Advertisement

ಕ್ಯಾಂಪಸ್‌ ಡ್ರೈವ್‌

10:27 PM Sep 19, 2019 | Team Udayavani |

ಫೈನಲ್‌ ಇಯರ್‌ ಎಂಟ್ರಿ ಆಗ್ತಿದ್ದ ಹಾಗೆ ಮೊದಲು ತಲೆ ಕೊರೆಯುವ ಚಿಂತೆ “ಕ್ಯಾಂಪಸ್‌ ಡ್ರೈವ್‌’. ಯಾವ ಬ್ರಾಂಚೇ ಆಗಲಿ, ಕೋರ್ಶೇ ಆಗಲಿ, ಮಾರ್ಕ್ಸ್, ರ್‍ಯಾಂಕ್‌ ಏನೇ ಇರಲಿ ಮುಖ್ಯವಾಗಿ ಇಂಜಿನಿಯರಿಂಗ್‌ ಮುಗಿಸಿ ಹೊರಗೆ ಬರೋವಾಗ ಕೈಯಲ್ಲೊಂದು ಕೆಲಸ ಇರಬೇಕು ಅನ್ನುವುದು ಅನಧಿಕೃತ ನಿಯಮವಾಗಿಬಿಟ್ಟಿದೆ. ಆ ನಿಯಮವನ್ನು ಪಾಲಿಸಲು ಹೊರಟ ಪಯಣವೇ ಈ ಲೇಖನ.

Advertisement

ಸಿಇಟಿ ರ್‍ಯಾಂಕಿಂಗ್‌ ಮೇಲೆ ಇಂಜಿನಿಯರಿಂಗ್‌ ಕೋರ್ಸ್‌ ಹಿಡಿದು ಅದ್ಹೇಗೋ ಎದ್ದುಬಿದ್ದು ಮೂರು ವರ್ಷ ಮುಗಿಸಿ ಫೈನಲ್‌ ಇಯರ್‌ ತಲುಪಿದ್ದೆ. ನಿಜವಾಗ್ಲೂ ಇಂಜಿನಿಯರಿಂಗ್‌ ಮಾಡಿದ್ದೇಕೆ ಎಂದು ಪ್ರೂವ್‌ ಮಾಡೋ ಸಮಯ ಬಂದಾಗಿತ್ತು.

ಇನ್ಫೋಸಿಸ್‌, ವಿಪ್ರೋ ಮುಂತಾದ ದಿಗ್ಗಜ ಕಂಪೆನಿಗಳಲ್ಲಿ ಶತಾಯಗತಾಯ ಕೆಲಸ ಗಿಟ್ಟಿಸಲೇಬೇಕೆಂದು ಇಂಜಿನಿಯರಿಂಗ್‌ ಸೇರುವರಿದ್ದಾರೆ. ಸುಮ್ಮನೆ ಟೈಂಪಾಸ್‌ಗಾಗಿ ಇಂಜಿನಿಯರಿಂಗ್‌ ಮಾಡುವವರಿದ್ದಾರೆ. ಇವರೆಲ್ಲರ ಮಧ್ಯೆ ಎಲೆಕ್ಟ್ರಾನಿಕ್ಸ್‌ ನಲ್ಲೇ ಮುಂದುವರಿದು ಏನಾದರೂ ಸಾಧಿಸಲೇಬೇಕೆಂದು ನಾನೂ ಇಂಜಿನಿಯರಿಂಗ್‌ಗೆ ಕಾಲಿಟ್ಟಿದ್ದೆ. ಮುಖ್ಯವಾಗಿ ಮೊದಲ ಮೂರು ವರ್ಷ ಹಲವರಿಂದ “ನಿನಗೆ ಕೆಲಸ ಸಿಗೋದು ಡೌಟು’, “ನೀನು ಹೀಗಿದ್ರೆ ಖಂಡಿತಾ ಸಾಧ್ಯವಿಲ್ಲ’, “ಇಂಜಿನಿಯರಿಂಗ್‌ ಸೇರಿದ್ದೇ ವೇಸ್ಟ್‌’ ಅಂತ ಹೇಳಿಸಿಕೊಂಡು, ಇಂಗ್ಲಿಷ್‌, ಸ್ಟೇಜ್‌ ಫಿಯರ್‌ನಂತಹ ದೌರ್ಬಲ್ಯಗಳನ್ನಿಟ್ಟುಕೊಂಡಿದ್ದರೂ, ಅಂತಿಮ ವರ್ಷದ ಪ್ಲೇಸ್‌ಮೆಂಟ್‌ ಎಂಬ ಹಬ್ಬದಲ್ಲಿ ನಾನು ಭಾಗವಹಿಸುವುದೆಂದು ನಿರ್ಧರಿಸಿಬಿಟ್ಟಿದ್ದೆ.

ಹೇಗಾದರೂ ಮಾಡಿ ಕೆಲಸ ಸಿಗಲೇಬೇಕೆಂದು ಪ್ರಯತ್ನಿಸುತ್ತಿರುವವರ ನಡುವೆ ನಾನೂ ಸಹ ಬರುವ ಎಲ್ಲಾ ಕಂಪೆನಿಗಳನ್ನು ಅಟೆಂಡ್‌ ಮಾಡಬೇಕೆಂಬ ಗುರಿಯಿಟ್ಟುಕೊಂಡಿದ್ದೆ. ನನ್ನ ದೌರ್ಬಲ್ಯಗಳ ಬಗ್ಗೆ ತಿಳಿದಿದ್ದ ನನಗೆ ಪ್ಲೇಸ್‌ಮೆಂಟ್‌ ಆಗೋದು ಕಷ್ಟ ಎಂದು ಅನಿಸತೊಡಗಿದ್ದೇ ಇದಕ್ಕೆ ಮುಖ್ಯ ಕಾರಣ. ಆದದ್ದಾಗಲಿ, ಅನುಭವವಾದರೂ ಸಿಗುತ್ತದೆ ಎಂದು ಪ್ಲೇಸ್‌ಮೆಂಟ್‌ಗೆ ತಯಾರಾದೆ.

ಫಾರ್ಮಲ್ಸ್‌ , ಬ್ಲ್ಯಾಕ್‌ ಶೂ, ಬ್ಲ್ಯಾಕ್‌ ಬೆಲ್ಟ್, ಇನ್‌ಶರ್ಟ್‌ ಮಾಡಿಕೊಂಡು ಹೊರಟೆ, ಮೊದಲ ಕ್ಯಾಂಪಸ್‌ ಡ್ರೈವ್‌ಗೆ. ಅಂದುಕೊಂಡಂತೆಯೇ ಆಗಿತ್ತು. ಮೊದಲ ಮ್ಯಾಚ್‌ನಲ್ಲೇ ಹೀನಾಯ ಸೋಲು! ಮೊದಲ ಸುತ್ತನ್ನೂ ಕ್ಲಿಯರ್‌ ಮಾಡಲು ನನ್ನಿಂದಾಗಿರಲಿಲ್ಲ. ಆದರೆ, ಕಪ್‌ ಗೆಲ್ಲುವ ಯಾವ ಆಸೆಯೂ ಇಲ್ಲದೆ, ಕೇವಲ ಭಾಗವಹಿಸುವುದಷ್ಟೇ ಮುಖ್ಯ ಎನ್ನುವ ಐರ್‌ಲ್ಯಾಂಡ್‌ ತಂಡದಂತಿದ್ದ ನನಗೆ ಈ ಸೋಲಿನಿಂದ ಆಘಾತವಾಗಿರಲಿಲ್ಲ. ಮುಂದಿನ ಪಂದ್ಯವಾಡಲು ಸಿದ್ಧವಾಗಿದ್ದೆ.

Advertisement

ಮುಂದೆ ನಡೆದ ಕ್ಯಾಂಪಸ್‌ ಡ್ರೈವ್‌ಗಳಲ್ಲಿ ನನಗೆ ನನ್ನ ನೈಜ ಸಾಮರ್ಥ್ಯದ ಅರಿವಾಯಿತು. ಮೊದಲ ಸುತ್ತನ್ನು ಸಲೀಸಾಗಿ ನಿವಾರಿಸಿ, ಫೈನಲ್‌ವರೆಗೂ ಆರಾಮವಾಗಿ ಸಾಗತೊಡಗಿದೆ. ನನ್ನದಲ್ಲದ ಸಾಫ್ಟ್ವೇರ್‌ ಫೀಲ್ಡ್‌ನಲ್ಲೂ ಆ ಫೀಲ್ಡ್‌ನವರಿಗೇ ಸ್ಪರ್ಧೆ ನೀಡತೊಡಗಿದೆ. ಆದರೂ ಕೊನೆಯ ಸುತ್ತಲ್ಲಿ ಹೊರಬೀಳುತ್ತಿದ್ದೆ. ಕೊನೆಯ ಸುತ್ತಿನಲ್ಲಿ ಸಾಲು ಸಾಲು ಸೋಲುಗಳು ದಾಖಲಾದವು. ಕೆಲವರು ನೇರವಾಗಿ ರಿಜೆಕ್ಟ್ ಮಾಡಿದರೆ, ಇನ್ನು ಕೆಲವರು “ನಿನ್ನ ಫೀಲ್ಡ್‌ನಲ್ಲೇ ಮುಂದುವರಿ’ ಎಂದು ಪರೋಕ್ಷವಾಗಿ ನಿರಾಕರಿಸಿದರು. ಹೆಚ್ಚು ಕಂಪೆನಿಗಳಲ್ಲಿ ಭಾಗವಹಿಸುವುದೇ ಮುಖ್ಯವೆಂದುಕೊಂಡಿದ್ದ ನಾನು ಕೆಲವೊಂದು ಕಂಪೆನಿಗಳ ಪ್ಲೇಸ್‌ಮೆಂಟನ್ನು ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ. ಸಮಯ ಸರಿದಂತೆ ಪ್ಲೇಸ್‌ಮೆಂಟ್‌ನ ಮಹತ್ವ ಅರಿವಾಗತೊಡಗಿತು. ಇಪ್ಪತ್ತಕ್ಕೂ ಹೆಚ್ಚು ಡ್ರೈವ್‌ ಅಟೆಂಡ್‌ ಮಾಡಿದ ನಂತರ ಹೀಗೇ ಒಂದು ದಿನ ಪೂಲ್‌ ಕ್ಯಾಂಪಸ್‌ ಡ್ರೈವ್‌ ಅಟೆಂಡ್‌ ಮಾಡಿ ಮೂರು ಸುತ್ತು ಕ್ಲಿಯರ್‌ ಮಾಡಿ, ನಾಲ್ಕನೇ ಸುತ್ತನ್ನೂ ಮುಗಿಸಿ ಹಿಂದಿರುಗಿದೆ. ರಿಸಲ್ಟ್ ಇನ್ನೂ ಬಿಟ್ಟಿರಲಿಲ್ಲ. ಆದರೆ ಅದಾಗಲೇ “ಕಂಗ್ರಾಟ್ಸ್‌’ಗಳು ಬರಲು ಶುರುವಾಗಿತ್ತು. ಸುಮಾರು ಒಂದು ತಿಂಗಳ ಕಾಯುವಿಕೆಯ ನಂತರ, ಒಂದು ದಿನ ರಾತ್ರಿ ಪ್ಲೇಸ್‌ಮೆಂಟ್‌ ಆಫೀಸರ್‌ ಕಾಲ್‌ ಮಾಡಿ, “ಪ್ಲೇಸ್‌ಮೆಂಟ್‌ ಆಗಿದೆ ಕಂಗ್ರಾಟ್ಸ್‌’ ಎಂದಾಗ ಪಟ್ಟ ಪ್ರಯತ್ನಕ್ಕೆ ಫ‌ಲ ಸಿಕ್ಕಿತು ಎಂದು ದೇವರಿಗೆ ಪ್ರಣಾಮ ಸಲ್ಲಿಸಿದೆ.

ಒಬ್ಬ ವ್ಯಕ್ತಿಯ ಯಶಸ್ಸಿನ ಕತೆಯಲ್ಲಿ ಗೆಲುವಿಗಿಂತ ಹೆಚ್ಚು ಆತನ ಸೋಲುಗಳ ಬಗ್ಗೆಯೇ ಉಲ್ಲೇಖವಿರುತ್ತದೆ. ಉಳಿದವರು ಯಶಸ್ವೀ ವ್ಯಕ್ತಿಯ ಯಶಸ್ಸಿನ ಬಗ್ಗೆ ಮಾತನಾಡುತ್ತಿದ್ದರೆ, ಯಶಸ್ವೀ ವ್ಯಕ್ತಿಯು ತನ್ನ ಸೋಲಿನ ಕತೆ ಹೇಳುತ್ತಿರುತ್ತಾನೆ. ಅದೇ ರೀತಿ ನನ್ನ ಕೊನೆಯ ಪ್ಲೇಸ್‌ಮೆಂಟ್‌ ಗೆಲುವಿಗಿಂತ ಮೊದಲು ಬಂದ ಸೋಲುಗಳು ನನ್ನನ್ನು ಹೆಚ್ಚು ಗುರುತಿಸುವಂತೆ ಮಾಡಿದವು. ಅದೇನೇ ಇರಲಿ, ಈ ಕ್ಯಾಂಪಸ್‌ ಡ್ರೈವ್‌ನ ಪ್ರಯಾಣವನ್ನು ಯಶಸ್ವಿಯಾಗಿ ಮುಗಿಸಿ, “ಇಂಜಿನಿಯರ್‌’ ಆಗಿ ಇಂಜಿನಿಯರಿಂಗ್‌ ಕಾಲೇಜಿಗೆ ವಿದಾಯ ಹೇಳುತ್ತಿರುವುದು ತುಂಬಾ ಖುಷಿ ಕೊಡುತ್ತಿದೆ.

ತುಳಸೀಧರ ಎಂ.
ನಿಕಟಪೂರ್ವ ವಿದ್ಯಾರ್ಥಿ, ಎಸ್‌ಡಿಎಂ ಐಟಿ, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next