Advertisement

ಅಡಿಕೆ ಧಾರಣೆ ಇಳಿಸುವ ಖಾಸಗಿ ಮಾರುಕಟ್ಟೆ ತಂತ್ರಕ್ಕೆ ಕ್ಯಾಂಪ್ಕೋ ಪ್ರತಿತಂತ್ರ!

11:12 PM Sep 07, 2020 | mahesh |

ಪುತ್ತೂರು: ಅಡಿಕೆ ಧಾರಣೆಯನ್ನು ಇಳಿಸಿ ಲಾಭ ಗಳಿಸುವ ಖಾಸಗಿ ಮಾರುಕಟ್ಟೆ ತಂತ್ರಗಾರಿಕೆಯನ್ನು ಸಹಕಾರ ಸಂಸ್ಥೆ ಕ್ಯಾಂಪ್ಕೋ ವಿಫ‌ಲಗೊಳಿಸಿದ್ದು, ಧಾರಣೆ ಏರಿಸುವ ಮೂಲಕ ಖಾಸಗಿಯವರೂ ಧಾರಣೆಯನ್ನು ಇನ್ನಷ್ಟು ಏರುವ ಅನಿವಾರ್ಯತೆ ಸೃಷ್ಟಿಸಿದೆ. ಮಂಗಳೂರು ಚಾಲಿ ಅಡಿಕೆ ಈ ಬಾರಿ ಭರ್ಜರಿ ಧಾರಣೆ ಏರಿಕೆ ಕಂಡಿತು. ಲಾಕ್‌ಡೌನ್‌ ಅನಂತರ 250 ರೂ. ಆಸುಪಾಸಿನಲ್ಲಿದ್ದ ಹಳೆ, ಹೊಸ ಅಡಿಕೆ ಧಾರಣೆ 380 ರಿಂದ 400 ರೂ. ತನಕ ಜಿಗಿದು ದಾಖಲೆ ಸೃಷ್ಟಿಸಿತು. ಆದರೆ ಎರಡು ವಾರಗಳಿಂದ ಖಾಸಗಿ ಖರೀದಿ ಕೇಂದ್ರಗಳಲ್ಲಿ ಧಾರಣೆ ಇಳಿಮುಖ ದಾಖಲಾಗಿತ್ತು.

Advertisement

ಏರಿಕೆಯ ಪ್ರತಿತಂತ್ರ
370ರಿಂದ 375 ರೂ. ತನಕ ಧಾರಣೆ ಕಂಡಿದ್ದ ಹೊಸ ಅಡಿಕೆ 348-350 ರೂ. ಆಸುಪಾಸಿನಲ್ಲಿದೆ. 400 ರೂ. ಗಡಿಯಲ್ಲಿದ್ದ ಹಳೆ ಅಡಿಕೆ ಕೂಡ 390 ರೂ. ಆಸುಪಾಸಿನಲ್ಲಿತ್ತು. ಈಗ ಕ್ಯಾಂಪ್ಕೋ ಸಂಸ್ಥೆ ಧಾರಣೆಯನ್ನು ಏರಿಕೆಯತ್ತ ಕೊಂಡೊಯ್ಯುವ ಮೂಲಕ ಇಳಿಕೆಯ ತಂತ್ರ
ಗಾರಿಕೆಗೆ ಸಡ್ಡು ಹೊಡೆದಿದೆ. ಸೆ. 7 ರಂದು ಕ್ಯಾಂಪ್ಕೋದಲ್ಲಿ ಹೊಸ ಅಡಿಕೆ 360 ರೂ., ಹಳೆ ಅಡಿಕೆ 400 ರೂ.ಗಳಲ್ಲಿ ಖರೀದಿಯಾಗಿದೆ. ಪರಿಣಾಮ ಖಾಸಗಿ ಖರೀದಿ ಕೇಂದ್ರಗಳಲ್ಲಿ ಹೊಸ ಅಡಿಕೆ 355, ಹಳೆ ಅಡಿಕೆ 395 ರೂ.ಗೆ ಖರೀದಿಸಲಾಗಿದೆ.

450 ರೂ. ನಿರೀಕ್ಷೆ !
ಉತ್ತರ ಭಾರತದಲ್ಲಿ ಪ್ರವಾಹದ ಕಾರಣ ಪೂರ್ತಿ ಪ್ರಮಾಣದಲ್ಲಿ ಮಾರುಕಟ್ಟೆ ತೆರೆಯದಿರುವುದು ಕೂಡ ಈಗಿನ ಧಾರಣೆ ಏರಿಳಿಕೆಗೆ ಕಾರಣ. ಇದು ತಾತ್ಕಾಲಿಕ ಸಮಸ್ಯೆ. ಇದನ್ನೇ ನೆಪವಾಗಿಟ್ಟುಕೊಂಡು ಧಾರಣೆ ಇಳಿಸುವ ತಂತ್ರ ನಡೆಯುತ್ತಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಈ ಬಾರಿ ಫಸಲು ಕಡಿಮೆ ಆಗಿರುವುದು, ಅಂತರ್‌ ದೇಶೀಯ ಗಡಿಗಳು ತೆರವು ಸಾಧ್ಯತೆ ಕಡಿಮೆ ಇರುವುದು, ಈಗಾಗಲೇ ಶೇ. 75ರಷ್ಟು ಅಡಿಕೆ ಮಾರಾಟ ಆಗಿರುವುದು ಮೊದಲಾದ ಕಾರಣಗಳಿಂದ ಅಡಿಕೆ ಕೊರತೆ ಉಂಟಾಗಿ ಧಾರಣೆ 450 ರೂ.ಗೆ ಏರುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ರೈಲ್ವೇಯಲ್ಲಿ ಸಾಗಾಟ ಧಾರಣೆ ಏರಿಕೆಗೆ ಪೂರಕ
ಕೊಂಕಣ ರೈಲ್ವೇ ಪುತ್ತೂರಿನಿಂದ ಸ್ಪ³ರ್ಧಾತ್ಮಕ ದರದಲ್ಲಿ ಗುಜಾರಾತ್‌, ಅಹಮದಾಬಾದ್‌ ಮೊದಲಾದೆಡೆ ಅಡಿಕೆ ಸಾಗಾಟಕ್ಕೆ ಮುಂದೆ ಬಂದಿದೆ. ಇದರಿಂದ ಸಾಗಾಟದ ವೆಚ್ಚ ಇಳಿಮುಖ ಮತ್ತು ಸಮಯ ಉಳಿತಾಯವಾಗಲಿದ್ದು ಅಡಿಕೆ ಧಾರಣೆ ಏರಿಕೆಗೆ ಪರೋಕ್ಷ ಕಾರಣವಾಗಲಿದೆ. ಈ ಹಿಂದೆ ಲಾರಿ, ಟ್ರಕ್‌ಗಳಲ್ಲಿ ಅಡಿಕೆಯನ್ನು ಸಾಗಿಸುತ್ತಿದ್ದಾಗ ಆಗುತ್ತಿದ್ದುದಕ್ಕಿಂತ ರೈಲ್ವೇಯಲ್ಲಿ ವೆಚ್ಚ ಕಡಿಮೆ ಆಗುವ ಕಾರಣ ಈ ಲಾಭ ಧಾರಣೆ ಏರಿಕೆಗೆ ಕಾರಣವಾದೀತು ಎಂದು ಊಹಿಸಲಾಗಿದೆ.

ಉತ್ತರ ಭಾರತದ ದಾಸ್ತಾನು ಕೇಂದ್ರಗಳಲ್ಲಿ ಶೇ. 65ಕ್ಕೂ ಅಧಿಕ ಪ್ರಮಾಣದಲ್ಲಿ ಅಡಿಕೆ ಕೊರತೆ ಉಂಟಾಗಿದೆ. ಅವು ಪೂರ್ಣವಾಗಿ ತೆರೆದಾಗ ಅಡಿಕೆಗೆ ಇನ್ನಷ್ಟು ಬೇಡಿಕೆ ಬರಲಿದೆ. ಈಗಾಗಲೇ ಕ್ಯಾಂಪ್ಕೋ ಗುಣಮಟ್ಟದ ಹಳೆ ಅಡಿಕೆಗೆ ಕೆ.ಜಿ.ಗೆ 400 ರೂ. ನೀಡಿ ಖರೀದಿಸುತ್ತಿದೆ. – ಸತೀಶ್ಚಂದ್ರ ಎಸ್‌.ಆರ್‌.,ಅಧ್ಯಕ್ಷರು, ಕ್ಯಾಂಪ್ಕೋ

Advertisement

ಅಡಿಕೆ ಧಾರಣೆ ಬಗ್ಗೆ ಬೆಳೆಗಾರರು ಆತಂಕ ಪಡಬೇಕಿಲ್ಲ. ಬೇಡಿಕೆ ಈಗಲೂ ಇದೆ. ಅಡಿಕೆ ಆಮದು ಈಗ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬೆಳೆಗಾರರಲ್ಲಿ ಯಾವುದೇ ಭಯ ಬೇಡ. –
ಮಹೇಶ್‌ ಪಿ.,
ಕಾರ್ಯದರ್ಶಿ, ಅಖೀಲ ಭಾರತ ಅಡಿಕೆ ಬೆಳೆಗಾರರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next