Advertisement

ಕ್ಯಾಂಪಸ್‌ ಬರ್ಡ್‌ ಕೌಂಟ್‌ ಮಂಗಳೂರು ವಿ.ವಿ. ರಾಜ್ಯಕ್ಕೆ ಪ್ರಥಮ

08:34 AM Apr 11, 2018 | Team Udayavani |

ಉಳ್ಳಾಲ: ದೇಶದ ಸಂರಕ್ಷಿತ ಅರಣ್ಯಗಳ ಹೊರಗಿರುವ ಖಗ ಸಂಕುಲದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ “ಬರ್ಡ್‌ ಕೌಂಟ್‌ ಇಂಡಿಯಾ’ ಭಾರತಾದ್ಯಂತ ನಡೆಸಿದ “ಕ್ಯಾಂಪಸ್‌ ಪಕ್ಷಿ ಗಣತಿ’ ಕಾರ್ಯಕ್ರಮದಲ್ಲಿ ಮಂಗಳೂರು ವಿ.ವಿ. ಪಕ್ಷಿ ವೈವಿಧ್ಯದಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ದೇಶಮಟ್ಟದಲ್ಲಿ 5ನೇ ಸ್ಥಾನ, ಹಕ್ಕಿ ಚೆಕ್‌ಲಿಸ್ಟ್‌ನಲ್ಲಿ ದ್ವಿತೀಯ ಸ್ಥಾನಿಯಾಗಿದೆ.

Advertisement

ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿಗಳು ಕಳೆದ ಫೆಬ್ರವರಿಯಲ್ಲಿ ಹಕ್ಕಿ ಗಣತಿ ನಡೆಸಿ 110 ಪ್ರಭೇದದ ಹಕ್ಕಿಗಳಿರುವುದನ್ನು ಗುರುತಿಸಿ ದಾಖಲಿಸಿದ್ದರು.

ಈ ಬಾರಿ ಅತಿಹೆಚ್ಚು 
ಮಂಗಳೂರು ವಿ.ವಿ. ಕಳೆದ 3 ವರ್ಷಗಳಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, 2016ರ‌ ಗಣತಿಯಲ್ಲಿ 77 ಪ್ರಭೇದಗಳನ್ನು ದಾಖಲಿಸಿತ್ತು. 2017ರಲ್ಲಿ 95 ಪ್ರಭೇದದ ಹಕ್ಕಿಗಳು ದಾಖಲಾಗಿದ್ದವು. ಈ ಬಾರಿ 110 ಪ್ರಭೇದದ ಹಕ್ಕಿಗಳು ಪತ್ತೆಯಾಗಿವೆ. 

ಕರ್ನಾಟಕದ 23 ಮತ್ತು ದೇಶಾದ್ಯಂತ 230 ಕ್ಯಾಂಪಸ್‌ಗಳಲ್ಲಿ ಈ ಗಣತಿ ಕಾರ್ಯ ನಡೆದಿದೆ.  

ಪತ್ತೆಯಾದ ಅಪೂರ್ವ ಹಕ್ಕಿಗಳು
ಕ್ಯಾಂಪಸ್‌ನಲ್ಲಿ ಈ ಬಾರಿ ಹಲವು ಅಪರೂಪದ ಪ್ರಭೇದಗಳ ಹಕ್ಕಿಗಳು ಪತ್ತೆಯಾಗಿವೆ. ಕಪ್ಪೆಬಾಯಿ ಬಿಳಿಮಚ್ಚೆ ನತ್ತಿಂಗ, ಚಂದ್ರ ಮುಕುಟ, ಕರಿತಲೆ ಹಕ್ಕಿ, ಸಣ್ಣ ಮಿನಿವೆಟ್‌, ನೀಲಿ ರಾಜ ಹಕ್ಕಿ, ಹಳದಿ ಟಿಟ್ಟಿಭ ಹಾಗೂ ನೀಲಕಂಠ ಕಂಡುಬಂದಿವೆ. ವಲಸೆ ಹಕ್ಕಿಗಳಾದ ನವರಂಗ, ಕಂದು ಕೀಚುಗ, ಬೂಟು ಗಾಲಿನ ಗಿಡುಗ, ಬೂದು ಕಾಜಾಣ, ಬೂದು ಉಲಿಯಕ್ಕಿ, ಹಸಿರು ಉಲಿ ಯಕ್ಕಿ, ಕಂದು ಎದೆಯ ನೊಣಹಿಡುಕ, ಕಪ್ಪು ಹಕ್ಕಿ, ಬೂದು ಸಿಪಿಲೆ ಮತ್ತು ಕಡು ಗಂದು ಪಿಪಿಳೀಕ ಹಕ್ಕಿ ಕಾಣ ಸಿಕ್ಕಿವೆ.

Advertisement

ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ವಿನೀತ್‌ ಕುಮಾರ್‌ ಮಾರ್ಗದರ್ಶನದಲ್ಲಿ ಗಣತಿ ನಡೆದಿತ್ತು. ಸಂಶೋಧನ ವಿದ್ಯಾರ್ಥಿ ಜಗದೀಶ್‌ ಪೈಟನ್ಕರ್‌, ಆನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿ ಗಳಾದ ಭಾಗ್ಯಾ ಯು.ಜೆ., ಡೊನಾಲ್ಡ್‌ ಪ್ರೀತಮ್‌ ಸೇರಿದಂತೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಭಾಗದ ಮುಖ್ಯಸ್ಥ ಪ್ರೊ| ರಾಜ ಶೇಖರ್‌ ಪಾಟೀಲ್‌, ವಿಜ್ಞಾನಿ ಡಾ| ಶಾಮ್‌ ಪ್ರಸಾದ್‌ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next