Advertisement

ಬೆಳೆಗಾರರ ಸಮಸ್ಯೆ ನಿವಾರಣೆಗೆ ಕ್ಯಾಂಪ್ಕೋ ಬದ್ಧ

03:19 PM Aug 18, 2017 | |

ಸಾಗರ: ಕ್ಯಾಂಪ್ಕೋ ಅಡಿಕೆ ಬೆಳೆಗಾರರ ರಕ್ಷಣಾ ಕವಚ ಇದ್ದಂತೆ. ಬೆಳೆಗಾರರ ಪರವಾದ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಕ್ಯಾಂಪ್ಕೋ ಸಂಸ್ಥೆ ಬದ್ದವಾಗಿದೆ ಎಂದು ಕ್ಯಾಂಪ್ಕೋ ಸಂಸ್ಥೆ ಅಧ್ಯಕ್ಷ ಎಸ್‌.ಆರ್‌. ಸತೀಶ್ಚಂದ್ರ ತಿಳಿಸಿದರು.

Advertisement

ನಗರದ ಎಪಿಎಂಸಿ ಆವರಣದ ಮಾರಾಟ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಯಾಂಪ್ಕೋ ಬೆಳೆಗಾರರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ, ಅಡಿಕೆ ಚಾಕಲೇಟ್‌ ಬಿಡುಗಡೆ ಮಾಡಿ ಅವರು ಮಾತನಾಡಿದರು. ಅಡಿಕೆ ಧಾರಣೆ ಏರಿಳಿತವಾಗುತ್ತಿರುವ ಹೊತ್ತಿನಲ್ಲಿ ಕ್ಯಾಂಪ್ಕೋ ಸಂಸ್ಥೆಯನ್ನು ಒಳಗೊಂಡ ನಿಯೋಗ ಸಂಸದರಾದ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಕೇಂದ್ರ ವಾಣಿಜ್ಯ ಸಚಿವರಾಗಿರುವ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಅಡಿಕೆ ಆಮದು ಶುಲ್ಕವನ್ನು ಹೆಚ್ಚಿಸುವಂತೆ ಮನವಿ ಸಲ್ಲಿಸಿತ್ತು. ಮನವಿ ಸಲ್ಲಿಸಿ ಒಂದೇ ವಾರದಲ್ಲಿ ಅಡಿಕೆ ಆಮದು ಶುಲ್ಕ 166 ರೂ.ನಿಂದ 251 ರೂ.ಗೆ ಹೆಚ್ಚಿಸಲಾಯಿತು. ಇದರಿಂದ ವಿದೇಶದಿಂದ ಭಾರತಕ್ಕೆ ಬರುತ್ತಿದ್ದ ಅಡಿಕೆ ಕಡಿಮೆಯಾಗುವ ಜೊತೆಗೆ ದೇಶಿಯ
ಅಡಿಕೆಗೆ ಒಳ್ಳೆಯ ಬೆಲೆ ಬಂದಿದೆ ಎಂದರು.

ಕ್ಯಾಂಪ್ಕೋ ಅಡಿಕೆ ಜೊತೆ ಕೋಕೋ, ರಬ್ಬರ್‌, ಕಾಳುಮೆಣಸು ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ಜೂನ್‌ ಜುಲೆ„ ತಿಂಗಳಿನಲ್ಲಿ ಕೋಕೋ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕುಸಿದಿತ್ತು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಕೋಕೋ ಖರೀದಿಸುವ ಮೂಲಕ ಬೆಳೆಗಾರರ ನೆರವಿಗೆ ನಿಂತಿತ್ತು. ಮುಂದಿನ ದಿನಗಳಲ್ಲಿ ತೆಂಗು, ಗೇರು ಮೊದಲಾದವುಗಳನ್ನು ಖರೀದಿಸುವ, ಸಂಸ್ಕರಿಸುವ ನಿಟ್ಟಿನಲ್ಲಿ ಕ್ಯಾಂಪ್ಕೋ ಚಿಂತನೆ ನಡೆಸಿದೆ ಎಂದರು. 

ಪ್ರಸ್ತುತ ಅಡಿಕೆ ಕೃಷಿ ತುಂಬಾ ತ್ರಾಸದಾಯಕವಾಗಿದೆ. ಅಡಿಕೆ ಜಗಿಯುವವರ ಸಂಖ್ಯೆ ಸಹ ತೀರ ಕಡಿಮೆ ಇದೆ. ಆದರೆ ಅಡಿಕೆ ಉತ್ಪಾದನೆ ಹೆಚ್ಚು ಆಗುತ್ತದೆ. ಈ ಹಿನ್ನೆಲೆಯಲ್ಲಿ ಅಡಿಕೆಯ ಪರ್ಯಾಯ ಉಪಯೋಗದ ಬಗ್ಗೆ ಕ್ಯಾಂಪ್ಕೋ ಸಂಶೋಧನೆ ನಡೆಸುವವರಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದರ ಜೊತೆಗೆ ಕಾರ್ಮಿಕರ ಸಮಸ್ಯೆಯನ್ನು ಮನಗಂಡು ವಿವಿಧ ಯಂತ್ರಗಳನ್ನು ಆವಿಷ್ಕರಿಸುವ ಬಗ್ಗೆ ಸಹ ಗಮನ ಹರಿಸಲಾಗಿದೆ ಎಂದು ಹೇಳಿದರು. 

ಹಿರಿಯ ಸಹಕಾರಿ ಧುರೀಣ ಎಂ. ಹರನಾಥ ರಾವ್‌ ಮಾತನಾಡಿ, ಕ್ಯಾಂಪ್ಕೋ ಇನ್ನಷ್ಟು ಪರಿಣಾಮಕಾರಿಯಾಗಿ ಬೆಳೆಗಾರರ ಪರವಾಗಿ ನಿಲ್ಲುವ ಅಗತ್ಯವಿದೆ. ಮಲೆನಾಡು ಭಾಗದ ಅಡಿಕೆ ಖರೀದಿಗೆ ಕ್ಯಾಂಪ್ಕೋ ಹೆಚ್ಚಿನ ಒತ್ತು ನೀಡಬೇಕು. ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆಗಾರರು ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕ್ಯಾನ್ಸರ್‌ ಚಿಕಿತ್ಸೆಗೆ ಕ್ಯಾಂಪ್ಕೋ ವತಿಯಿಂದ ಬೆಳೆಗಾರ ಸದಸ್ಯರಿಗೆ ಹೆಚ್ಚಿನ ನೆರವು ನೀಡಬೇಕು. ಅಡಿಕೆ ಬೆಲೆ ಸ್ಥಿರೀಕರಣ ಸಂಬಂಧ ಸರ್ಕಾರದ ಜೊತೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು.

Advertisement

ಹಿರಿಯ ಅಡಿಕೆ ಬೆಳೆಗಾರರಾದ ಗಣಪತಿ ಭಟ್‌ ಕವಲುಮನೆ, ಪ್ರಕಾಶ್‌, ಗಣಪತಿ ಕೆ., ರಾಮಚಂದ್ರ ಎಂ.ಎನ್‌. ಪಾಲ್ಗೊಂಡಿದ್ದರು. ಮಂಗಳೂರಿನಲ್ಲಿ ದ್ವಿತೀಯ ವರ್ಷದ ಮೆಕಾನಿಕಲ್‌ ಇಂಜಿನಿಯರಿಂಗ್‌ ಪದವಿ ಅಭ್ಯಾಸ ಮಾಡುತ್ತಿರುವ ಹೊಸನಗರ ವಾಸಿ ಎಂ.ಸಿ. ನಿಖಲ್‌ ತಯಾರಿಸಿದ ಅಡಿಕೆ ಚಾಕಲೇಟ್‌ ಬಿಡುಗಡೆ ಮಾಡಲಾಯಿತು. ಆಪ್ಸ್‌ಕೋಸ್‌ ಅಧ್ಯಕ್ಷ ಕೆ.ಎಂ. ಸೂರ್ಯನಾರಾಯಣ, ಅಧಿಕಾರಿಗಳಾದ ಅಹ್ಮದ್‌ ಶರೀಫ್‌, ಗೋವಿಂದ ಭಟ್‌,
ಮುರುಳಿಧರ್‌ ಇದ್ದರು. ಮನಸ್ವಿ ಮತ್ತು ಮನ್ವಿತಾ ಪ್ರಾರ್ಥಿಸಿದರು. 

ಶಂಕರನಾರಾಯಣ ಭಟ್‌ ಸ್ವಾಗತಿಸಿದರು. ಶಂಭುಲಿಂಗ ಹೆಗಡೆ ವಂದಿಸಿದರು. ಜಯ ಭಂಡಾರಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next