Advertisement

ಎರಡನೇ ಹಂತಕ್ಕೆ ಪ್ರಚಾರ ಭರಾಟೆ

09:42 AM Apr 18, 2019 | Lakshmi GovindaRaju |

ಏ.23ರಂದು ರಾಜ್ಯದಲ್ಲಿ ನಡೆಯಲಿರುವ 2ನೇ ಹಂತದ ಲೋಕಸಭಾ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿ ವಿವಿಧ ಪಕ್ಷಗಳ ನಾಯಕರು ಪ್ರಚಾರ ಭರಾಟೆ ಮುಂದುವರಿಸಿದ್ದಾರೆ. ಶಿವಮೊಗ್ಗದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ ಪರಸ್ಪರ ವಾಗ್ಧಾಳಿ ಮುಂದುವರಿಸಿದ್ದಾರೆ. ಚುನಾವಣಾ ರಣಕಣದಲ್ಲಿ ಯಾರು, ಏನೆಲ್ಲಾ ಮಾತನಾಡಿದರು ಎಂಬ ಮಾಹಿತಿ ಇಲ್ಲಿದೆ..

Advertisement

ಮಂಡ್ಯ ಕ್ಷೇತ್ರವಷ್ಟೇ ಅಲ್ಲ, ರಾಜ್ಯದ ಎಲ್ಲ ಕ್ಷೇತ್ರವೂ ಮುಖ್ಯ
ಶಿವಮೊಗ್ಗ: “ನನಗೆ ಮಂಡ್ಯ ಕ್ಷೇತ್ರವಷ್ಟೇ ಅಲ್ಲ ರಾಜ್ಯದ ಎಲ್ಲ ಕ್ಷೇತ್ರವೂ ಮುಖ್ಯ. ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ 12 ಕಡೆ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಿರುವೆ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು. ಸೊರಬ ತಾಲೂಕು ಆನವಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಅವರು ಹೇಳಿದ್ದಿಷ್ಟು…

* ಕೇವಲ ಮಂಡ್ಯದಲ್ಲಿ ಅಷ್ಟೇ ಅಲ್ಲ, ಎಲ್ಲ ಕ್ಷೇತ್ರಗಳಲ್ಲಿ ಓಡಾಡುತ್ತಿದ್ದೇನೆ. ಮೈತ್ರಿ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ.

* ಮಂಡ್ಯ ಜಿಲ್ಲೆಯ ಜನ ನನ್ನನ್ನು ಸೊರಗಲು ಬಿಡುವುದಿಲ್ಲ. ಮಂಡ್ಯದ ರೈತರು ಇನ್ನೂ ಸತ್ತಿಲ್ಲ. ಅಲ್ಲಿಯ ರೈತರು ಮೊದಲು ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಅಲ್ಲಿನ ರೈತರು ಎಂದಿಗೂ ನಮ್ಮ ಕೈ ಬಿಡೋದಿಲ್ಲ ಎನ್ನುವ ವಿಶ್ವಾಸವಿದೆ.

* ಡಿ.ಕೆ. ಶಿವಕುಮಾರ್‌ಗೆ ಬುಧವಾರ ಕನಕಪುರದಲ್ಲಿ ಪ್ರಚಾರ ಮಾಡುವಂತೆ ಹೇಳಿದೇನೆ. ಹಾಗಾಗಿ ಅವರು ಶಿವಮೊಗ್ಗಕ್ಕೆ ಬಂದಿಲ್ಲ. ಶುಕ್ರವಾರದಿಂದ ಮೂರು ದಿನ ಶಿವಮೊಗ್ಗದಲ್ಲಿ ಪ್ರಚಾರ ಮಾಡಲಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ಏನೇ ಕಸರತ್ತು ಮಾಡಿದರೂ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ.

Advertisement

ಮಾಧ್ಯಮಗಳಿಗೆ ಧನ್ಯವಾದ ಹೇಳಿದ ಸಿಎಂ: ಈ ಬಾರಿ ನರೇಂದ್ರ ಮೋದಿಗಿಂತ ಹೆಚ್ಚಿನ ಪ್ರಚಾರ ಸಿಕ್ಕಿದ್ದು ಮಂಡ್ಯಕ್ಕೆ. ನಿಖಿಲ್‌ ಕುಮಾರಸ್ವಾಮಿಯನ್ನು ರಾಷ್ಟ್ರಮಟ್ಟದ ನಾಯಕನನ್ನಾಗಿ ಮಾಡಿದ ಮಾಧ್ಯಮಗಳಿಗೆ ಧನ್ಯವಾದ ಎಂದು ಸಿಎಂ ಎಚ್‌.ಡಿ. ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.

ನಾನು ಪ್ರತಿದಿನ ಕಣ್ಣೀರು ಹಾಕುತೇ¤ನೆ. ನಾನು ಭಾವುಕ ಜೀವಿ. ಕಣ್ಣಲ್ಲಿ ನೀರು ಸುಮ್‌ ಸುಮ್ಮನೆ ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಇದನ್ನು ಟೀಕಿಸುವವರಿಗೆ ಭಾವನೆಯೇ ಇಲ್ಲ ಎಂದೆನಿಸುತ್ತದೆ. ಮಾಜಿ ಸಿಎಂ ಎಸ್‌.ಎಂ. ಕೃಷ್ಣ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತಿತ್ತು.
-ಎಚ್‌.ಡಿ. ಕುಮಾರಸ್ವಾಮಿ,ಮುಖ್ಯಮಂತ್ರಿ

***

ಮೊದಲ ಹಂತದ 10 ಕ್ಷೇತ್ರ ಗೆಲ್ತೇವೆ: ಬಿಎಸ್‌ವೈ
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಮೊದಲ ಹಂತದ 14 ಕ್ಷೇತ್ರದಲ್ಲಿ 10 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ ಎಂದು ಹೇಳಿದರು. 2016ಕ್ಕೆ ಹೋಲಿಸಿದಲ್ಲಿ ಈ ಬಾರಿ ಒಳ್ಳೆಯ ವಾತಾವರಣವಿದೆ.

ರಾಜ್ಯದಲ್ಲಿ ಒಟ್ಟು 22 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಸಿ.ಎಂ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್‌ ಶಿಕಾರಿಪುರಕ್ಕೆ ಬಂದು ಪ್ರಚಾರ ಮಾಡಿದರೂ ನಮಗೇನೂ ಪರಿಣಾಮ ಬೀರಲ್ಲ. ಬರಲಿ ಪ್ರಚಾರ ಮಾಡಿಕೊಂಡು ಹೋಗಲಿ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಮಾತನಾಡಿ, ಜೋಡೆತ್ತಿನ ನೊಗ ಹಿಂದೆ ಯಾವಾಗ ಹರಿದು ಹೋಗಿತ್ತು, ಯಾವಾಗ ಸರಿ ಇತ್ತು ಎಂಬುದನ್ನೆಲ್ಲ ನಾಡಿನ ಜನ ಗಮನಿಸಿದ್ದಾರೆ. ಕೊನೆಯ ಮೂರು ದಿನಗಳಲ್ಲಿ ಬಂದು ಏನೂ ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದರು.

5 ಜಿಲ್ಲೆಗೆ ಅನುದಾನ ಕೊಟ್ಟು ಕಮಿಷನ್‌ ಪಡೆದಿದ್ದಾರೆ: ಬಾದಾಮಿಯಲ್ಲಿ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

* ಪ್ರಧಾನಿ ಮೋದಿ ಎದುರು ಯಾರ ಆಟವೂ ನಡೆಯಲ್ಲ. ಅವರ ಮುಂದೆ ನಮ್ಮ ಅಸ್ತಿತ್ವ ಏನೂ ಇಲ್ಲ. ಮೋದಿ ಭಾವಚಿತ್ರ ಇಟ್ಟುಕೊಂಡು ಚುನಾವಣೆ ಮಾಡುತ್ತಿದ್ದೇವೆ. ಬಳ್ಳಾರಿಯಲ್ಲಿ ಡಿ.ಕೆ. ಶಿವಕುಮಾರ್‌ ಹವಾ ನಡೆಯೋದಿಲ್ಲ. ಮೋದಿ ಎದುರು ಡಿಕೆಶಿ ಹವಾ ಎಲ್ಲಿಂದ ಬರುತ್ತದೆ?

* ಲೋಕಸಭೆ ಚುನಾವಣೆ ಬಳಿಕ ಕುಮಾರಸ್ವಾಮಿ ಎಲ್ಲಿದ್ದಿಯಪ್ಪ ಎಂದು ಜನ ಕೇಳುತ್ತಾರೆ. ಕುಮಾರಸ್ವಾಮಿ ಉತ್ತರ ಕರ್ನಾಟಕ ನಿರ್ಲಕ್ಷé ಮಾಡಿದ್ದಾರೆ. ಸರ್ಕಾರದ ಎಲ್ಲ ಅನುದಾನವನ್ನು ಐದು ಕ್ಷೇತ್ರಗಳಿಗೆ ಮಾತ್ರ ಹಂಚುತ್ತಿದ್ದಾರೆ. ಐದು ಜಿಲ್ಲೆಗೆ ಅನುದಾನ ಕೊಟ್ಟು ಕಮಿಷನ್‌ ಪಡೆದಿದ್ದಾರೆ. ಆ ಹಣವನ್ನು ನಿಖಿಲ್‌ಗಾಗಿ ಮಂಡ್ಯದಲ್ಲಿ ಹಂಚುತ್ತಿದ್ದಾರೆ. ಮಂಡ್ಯದಲ್ಲಿ ನೂರಕ್ಕೆ ನೂರರಷ್ಟು ನಿಖಿಲ್‌ ಸೋಲುತ್ತಾರೆ.

* ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಇರುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮಂಡ್ಯ, ಹಾಸನ, ತುಮಕೂರು ಸೇರಿ ಮೂರೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಸೋಲುತ್ತದೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 24 ಸ್ಥಾನಗಳಲ್ಲಿ ಗೆಲ್ಲಲಿದೆ.

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸೋಲಿನ ಭೀತಿ ಮನಗಂಡು ಕಣ್ಣೀರಿನ ಹೊಳೆ ಹರಿಸುತ್ತಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 22 ಸ್ಥಾನ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲಾಗುವುದು.
-ಜಗದೀಶ ಶೆಟ್ಟರ್‌, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next