ಬೆಂಗಳೂರು: ಜಯನಗರ ಕ್ಷೇತ್ರದ ಮತದಾನ ಸಮೀಪಿಸಿದಂತೆ ಪ್ರಚಾರ ಭರಾಟೆಯೂ ರಂಗೇರುತ್ತಿದೆ. ಬಿ.ಎನ್.ವಿಜಯಕುಮಾರ್ ನಿಧನದಿಂದಾಗಿ ಅವರ ಸಹೋದರ ಬಿ.ಎನ್.ಪ್ರಹ್ಲಾದ್‌ಬಾಬು ಬಿಜೆಪಿಯಿಂದ ಕಣಕ್ಕಿಳಿದಿದ್ದು, ಅಭ್ಯರ್ಥಿಯನ್ನು ಗೆಲ್ಲಿಸುವ ಉಸ್ತುವಾರಿಯನ್ನು ಪಕ್ಷ ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ವಹಿಸಿದೆ. ಈ ನಡುವೆ ಅತೃಪ್ತರ ಮನವೊಲಿಸುವಲ್ಲಿ ಯಶಸ್ವಿಯಾಗಿರುವ ಅನಂತ ಕುಮಾರ್, ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿಸಲು ತೀವ್ರ ಕಸರತ್ತು ನಡೆಸಿದ್ದಾರೆ.
ಇನ್ನೊಂದೆಡೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಸೌಮ್ಯಾ ರೆಡ್ಡಿ ಕೂಡ ಬಿರುಸಿನ ಪ್ರಚಾರದೊಂದಿಗೆ ಮತದಾರರ ಸೆಳೆಯುವಲ್ಲಿ ನಿರತರಾಗಿದ್ದಾರೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರದ ಬೆಳವಣಿಗೆಗಳಲ್ಲಿ ಸಕ್ರಿಯರಾಗಿದ್ದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸೋಮವಾರದಿಂದ ಮತ್ತೆ ಪುತ್ರಿ ಪರ ಪ್ರಚಾರ ಆರಂಭಿಸಿದ್ದಾರೆ.
ಶುಕ್ರವಾರ ಜಯನಗರದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಕೇಂದ್ರದ ಹಲವು ಸಚಿವರು, ಮುಖಂಡರು ಜನರಿಗೆ ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸಿದ್ದರಿಂದ ಪಕ್ಷಕ್ಕೆ ನಿರೀಕ್ಷಿತ ಸ್ಥಾನ ಬಂದಿಲ್ಲ. ಪಕ್ಷದ ಜನಪರ ಕಾರ್ಯಕ್ರಮಗಳನ್ನು ಗಮನಿಸಿ ಬೆಂಬಲಿಸುವಂತೆ ಕಾರ್ಯಕರ್ತರು ಜಯನಗರ ಮತದಾರರಲ್ಲಿ ಮನವಿ ಮಾಡಬೇಕು ಎಂದು ಹೇಳಿದರು.
ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಕೂಡ ಕ್ಷೇತ್ರದಲ್ಲಿ ಹಲವು ಸುತ್ತಿನ ಪ್ರಚಾರ ಮುಗಿಸಿದ್ದು, ಮತ್ತೆ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರಿಂದ ಈವರೆಗೆ ಬಿರುಸಿನ ಪ್ರಚಾರ ಕಂಡುಬಂದಿಲ್ಲ.
ಪ್ರಹ್ಲಾದ್ ಬಾಬು ಆಸ್ತಿ 1.50 ಕೋಟಿ ರೂ.: ಜಯನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಿ.ಎನ್.ಪ್ರಹ್ಲಾದ್ ಬಾಬು ಅವರು ಒಟ್ಟು 1.50 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. 15,000 ರೂ. ನಗದು ಸೇರಿ 53.14 ಲಕ್ಷ ರೂ. ಮೌಲ್ಯದ ಚರಾಸ್ತಿ ಬಾಬು ಅವರ ಬಳಿ ಇದೆ. ಪತ್ನಿ ಎನ್.ಅನ್ನಪೂರ್ಣ 25,47,016 ರೂ. ಮೌಲ್ಯದ ಚರಾಸ್ತಿ,
ಪುತ್ರಿ ಬಿ.ಪಿ.ಅದಿತಿ 22,65,228 ರೂ. ಮೌಲ್ಯದ ಚರಾಸ್ತಿ ಹಾಗೂ ಪುತ್ರ ಬಿ.ಪಿ. ಆದಿತ್ಯ 40,000 ರೂ. ಮೊತ್ತದ ಚರಾಸ್ತಿ ಹೊಂದಿದ್ದಾರೆ. ಪ್ರಹ್ಲಾದ್ ಬಾಬು ಅವರ ಹೆಸರಿನಲ್ಲಿ ಜಯನಗರ 3ನೇ ಬ್ಲಾಕ್‌ನಲ್ಲಿ 20 ಲಕ್ಷ ರೂ. ಮೌಲ್ಯದ ಮನೆ ಹಾಗೂ ಉತ್ತರಹಳ್ಳಿಯ ತುರಹಳ್ಳಿಯಲ್ಲಿ 30 ಲಕ್ಷ ರೂ. ಮೌಲ್ಯದ ಕೃಷಿಯೇತರ ಭೂಮಿ ಇದೆ. ಅವರ ಪತ್ನಿ 75 ಗ್ರಾಂ. ಚಿನ್ನ, 3 ಕೆ.ಜಿ. ಬೆಳ್ಳಿ ಇದ್ದು, ಪ್ರಹ್ಲಾದ್ ಕುಟುಂಬದ ಬಳಿ ಕಾರು, ದ್ವಿಚಕ್ರ ವಾಹನವಿಲ್ಲ. ಸಾಲವೂ ಇಲ್ಲ.