Advertisement
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕೂ ತಾಲೂಕುಗಳು ಬರಲಿವೆ. ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಯುಗಾದಿ ಹಬ್ಬದ ಬಳಿಕ ಪ್ರಚಾರದ ಅಬ್ಬರ ಹೆಚ್ಚಾಗಿದೆ. ಮತ ಬೇಟೆಗಾಗಿ ಪೈಪೋಟಿ ಹೆಚ್ಚಾಗಿದೆ.
Related Articles
Advertisement
ರಂಗೇರಿದ ಚುನಾವಣಾ ಕಣ: ಮಂಕು ಕವಿದಿದ್ದ ಪ್ರಚಾರ ಹಬ್ಬದ ನಂತರ ಚುರುಕುಗೊಂಡಿದೆ. ಚುನಾವಣಾ ಕಣದಲ್ಲಿ ಬಿಎಸ್‌ಪಿ, ಸಿಪಿಎಂ, ಕೆಜೆಪಿ ಪಕ್ಷಗಳ ಅಭ್ಯರ್ಥಿಗಳು ಇದ್ದಾರೆ. ಆದರೆ, ಜೆಡಿಎಸ್, ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ನಡೆಯುತ್ತಿದೆ.
ನಾಮಪತ್ರ ಸಲ್ಲಿಸಿದ ನಂತರ ಇಲ್ಲಿಯವರೆಗೂ ಕ್ಷೇತ್ರದಲ್ಲಿ ಸ್ಟಾರ್ ಪ್ರಚಾರಕರಾಗಲಿ ಅಥವಾ ಪಕ್ಷಗಳ ಘಟಾನುಘಟಿಗಳು ಪ್ರಚಾರಕ್ಕೆ ಬಾರದ್ದರಿಂದ ಚುನಾವಣಾ ಕಣಕ್ಕೆ ಮಂಕು ಕವಿದಿತ್ತು. ಈಗಾಗಲೇ ಗ್ರಾಮಗಳಲ್ಲಿ ಮತ್ತು ನಗರಗಳಲ್ಲಿ ಅಭ್ಯರ್ಥಿಗಳ ಪರವಾಗಿ ಬಿಸಿಲನ್ನೂ ಲೆಕ್ಕಿಸದೆ ವಿವಿಧ ರೀತಿಯಲ್ಲಿ ಭರದ ಪ್ರಚಾರ ನಡೆಯುತ್ತಿದೆ.
ಚುನಾವಣೆಗೆ ಇನ್ನು 10 ದಿನಗಳು ಬಾಕಿ ಇರುವುದರಿಂದ ಅಭ್ಯರ್ಥಿಗಳು ಮತಕ್ಕಾಗಿ ಅನೇಕ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿ ದ್ವಾರಕಾನಾಥ್ ಮತ್ತು ಸಿಪಿಎಂ ಅಭ್ಯರ್ಥಿ ವರಲಕ್ಷ್ಮೀ, ಕೆಜೆಪಿ ಅಭ್ಯರ್ಥಿ ನಾಗೇಂದ್ರ ರಾಮ್ ಶಿಂಧೆ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.
ಮತದಾರರ ನಾಡಿ ಮಿಡಿತ ನಿಗೂಢ: ಚುನಾವಣೆಯಲ್ಲಿ ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಲು ಘಟಾನುಘಟಿ ನಾಯಕರು ಜಿಲ್ಲೆಯಲ್ಲಿ ಸಭೆ, ಸಮಾರಂಭ, ರೋಡ್ ಶೋ ಮುಂತಾದವುಗಳ ಮೂಲಕ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
ಪ್ರಚಾರದ ವೇಳೆ ಮತದಾರರನ್ನು ಸೆಳೆಯಲು ಇನ್ನಿಲ್ಲದ ಆಶ್ವಾಸನೆ, ಘೋಷಣೆ, ಭರವಸೆಗಳನ್ನು ಮೊಳಗಿಸುತ್ತಿದ್ದಾರೆ. ಆದರೆ, ಮತದಾರ ಪ್ರಭುವಿನ ನಾಡಿ ಮಿಡಿತ ಮಾತ್ರ ಇನ್ನೂ ನಿಗೂಢವಾಗಿದೆ. ಯಾವ ಪಕ್ಷದ ಅಭ್ಯರ್ಥಿಗೆ ವಿಜಯ ಮಾಲೆ ಪ್ರಾಪ್ತವಾಗುತ್ತದೆ ಎಂಬುದು ಮಾತ್ರ ತೀವ್ರ ಕುತೂಹಲ ಕೆರಳಿಸಿದೆ.
* ಎಸ್ ಮಹೇಶ್