Advertisement

ಜಲಸಂರಕ್ಷಣೆಗೆ ಜೂ.11ರಂದು ಅಭಿಯಾನ

10:58 PM May 18, 2019 | Lakshmi GovindaRaj |

ಬೆಂಗಳೂರು: ಜಲ ಸಂರಕ್ಷಣೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೂಪಿಸಿರುವ “ಜಲಾಮೃತ’ ಯೋಜನೆಯಡಿ ಜೂನ್‌ 11ರಂದು ರಾಜ್ಯದ ಎಲ್ಲ ಆರು ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೃಹತ್‌ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಒಂದೇ ದಿನ 30 ಲಕ್ಷ ಸಸಿ ನೆಡುವ ಕಾರ್ಯಕ್ರಮ ರೂಪಿಸಲಾಗಿದೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, ಜೂನ್‌ 5ರಂದು ವಿಶ್ವ ಪರಿಸರ ದಿನ. ಆದರೆ, ಅಂದು ರಜಾದಿನವಾದ ಕಾರಣ ಜೂ.11ಕ್ಕೆ ನಾವು ಬೃಹತ್‌ ಅಭಿಯಾನ ಹಮ್ಮಿಕೊಂಡಿದ್ದೇವೆ. ನಾಡಿನ ಭವಿಷ್ಯದ ಹಿತದೃಷ್ಟಿಯಿಂದ ನೀರು ಮತ್ತು ಹಸಿರಿನ ಕುರಿತಾದ ಆಂದೋಲನಕ್ಕೆ ಎಲ್ಲ ಶಿಕ್ಷಣ ಸಂಸ್ಥೆಗಳು, ಸಹಕಾರಿ ಸಂಘ-ಸಂಸ್ಥೆಗಳು, ನಾಗರಿಕ ಸಂಘಟನೆಗಳಿಗೂ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ಜಲಾಮೃತ ಯೋಜನೆಯಡಿ ಈ ವರ್ಷವನ್ನು ಕರ್ನಾಟಕದ ಜಲವರ್ಷ ಎಂಬ ಅಭಿಯಾನ ನಡೆಸಲು ತೀರ್ಮಾನಿಸಲಾಗಿತ್ತು. ಅದರಡಿ ಜಲ ಸಾಕ್ಷರತೆ, ಜಲಮೂಲಗಳ ಪುನ:ಶ್ಚೇತನ, ಹೊಸ ಜಲಮೂಲ ಸೃಷ್ಟಿ, ಜಲ ಪ್ರಜ್ಞಾವಂತ ಬಳಕೆ, ಹಸಿರೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ಕೆಲ ದಿನ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಜೂ.11ರಿಂದ ಮರು ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಆ ದಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ-ಕಾಲೇಜು ಆವರಣಗಳಲ್ಲಿ ಸಸಿ ನೆಡಲಾಗುವುದು. ಈ ಅಭಿಯಾನವನ್ನು ನಾಲ್ಕು ತಿಂಗಳ ಕಾಲ ಮುಂದುವರಿಸಲು ಎರಡು ಕೋಟಿ ಸಸಿಗಳನ್ನು ಗ್ರಾಮ ಪಂಚಾಯಿತಿ ಮೂಲಕ ವಿತರಿಸಲಾಗುವುದು ಎಂದು ಹೇಳಿದರು.

ಜಲಾಮೃತ ಕಾರ್ಯಕ್ರಮದ ಅಂಗವಾಗಿ 20 ಸಾವಿರ ಚೆಕ್‌ ಡ್ಯಾಂ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಹಲವು ಕಡೆ ಕಾಮಗಾರಿ ಪ್ರಾರಂಭವಾಗಿದೆ. ಜತೆಗೆ, 14 ಸಾವಿರ ಸಣ್ಣ ಪುಟ್ಟ ಜಲತಾಣಗಳನ್ನು ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ನರೇಗಾ ಯೋಜನೆಯ ಪ್ರಯೋಜನ ಪಡೆದುಕೊಂಡು, 500 ಕೋಟಿ ರೂ.ವೆಚ್ಚದಲ್ಲಿ ಸಾರ್ವಜನಿಕ ಆಸ್ತಿ ಸೃಷ್ಟಿಸಲಾಗುವುದು ಎಂದು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next