಾಗೂ ಸುರಂಗ ಮಾರ್ಗದ ಮಧ್ಯದಿಂದ 20 ಮೀ. ಅಗಲ ಮತ್ತು 200 ಮೀ. ಎತ್ತರದಲ್ಲಿ ಬರುವ ಮರಗಳನ್ನು ಗುರುತಿಸಿ, ತೆರವುಗೊಳಿಸಲಾಗುತ್ತಿದೆ ಎಂದೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
92 ಸಾವಿರ ಚ.ಮೀ. ಭೂಸ್ವಾಧೀನ: ಗೊಟ್ಟಿಗೆರೆ-ನಾಗವಾರ ನಡುವೆ ಒಟ್ಟಾರೆ 96.02 ಸಾವಿರ ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಇದರಲ್ಲಿ ಪ್ರಸ್ತುತ ಶೇ.34.45ರಷ್ಟು ಜಾಗದಲ್ಲಿ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿದ್ದರೆ, ಶೇ.9.05 ವಸತಿ, ಶೇ.1.14ರಷ್ಟು ಕೈಗಾರಿಕೆಗೆ ಸಂಬಂಧಿಸಿದ ಜಾಗ ಇದೆ. ಉದ್ದೇಶಿತ ಮಾರ್ಗದಲ್ಲಿ ಬರುವ 13 ಬಸ್ ನಿಲ್ದಾಣಗಳು, ಎರಡು ಮ್ಯಾನ್‌ಹೋಲ್‌ಗಳು, ನಾಲ್ಕು ವಿದ್ಯುತ್ ಮಾರ್ಗಗಳು, 87 ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಾಗುತ್ತದೆ. ಎಷ್ಟು ಸ್ಥಿರಾಸ್ತಿಗಳು ಬರುತ್ತವೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.
ಶೇ. 59 ದ್ವಿಚಕ್ರ ವಾಹನಗಳೇ!: ಈ ಮಾರ್ಗದಲ್ಲಿ ಬರುವ ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆಯ ಬಾಲ್ಡ್‌ವಿನ್ ಬಾಯ್ಸ ಸ್ಕೂಲ್, ಟ್ಯಾನರಿ ರಸ್ತೆಯ ಡಿ.ಜೆ.ಹಳ್ಳಿ ಬಸ್ ನಿಲ್ದಾಣದಲ್ಲಿ “ಪೀಕ್ ಅವರ್’ನಲ್ಲಿ ವಾಹನದಟ್ಟಣೆಯನ್ನೂ ಅಧ್ಯಯನ ಮಾಡಲಾಗಿದೆ. ಅದರಂತೆ, ದ್ವಿಚಕ್ರ ವಾಹನಗಳ ಪ್ರಮಾಣ ಶೇ.38ರಿಂದ ಶೇ.59ರಷ್ಟಿದೆ. ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಅತಿ ಹೆಚ್ಚು ರಸ್ತೆಗಿಳಿದಿರುತ್ತವೆ ಎಂದೂ ಗುರುತಿಸಲಾಗಿದೆ.
ಇನ್ನು ಬನ್ನೇರುಘಟ್ಟದ ಐಐಎಂಬಿ, ಜಯದೇವ ಆಸ್ಪತ್ರೆ, ರಿಚ್‌ಮಂಡ್ ವೃತ್ತ, ನಾಗವಾರ ಜಂಕ್ಷನ್‌ಗಳಲ್ಲಿ ವಾಯು ಮಾಲಿನ್ಯ ಅಧ್ಯಯನ ಮಾಡಲಾಗಿದ್ದು, ಧೂಳಿನ ಕಣಗಳು (ಆರ್‌ಎಸ್‌ಪಿಎಂ) ಕನಿಷ್ಠ 255.23 ಘನ ಮೀಟರ್‌ನಿಂದ ಗರಿಷ್ಠ 305.47 ಘನ ಮೀಟರ್ ಇದೆ. ಆದರೆ, ರಾಷ್ಟ್ರೀಯ ಸರಾಸರಿ ಪ್ರಮಾಣ 100 ಘನ ಮೀಟರ್ ಇದೆ. ಅದೇ ರೀತಿ, ಈ ಮಾರ್ಗದಲ್ಲಿ ಶಬ್ದ ಮಾಲಿನ್ಯ ಹಗಲು ಕನಿಷ್ಠ 74.5 ಡೆಸಿಬಲ್‌ನಿಂದ 78.1 ಡೆಸಿಬಲ್ ಹಾಗೂ ರಾತ್ರಿ ವೇಳೆ ಕನಿಷ್ಠ 68.3ರಿಂದ ಗರಿಷ್ಠ 72.1 ಡೆಸಿಬಲ್ ಇದೆ.
ಮರ ಕಡಿದರೆ ಖುಷಿ ಆಗಲ್ಲ: ಜಾರ್ಜ್: “ಮರಗಳನ್ನು ಕಡಿಯುವುದರಿಂದ ನಮಗೇನೂ ಖುಷಿ ಆಗುವುದಿಲ್ಲ. ಆದರೆ, ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಮರಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ,’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. “ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಮರಗಳನ್ನು ಕಡಿದ ಸಂದರ್ಭದಲ್ಲಿ ಅದಕ್ಕೆ ಪ್ರತಿಯಾಗಿ ಬೇರೆಡೆ ಸಸಿಗಳನ್ನು ನೆಡಲಾಗುತ್ತದೆ. ಸಾಧ್ಯವಾದಷ್ಟು ಮರಗಳನ್ನು ಕಡಿಯುವುದನ್ನು ತಪ್ಪಿಸಲು ಯತ್ನಿಸಲಾಗುತ್ತದೆ. ಸ್ಥಳಾಂತರಿಸಲಿಕ್ಕೂ ಪ್ರಯತ್ನ ಮಾಡಲಾಗುತ್ತದೆ. ಆದರೆ, ಕೆಲವೆಡೆ ಅನಿವಾರ್ಯವಾದಾಗ ಕಡಿಯಕೇಬೇಕು,’ ಎಂದಿದ್ದಾರೆ.
* ವಿಜಯಕುಮಾರ್ ಚಂದರಗಿ