ಪಿರಿಯಾಪಟ್ಟಣ: ನೆರೆ ಹುಣಸೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಪ್ರಚಾರದಲ್ಲಿ ತಾಲೂಕಿನ ಹಾಲಿ ಮಾಜಿ ಶಾಸಕರು ಹಾಗೂ ಕಾರ್ಯಕರ್ತರ ಅಬ್ಬರ ಜೋರಾಗಿದೆ. ರಾಜ್ಯ ರಾಜಕಾರಣದ ಅಳಿವು ಉಳಿವು, ರಾಜಕಾರಣದ ದಿಕ್ಸೂಚಿಯ ಚುನಾವಣೆ ಎಂದು ಬಿಂಬಿತವಾಗಿರುವ ರಾಜ್ಯದ 17 ಕ್ಷೇತ್ರಗಳ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಚುನಾವಣೆಯೂ ಗಮನ ಸೆಳೆದಿದೆ.
ಪ್ರಥಮ ಚುನಾವಣೆ: ಮೊದಲನೆಯದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆ, ಇವರು ವಿರೋಧ ಪಕ್ಷದ ನಾಯಕರಾಗಿ ಆಧಿಕಾರ ವಹಿಸಿಕೊಂಡ ನಂತರ ಪ್ರಥಮವಾಗಿ ನಡೆಯುತ್ತಿರುವ ಚುನಾವಣೆ ಇದಾಗಿದೆ. ತಮ್ಮ ರಾಜಕೀಯ ವೈರಿ ಎಚ್.ವಿಶ್ವನಾಥ್ ಅವರನ್ನು ಸೋಲಿಸಿ ತಮ್ಮ ಆಪ್ತ ಎಚ್.ಪಿ.ಮಂಜುನಾಥ್ ಅವರನ್ನು ಗೆಲ್ಲಿಸುವ ಪಣ ಹಾಗೂ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ನಡೆಯುತ್ತಿರುವ ಎಂಬಿತ್ಯಾದಿ ಕಾರಣಗಳಿಂದ ಹುಣಸೂರು ಉಪಚುನಾವಣೆ ರೋಚಕತೆ ಪಡೆದಿದೆ.
ಪಿರಿಯಾಪಟ್ಟಣ-ಹುಣಸೂರು ನಂಟು: ನೆರೆಯ ತಾಲೂಕಾದ ಹುಣಸೂರಿಗೂ ಪಿರಿಯಾಪಟ್ಟಣಕ್ಕೂ ಅವಿನಾಭಾವ ಸಂಬಂಧ ಇದೆ. ಪಿರಿಯಾಪಟ್ಟಣದ ಶಾಸಕ ಕೆ.ಮಹದೇವ್ ಹಾಗೂ ಮಾಜಿ ಸಚಿವ ಕೆ.ವೆಂಕಟೇಶ್ ಹುಣಸೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಮಾಜಿ ಸಚಿವ ಕೆ.ವೆಂಕಟೇಶ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಪರ ಹಬ್ಬನಕುಪ್ಪೆ, ಚಿಲ್ಕುಂದ, ನಾಗಮಂಗಲ, ಅತ್ತಿಕುಪ್ಪೆ, ಹನಗೋಡು, ಹೊನ್ನೇನಹಳ್ಳಿ, ವಡ್ಡಂಬಾಳು, ತಟ್ಟೆಕೆರೆ ಮತ್ತಿತರ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದರೆ, ಶಾಸಕ ಕೆ.ಮಹದೇವ್ ಅವರು ಜೆಡಿಎಸ್ ಅಭ್ಯರ್ಥಿ ಸೋಮಶೇಖರ್ ಪರ ಹುಣಸೂರು ಟೌನ್, ಬನ್ನಿಕುಪ್ಪೆ, ಹನಗೋಡು, ಬಿಳಿಕೆರೆ ಗ್ರಾಮಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇನ್ನಳಿದಂತೆ ತಾಲೂಕಿನ ಗಡಿ ಭಾಗದ ಆಯಾಯ ಪಕ್ಷದ ಕಾರ್ಯಕರ್ತರು, ಮುಖಂಡರು, ಸಂಬಂಧಿಕರ ಮನೆಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ.
ಅದೇ ರೀತಿ ತಾಲೂಕು ಬಿಜೆಪಿ ಘಟಕದ ಮುಖಂಡರು ಹಾಗೂ ಕಾರ್ಯಕರ್ತರು ಕೂಡ ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಪರ ಅಲ್ಲಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪಿರಿಯಾಪಟ್ಟಣಕ್ಕೆ ಗಡಿಗೆ ಹೊಂದಿಕೊಂಡಂತಿರುವ ಹುಣಸೂರಿನ ಗ್ರಾಮಗಳಲ್ಲಿ ಮಾಜಿ ಮತ್ತು ಹಾಲಿ ಶಾಸಕರ ಅಪಾರ ಅಭಿಮಾನಿಗಳಿದ್ದು, ಮತದಾರರು ಯಾರ ಪರವಾಗಿ ಮತ ನೀಡಿ ಯಾವ ಪಕ್ಷದ ಉತ್ತಮ ಅಭ್ಯರ್ಥಿಯನು ಗೆಲ್ಲಿಸುತ್ತಾರೆ ಚುನಾವಣಾ ನಂತರದ ಫಲಿತಾಂಶವನ್ನು ಕಾದು ನೋಡಬೇಕಾಗಿದೆ.
ಹಣ, ಹೆಂಡಕ್ಕಾಗಿ ದುಂಬಾಲು: ಪಿರಿಯಾಪಟ್ಟಣದಿಂದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹುಣಸೂರು ವಿಧಾನಸಭಾ ಉಪ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲೂ ಯುವಕರು ಗುಂಪು ಗುಂಪುಗಳನ್ನು ಮಾಡಿಕೊಂಡು ಮತಯಾಚಿಸುತ್ತಿದ್ದಾರೆ. ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ ದಿನಕ್ಕಿಷ್ಟು ಹಣ, ಹೆಂಡ, ಪಾರ್ಟಿಗಳು ಕೂಡ ಸಿಗುತ್ತಿರುವುದು ಕಂಡು ಬರುತ್ತಿದೆ.
ಇದನ್ನು ಮನಗಂಡ ಕೆಲವು ಯುವಕರ ಗುಂಪು ಆಯಾಯ ಪಕ್ಷದ ಅಭ್ಯರ್ಥಿಗಳು ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಿ ತಮ್ಮ ಕಡೆಯವರು ಆ ಊರಿನಲ್ಲಿದ್ದಾರೆ, ಈ ಊರಿನಲ್ಲಿದ್ದಾರೆ, ನಮಗೆ ಹಣ ನೀಡಿದರೆ ಅವರಿಂದ ಓಟು ಹಾಕಿಸುತ್ತೇವೆ ಎಂದು ದುಂಬಾಲು ಬೀಳುತ್ತಿರುವುದು ಕಂಡು ಬರುತ್ತಿದೆ.
* ಪಿ.ಎನ್.ದೇವೇಗೌಡ