Advertisement

ಕಲಿಕೆ, ವೈಜ್ಞಾನಿಕ ಮನೋಭಾವ ಬೆಳೆಸಲು ಅಭಿಯಾನ

02:02 AM Nov 03, 2020 | mahesh |

ಬೆಂಗಳೂರು: ಕೊರೊನಾದಿಂದಾಗಿ ಶಾಲೆಗಳು ಮುಚ್ಚಿದ್ದು, ಕಲಿಕೆಯಿಂದ ದೂರ ಉಳಿದಿರುವ ಗ್ರಾಮೀಣ ಭಾಗದ ಮಕ್ಕಳಿಗೆ “ಕಲಿಕೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಪಂಚಾಯತ್‌ ಗ್ರಂಥಾಲಯಗಳಿಗೆ ಬನ್ನಿ’ ಎನ್ನುವ ಯೋಜನೆಯೊಂದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಾಗಿದೆ.

Advertisement

ಇದಕ್ಕಾಗಿ ಮಕ್ಕಳ ದಿನಾಚರಣೆ (ನ.14) ಬಳಿಕ ಮೂರು ತಿಂಗಳ ಕಾಲ ರಾಜ್ಯದ ಎಲ್ಲ 6,022 ಗ್ರಾಮ ಪಂಚಾಯತ್‌ಗಳಲ್ಲಿ ಇಲಾಖೆಯು “ಮಕ್ಕಳ ಉತ್ಸವ’ವನ್ನು ಹಮ್ಮಿಕೊಳ್ಳಲಿದೆ. ಈ ಅವಧಿಯಲ್ಲಿ ಗ್ರಂಥಾಲಯ ಕೇಂದ್ರಿತ ಚಟುವಟಿಕೆಗಳಿಗೆ ಕ್ರಿಯಾ ಯೋಜನೆ ರೂಪಿಸಿ ಕೊಳ್ಳಲು ಗ್ರಾ.ಪಂ.ಗಳಿಗೆ ಇಲಾಖೆ ಸೂಚನೆ ನೀಡಿದೆ.

ಇದಕ್ಕಾಗಿ ಗ್ರಾಮೀಣ ಭಾಗದ 6ರಿಂದ 18 ವರ್ಷದ ಎಲ್ಲ ಮಕ್ಕಳನ್ನು ಗ್ರಂಥಾಲಯದೊಂದಿಗೆ ಜೋಡಿಸಲಾಗುವುದು. ಇದಕ್ಕಾಗಿ ಗ್ರಾ. ಪಂ. ಗ್ರಂಥಾಲಯಗಳಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಮಕ್ಕಳಿಗೆ ಪ್ರೇರೇಪಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದಕ್ಕೆ ಬೇಕಾದ ಪುಸ್ತಕಗಳನ್ನು ಹೊಂದಿಸಿ ಕೊಳ್ಳಲು ರಾಜ್ಯ ಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತಿದೆ. ಅಲ್ಲದೆ ಜಿಲ್ಲೆ ಮತ್ತು ಪಂಚಾಯತ್‌ ಮಟ್ಟದಲ್ಲೂ ಪುಸ್ತಕ ಸಂಗ್ರಹ ಅಭಿಯಾನ ನಡೆಸಲು ಸೂಚಿಸಲಾಗಿದೆ. ಪುಸ್ತಕ ಸಂಗ್ರಹಕ್ಕೆ ದೇಣಿಗೆಯನ್ನೂ ಪಡೆದುಕೊಳ್ಳಬಹುದು. ಯೋಜನೆಗೆ ಶಿಕ್ಷಕರು, ವಿಷಯ ತಜ್ಞರು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಪಡೆದುಕೊಳ್ಳಲಾ ಗುವುದು. ಉತ್ಸವದ ಭಾಗವಾಗಿ ಮಕ್ಕಳ ಹಕ್ಕು ಗಳು, ಬಾಲ್ಯ ವಿವಾಹ, ಮಕ್ಕಳ ಕಳ್ಳ ಸಾಗಾಣಿಕೆ, ಬಾಲ ಕಾರ್ಮಿಕ ಮುಂತಾದ ವಿಷಯಗಳ ಬಗ್ಗೆಯೂ ಚರ್ಚೆಗಳನ್ನು ಏರ್ಪಡಿಸಲಾಗುತ್ತದೆ.

ಸಿಬಂದಿಗೆ ತರಬೇತಿ
ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಕ್ಕೆ ತರಲು ಎಲ್ಲ ಗ್ರಾ. ಪಂ. ಅಧ್ಯಕ್ಷರು/ಆಡಳಿತಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ, ಸಿಡಿಪಿಒ, ಕ್ಷೇತ್ರ ಶಿಕ್ಷಣಾಧಿಕಾರಿ, ಪಿಡಿಒ, ಅಂಗನವಾಡಿ ಮೇಲ್ವಿಚಾರ ಕರು ಸಹಿತ 15 ಸಾವಿರ ಮಂದಿಗೆ ನ.4ರಂದು ಉಪಗ್ರಹ ಆಧಾರಿತ ತರಬೇತಿ ನೀಡಲಾಗುವುದು.

Advertisement

ಮಕ್ಕಳ ಧ್ವನಿಪೆಟ್ಟಿಗೆ
ನ.14ರಂದು ಎಲ್ಲ ಗ್ರಾ. ಪಂ.ಗಳಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆ ಜರಗಲಿದ್ದು, ಕೋವಿಡ್‌ ಮಾರ್ಗ ಸೂಚಿ ಕಾರಣ ಆಯ್ದ ಮಕ್ಕಳು ಇದರಲ್ಲಿ ಭಾಗವಹಿ ಸುತ್ತಾರೆ. ಪಂಚಾಯತ್‌ನ ವಾರ್ಡ್‌ ಮತ್ತು ಜನ ವಸತಿ ಪ್ರದೇಶಗಳ ಸಮಸ್ಯೆಗಳನ್ನು ಗುರುತಿಸಿ ಅವು ಗಳ ಬಗ್ಗೆ ಚರ್ಚಿಸಿದ ಬಳಿಕ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಕ್ಕೆ ತರಲಾಗುವುದು. ಪ್ರತಿ ಗ್ರಾ. ಪಂ.ನ ಫೇಸ್‌ಬುಕ್‌ ಪೇಜ್‌ ತೆರೆದು ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಜತೆಗೆ ಜನನಿಬಿಡ ಪ್ರದೇಶಗಳಲ್ಲಿ “ಮಕ್ಕಳ ಧ್ವನಿ ಪೆಟ್ಟಿಗೆ’ ಅಳವಡಿಸಲಾಗುವುದು. ಇದರಲ್ಲಿ ಮಕ್ಕಳ ಸಮಸ್ಯೆಗಳನ್ನು ಬರೆದು ಹಾಕಬಹುದು.

ಗ್ರಾಮೀಣ ಭಾಗದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಗ್ರಂಥಾಲಯ ಕೇಂದ್ರಿತ ಮತ್ತು ವಿಜ್ಞಾನ ಆಧಾರಿತ ಚಟುವಟಿಕೆಗಳಿಗೆ ಒತ್ತು ನೀಡಲು ಮೂರು ತಿಂಗಳ ಕಾಲ ಪಂಚಾಯತ್‌ಗಳಲ್ಲಿ ಮಕ್ಕಳ ಉತ್ಸವಗಳನ್ನು ನಡೆಸಲು ಮತ್ತು ನ.14ರಂದು ಮಕ್ಕಳ ವಿಶೇಷ ಗ್ರಾಮ ಸಭೆ ಆಯೋಜಿಸುವ ಸಂಬಂಧ ಈಗಾಗಲೇ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಒಂದೆರಡು ದಿನಗಳಲ್ಲಿ ಸುತ್ತೋಲೆ ಹೊರಡಿಸಲಾಗುವುದು.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಆಯುಕ್ತರು, ಪಂಚಾಯತ್‌ರಾಜ್‌ ಆಯುಕ್ತಾಲಯ.

Advertisement

Udayavani is now on Telegram. Click here to join our channel and stay updated with the latest news.

Next