Advertisement

ಜಲ ಸಂರಕ್ಷಣೆ ಜಾಗೃತಿಗೆ ಅಭಿಯಾನ ಕೈಗೊಳ್ಳಿ

11:26 AM Jul 12, 2019 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯ ಅಂತರ್ಜಲ ಪರಿಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಜಲಶಕ್ತಿ ಅಭಿಯಾನ ತಂಡದ ಅಧಿಕಾರಿಗಳು, ಜಿಲ್ಲೆಯಲ್ಲಿ ಜಲ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಸದ್ಬಳಕೆ ಕುರಿತು ಜಿಲ್ಲಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಜನ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಕೇಂದ್ರ ಜಲಶಕ್ತಿ ಅಭಿಯಾನದ ತಂಡದ ಸದಸ್ಯರಾದ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಪರ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಸೂಚಿಸಿದರು.

Advertisement

ಜಿಲ್ಲೆಯ ಅಂತರ್ಜಲ ಸ್ಥಿತಿಗತಿಗಳ ಪರಾಮರ್ಶೆಗಾಗಿ ಎರಡು ದಿನಗಳ ಅಧ್ಯಯನಕ್ಕಾಗಿ ಗುರುವಾರ ಆಗಮಿಸಿದ್ದ ವೇಳೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಪಂ ಮಿನಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಅಂತರ್ಜಲ ಪರಿಸ್ಥಿತಿ ಕುರಿತು ಜಿಲ್ಲಾಡಳಿತ ನೀಡಿದ ಪ್ರಾತ್ಯ್ಯಕ್ಷಿಕೆ ವೀಕ್ಷಿಸಿ ಅವರು ಮಾತನಾಡಿದರು.

ಮಾಹಿತಿ ಪಡೆದ ಅಧಿಕಾರಿಗಳು: ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ತೀವ್ರ ಬರಗಾಲದ ಜೊತೆಗೆ ಕುಡಿಯುವ ನೀರು, ಕೃಷಿಗಾಗಿ ಕೊಳವೆ ಬಾವಿಗಳ ಮೂಲಕ ಅಂತರ್ಜಲ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಅಂತರ್ಜಲ ಪ್ರಮಾಣ ಕುಸಿತದ ಬಗ್ಗೆ ಕೇಂದ್ರ ಜಲಶಕ್ತಿ ಅಭಿಯಾನದ ಅಧಿಕಾರಿಗಳು ಮಾಹಿತಿ ಪಡೆದರು.

220 ಜಿಲ್ಲೆಗಳಲ್ಲಿ ಅಂತರ್ಜಲ ಸಮಸ್ಯೆ: ಪ್ರತಿ ಹನಿ ನೀರನ್ನು ಸಂಗ್ರಹಿಸುವುದರ ಮೂಲಕ ಜೀವ ಜಲವನ್ನು ಮುಂದಿನ ಪೀಳಿಗೆಗಾಗಿ ಉಳಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ಜಲ ಸಂರಕ್ಷಣೆಗೆ ವಿಶೇಷ ಒತ್ತು ಕೊಡಬೇಕೆಂದರು. ಕೇಂದ್ರ ಸರ್ಕಾರ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ನೀರಾವರಿ ಸಚಿವಾಲಯವನ್ನು ಪ್ರತ್ಯೇಕವಾಗಿ ಸ್ಥಾಪಿಸಿದ್ದು, ದೇಶದಲ್ಲಿರುವ 600 ಜಿಲ್ಲೆಗಳ ಪೈಕಿ 220 ಜಿಲ್ಲೆಗಳಲ್ಲಿ ತೀವ್ರ ಅಂತರ್ಜಲ ಸಮಸ್ಯೆ ಇರುವುದನ್ನು ಕೇಂದ್ರ ಗುರುತಿಸಿದೆ.

ಈ ಜಿಲ್ಲೆಯಲ್ಲಿ ಜಲ ಮೂಲಗಳ ಪುನಶ್ಚೇತನ ಸೇರಿದಂತೆ ಜಲ ಸಂರಕ್ಷಣೆಗೆ ಒತ್ತು ಕೊಡುವ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಕಾರ್ಯವನ್ನು ಜಲಶಕ್ತಿ ಅಭಿಯಾನದ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಭೇಟಿ ನೀಡಿ ಅಂತರ್ಜಲದ ವಾಸ್ತವ ಸ್ಥಿತಿಯನ್ನು ತಿಳಿದು ಕೇಂದ್ರಕ್ಕೆ ವರದಿ ನೀಡಲಾಗುವುದು ಎಂದರು.

Advertisement

ಮರು ಬಳಕೆ ಮಾಡಲು ಪ್ರಯತ್ನಿಸಿ: ಜಿಲ್ಲೆಯಲ್ಲಿ ಮಳೆ ಕೊಯ್ಲು ಯೋಜನೆ, ಜಲ ಮರುಪೂರಣ ಯೋಜನೆ, ಇಂಗು ಗುಂಡಿಗಳ ನಿರ್ಮಾಣ, ಅರಣ್ಯೀಕರಣ ಹೆಚ್ಚಳದ ಬಗ್ಗೆ ಸೂಕ್ತ ಸಲಹೆ ಹಾಗೂ ನಿರ್ದೇಶಗಳನ್ನು ಜಿಲ್ಲಾಡಳಿತಕ್ಕೆ ನೀಡಿದ ಪಂಕಜ್‌ ಕುಮಾರ್‌, ಪ್ರತಿ ಮನೆ ಮನೆಯಲ್ಲೂ ನೀರನ್ನು ಅವಶ್ಯಕತೆಗಿಂತ ಹೆಚ್ಚಾಗಿ ಪೋಲು ಮಾಡಲಾಗುತ್ತಿದ್ದು, ಆ ನೀರನ್ನು ಅಲ್ಲಿಯೇ ಇಂಗಿಸಿ ಸಂರಕ್ಷಿಸಬೇಕು.

ಕೆರೆಗಳಲ್ಲಿ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಸಬೇಕು. ಕಲ್ಯಾಣಿಗಳನ್ನು ಶುದ್ಧೀಕರಣಗೊಳಿಸ ಬೇಕು. ಬಹುಕಮಾನಿನ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ನೀರನ್ನು ತಡೆ ಹಿಡಿಯಬೇಕು. ಮಹಿಳೆಯರು ಹಾಗೂ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅರಿವು ಅಗತ್ಯವಿದ್ದು, ಪ್ರತಿ ತಿಂಗಳಿಗೊಮ್ಮೆ ಸಭೆಗಳನ್ನು ಜನ ಸಾಕ್ಷರತೆ ಕುರಿತು ಅರಿವು ಮೂಡಿಸಬೇಕು. ಮನೆಯಲ್ಲಿ ಉಪಯೋಗಿಸ ಲ್ಪಟ್ಟ ನೀರನ್ನು ಮರುಬಳಕೆ ಮಾಡಲು ಪ್ರಯತ್ನ ನಡೆಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸ ಬೇಕೆಂದರು.

ಡೀಸಿಯಿಂದ ಮಾಹಿತಿ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಮಾತನಾಡಿ, ಜಿಲ್ಲೆಯಲ್ಲಿ ಕೃಷಿ, ಕುಡಿಯುವ ನೀರಿಗೆ ಸಮಸ್ಯೆ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 340 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿವ ನೀರಿಗೆ ಬರ ಇದೆ. 15,00, 2000 ಅಡಿ ಆಳ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿ ಕಲ್ಯಾಣಿಗಳ ಸ್ವಚ್ಛತೆ, ನರೇಗಾ ಯೋಜನೆಯಡಿ ಕೆರೆಗಳ ಹೂಳು ಎತ್ತುವುದು, ಮರ, ಗಿಡಗಳ ಬೆಳೆಸಲು ವಿಶೇಷ ಒತ್ತು ನೀಡಿರುವುದು ಸೇರಿದಂತೆ ಜಿಲ್ಲಾದ್ಯಂತ ಜಲ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಂದ್ರ ಜಲಶಕ್ರಿ ಅಭಿಯಾನ ತಂಡಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಗುರುದತ್‌ ಹೆಗಡೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಲಶಕ್ತಿ ಅಭಿಯಾನದ ತಂಡದ ಸದಸ್ಯರಾದ ಕೇಂದ್ರ ಆಯುಷ್‌ ಸಚಿವಾಲಯದ ನಿರ್ದೇಶಕ ಶಶಿರಂಜನ್‌ ಕುಮಾರ್‌, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿರ್ದೇಶಕ ಮನೋಜ್‌ ಕುಮಾರ್‌ ಗಂಗೇಯಾ, ಕೇಂದ್ರ ಅಂತರ್ಜಲ ಮಂಡಳಿಯ ತಾಂತ್ರಿಕ ಅಧಿಕಾರಿ ಯು.ಆರ್‌.ರಾಕಿ, ಇಂಜಿನಿಯರ್‌ ದಿಲೀಪ್‌ ಸೇರಿದಂತೆ ಜಿಲ್ಲಾ ಹಾಗೂ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲನಾ ಸಭೆಯಲ್ಲಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next