ದಾವಣಗೆರೆ: ಮಹಾನಗರ ಪಾಲಿಕೆ 28 ಮತ್ತು 37ನೇ ವಾರ್ಡ್‌ನ ಉಪ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಬಿಜೆಪಿ, ಕಾಂಗ್ರೆಸ್ ಮುಖಂಡರು, ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದರು.
ಮತದಾನಕ್ಕೆ ಇನ್ನು ಎರಡು ದಿನ ಇರುವ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಕೊನೆಗೊಳ್ಳುವ ಮುನ್ನವೇ ಮತದಾರರ ಪ್ರಭುಗಳ ಮನವೊಲಿಸಲು ಮೋಡ ಮುಸುಕಿದ ವಾತಾವರಣ, ಆಗಾಗ ಬಿಸಿಲ ದರ್ಶನದ ನಡುವೆಯೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಎರಡೂ ವಾರ್ಡ್‌ಗಳ ವಿವಿಧ ಭಾಗದಲ್ಲಿ ಅಬ್ಬರದ ಪ್ರಚಾರ ನಡೆಸಿದರು.
ಉಪ ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸಿದಲ್ಲಿ ವಾರ್ಡ್ ಅಭಿವೃದ್ಧಿಯ ಜೊತೆಗೆ ಎಲ್ಲ ರೀತಿಯ ಅಗತ್ಯ ಮೂಲಭೂತ ಸೌಲಭ್ಯಗಳ ಒದಗಿಸುವ ಬಗ್ಗೆ ಭರ್ಜರಿ ಭರವಸೆ ನೀಡಿದರು. ಕಾಂಗ್ರೆಸ್ ಅಭ್ಯರ್ಥಿಗಳಾದ ಗಣೇಶ್ ಹುಲ್ಮನಿ ಮತ್ತು ಆಶಾರಾಣಿ ಸಿದ್ಧಗಂಗಾ ಶಿವಣ್ಣ ಅವರ ಪರವಾಗಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ| ಪ್ರಭಾ ಮಲ್ಲಿಕಾರ್ಜುನ್ ಅವರು ಮನೆ-ಮನೆಗೆ ತೆರಳಿ ಪ್ರಚಾರ ನಡೆಸಿದರು.
ಕೆ.ಟಿ.ಜೆ. ನಗರದ 17ನೇ ಕ್ರಾಸ್‌ನಲ್ಲಿರುವ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಆರಂಭಿಸಿದ ಅವರು ಮನೆ-ಮನೆಗೆ ತೆರಳಿ ಆಶಾರಾಣಿ ಸಿದ್ಧಗಂಗಾ ಶಿವಣ್ಣ ಅವರು ಶಿಕ್ಷಣ ಕ್ಷೇತ್ರದಲ್ಲಿನ ಸೇವೆ ಗುರುತಿಸಿ 37ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿದೆ. ಮತದಾರರು ಯಾವುದೇ ಆತಂಕಕ್ಕೆ ಒಳಗಾಗದೆ ಮತ ಚಲಾಯಿಸುವಂತೆ ಮನವಿ ಮಾಡಿದರು.
ನಂತರ 28ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಹುಲ್ಮನಿ ಭಗತ್‌ಸಿಂಗ್ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಮತಯಾಚಿಸಿದರು.
Related Articles
28ನೇ ವಾರ್ಡ್‌ನಲ್ಲಿ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡಿದೆ. ತೈಲ ಹಾಗೂ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟಕರವಾಗಿದೆ. ಜನ ವಿರೋಧಿ ಸರ್ಕಾರಗಳನ್ನು ಹೋಗಲಾಡಿಸಲು ಜನರು ಇಲ್ಲಿನ ಪಾಲಿಕೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸುವ ಮೂಲಕ ತಕ್ಕ ಉತ್ತರ ನೀಡುವಂತೆ ಕರೆ ನೀಡಿದರು.
ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ಉತ್ತಮ ಸಮಾಜ ಸೇವೆಯ ಕಲ್ಪನೆ ಹೊಂದಿದವರು. ಮತದಾರರು ವಿಶ್ವಾಸದಿಂದ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಆಶಾರಾಣಿ ಸಿದ್ಧಗಂಗಾ ಶಿವಣ್ಣ ಮಾತನಾಡಿ, ಈ ಹಿಂದೆ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮಂತ್ರಿಗಳಾಗಿದ್ದ ವೇಳೆ ಈ ಭಾಗದಲ್ಲಿ ಹಲವು ವರ್ಷಗಳಿಂದ ವಾಸವಾಗಿರುವ ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಕೊಳಚೆ ಅಭಿವೃದ್ಧಿ ಮಂಡಳಿಯಿಂದ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಉಪ ಚುನಾವಣೆಯಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅನಿತಾಬಾಯಿ, ಕಾಂಗ್ರೆಸ್‌ನ ವಿವಿಧ ಘಟಕಗಳಾದ ಮಹಿಳಾ,ಯುವ , ವಿದ್ಯಾರ್ಥಿ, ಸೇವಾದಳ, ಪರಿಶಿಷ್ಟ ಜಾತಿ- ಪಂಗಡ, ಇಂಟೆಕ್ ಮತ್ತು ಕಾರ್ಮಿಕ ವಿಭಾಗ, ಸಾಮಾಜಿಕ ಜಾಲತಾಣ, ರಾಜೀವ್ ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.
ಬಿಜೆಪಿ ಅಭ್ಯರ್ಥಿಗಳಾದ ಜೆ.ಎನ್. ಶ್ರೀನಿವಾಸ್ ಮತ್ತು ಶ್ವೇತಾ ಶ್ರೀನಿವಾಸ್ ಪರ ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ಮೇಯರ್ ಜಯಮ್ಮ ಗೋಪಿನಾಯ್ಕ, ಉಪ ಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಮಾಜಿ ಮೇಯರ್ ಗಳಾದ ಎಸ್.ಟಿ. ವೀರೇಶ್, ಬಿ.ಜಿ. ಅಜಯ್‌ಕುಮಾರ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಮಹಿಳಾ ಮೋರ್ಚಾದ ಮಂಜುಳಾ ಮಹೇಶ್, ಭಾಗ್ಯ ಪಿಸಾಳೆ ಇತರರು ವಿವಿಧೆಡೆ ಪ್ರಚಾರ ನಡೆಸಿದರು.
ಎರಡೂ ವಾರ್ಡ್‌ಗಳ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಬಹಿರಂಗ ಪ್ರಚಾರ ಮುಕ್ತಾಯಗೊಂಡಿರುವುದರಿಂದ ಬುಧವಾರ, ಗುರುವಾರ ಮನೆ, ಮನೆಯ ಪ್ರಚಾರ ನಡೆಯಲಿದೆ. ಮೇ. 20ರ ಶುಕ್ರವಾರ ಮತದಾನದ ದಿನ.