Advertisement

ಪಾಲಿಕೆ ಚುನಾವಣ ಕಣದಲ್ಲಿ ಸ್ವತಂತ್ರ ಅಭ್ಯರ್ಥಿಗಳ ಪ್ರಚಾರದ ಭರಾಟೆ

10:01 PM Nov 09, 2019 | mahesh |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಪ್ರಚಾರದ ಕೊನೆ ಹಂತದಲ್ಲಿ ಪ್ರಮುಖ ಪಕ್ಷಗಳ ಜತೆಗೆ ಸ್ವತಂತ್ರ ಅಭ್ಯರ್ಥಿಗಳೂ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದರು.

Advertisement

ವಿವಿಧ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ತಮ್ಮನ್ನು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದು, ಮತದಾರರ ಮನವೊಲಿಸಲು ಕೊನೆ ಕ್ಷಣದ ಪ್ರಯತ್ನ ಮಾಡುತ್ತಿದ್ದಾರೆ. ರವಿವಾರ ಬೆಳಗ್ಗೆ 7 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಕೊನೆ ಕ್ಷಣದ ವರೆಗೂ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ.

ಸುದಿನ ತಂಡ ಶನಿವಾರ ವಾರ್ಡ್‌ ಸಂಚಾರ ಮಾಡಿದ ಸಂದರ್ಭ ಪೋರ್ಟ್‌ ವಾರ್ಡ್‌, ಮಣ್ಣಗುಡ್ಡೆ ವಾರ್ಡ್‌, ಕದ್ರಿ ಪದವು ಮುಂತಾದ ವಾರ್ಡ್‌ಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಮನೆ-ಮನೆ ಭೇಟಿ ಮಾಡಿ ಮತ ಯಾಚಿಸುವ ದೃಶ್ಯ ಸಾಮಾನ್ಯವಾಗಿತ್ತು.

ಚುನಾವಣ ಅಖಾಡಲ್ಲಿ ಪ್ರಮುಖ ಪಕ್ಷೇತರ ಅಭ್ಯರ್ಥಿಗಳು
ಪಾಲಿಕೆ ಚುನಾವಣ ಅಖಾಡದಲ್ಲಿ 180 ಅಭ್ಯರ್ಥಿಗಳಿದ್ದು, ಅದರಲ್ಲಿ 27 ಮಂದಿ ಪಕ್ಷೇತರರು ಪ್ರಮುಖ ಪಕ್ಷಗಳೊಂದಿಗೆ ಸೆಣಸಾಡಲು ಸಿದ್ಧರಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್‌, ಬಿಜೆಪಿ ಪಕ್ಷದಲ್ಲಿ ಗುರುತಿಸಿ ಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಿ ದವರು ಪಕ್ಷೇತರರಾಗಿ ಈ ಬಾರಿಯ ಚುನಾ ವಣೆಯಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷ.

ಸುರತ್ಕಲ್‌ ಪಶ್ಚಿಮ ವಾರ್ಡ್‌ನಿಂದ ಬಿಜೆಪಿಯಿಂದ ಸ್ಪರ್ಧಿಸಿ ಕಾರ್ಪೊರೇಟರ್‌ ಆಗಿದ್ದ ರೇವತಿ ಪುತ್ರನ್‌ ಅವರು ಕಳೆದ ಮನಪಾ ಚುನಾವಣೆಯಿಂದ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿದ್ದರು. ಅವರು ಈ ಬಾರಿಯೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಅದಕ್ಕಾಗಿ ಅವರು ಮನೆ-ಮನೆ ಪ್ರಚಾರದಲ್ಲಿ ತೊಡಗಿದ್ದರು. ಕಳೆದ ಬಾರಿ ತಾನು ಮಾಡಿದ ಸಾಧನೆಯನ್ನು ಮುಂದಿಟ್ಟು ಈ ಬಾರಿ ಮತಯಾಚಿಸುತ್ತಿದ್ದರು.ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಮೇಯರ್‌ಗಳಾಗಿದ್ದ ಗುಲ್ಜಾರ್‌ಭಾನು, ಕೆ. ಅಶ್ರಫ್‌ ಅವರು ಈ ಬಾರಿ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಕಾಟಿಪಳ್ಳ ಉತ್ತರದಿಂದ ಪಕ್ಷೇತರಾಗಿ ಸ್ಪರ್ಧಿಸುತ್ತಿರುವ ಗುಲ್ಜಾರ್‌ ಬಾನು ಅವರು ತಮ್ಮ ವಾರ್ಡ್‌ನಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದರು. ಅದರಂ ತೆಯೇ ಮಾಜಿ ಮೇಯರ್‌ ಕೆ. ಅಶ್ರಫ್‌ ಅವರು ಪೋರ್ಟ್‌ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇನ್ನೂ ಬಿಜೆಪಿಯ ಮಹಿಳಾ ಘಟಕದಲ್ಲಿ ಗುರುತಿಸಿಕೊಂಡು ಪಕ್ಷದ ಕೆಲಸಗಳಲ್ಲಿ ಹೆಚ್ಚು ಸಕ್ರೀಯರಾಗಿದ್ದ ಪ್ರಸನ್ನಾ ರವಿ ಅವರು ಈ ಬಾರಿ ದೇರೆಬೈಲು ಪೂರ್ವ ವಾರ್ಡ್‌ನಿಂದ ಪಕ್ಷೇತರರಾಗಿ ಅಖಾಡಕ್ಕಿಳಿದಿದ್ದಾರೆ.

Advertisement

9ನೇ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸುಪ್ರೀತ್‌
ಕೊಡಿಯಾಲಬೈಲ್‌ ಹಾಗೂ ದೇರೆಬೈಲು ನೈರತ್ಯ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಪ್ರೀತ್‌ ಅವರು ಸ್ಪರ್ಧಿಸುತ್ತಿರುವ 9ನೇ ಚುನಾವಣೆ ಇದು. ಲೋಕಸಭೆ, ವಿಧಾನಸಭೆ ಸಹಿತ ಎಲ್ಲ ಚುನಾವಣೆಯಲ್ಲೂ ಉತ್ಸಾಹದಿಂದ ಸ್ಪರ್ಧಿಸುವ ಸುಪ್ರೀತ್‌ ಅವರು ತನ್ನ ಭರವಸೆಗಳನ್ನೇ ಮುಂದಿಟ್ಟು ಪ್ರಚಾರ ಕೆಲಸದಲ್ಲಿ ತೊಡಗಿಕೊಂಡಿದ್ದರು.

“ಸ್ವತಂತ್ರ ಅಭ್ಯರ್ಥಿಗಳತ್ತ ಮತದಾರರ ಚಿತ್ತ’
ವಾರ್ಡ್‌ನ ಅಭಿವೃದ್ಧಿಗಾಗಿ ಹಲವು ಬಾರಿ ಪ್ರಮುಖ ಪಕ್ಷಗಳಿಗೆ ಅವಕಾಶ ನೀಡಿದ್ದೇವೆ. ಆದರೆ, ನಮ್ಮ ಸಮಸ್ಯೆಗಳಿಗೆ ಸ್ಪಂದಿ ಸುವ ಕೆಲಸವಾಗಿಲ್ಲ. ಈ ಬಾರಿ ಸ್ವತಂತ್ರ ಅಭ್ಯರ್ಥಿಗಳಿಗೆ ಮತ ಹಾಕಿದರೆ ಕ್ಷೇತ್ರ ಬದಲಾವಣೆ ಆಗಬಹುದು ಎನ್ನುವ ಯೋಚನೆ ಕೂಡ ಬಂದಿದೆ ಎಂಬುದಾಗಿ ಪೋರ್ಟ್‌ ವಾರ್ಡ್‌ ನ ಮತದಾರರೊಬ್ಬರು ಹೇಳಿದರು.

ಸೀಮಿತ ಬೆಂಬಲಿಗರೊಂದಿಗೆ ಪ್ರಚಾರ
ಚುನಾವಣ ಪ್ರಚಾರಕ್ಕೆ ತೆರಳುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಕಾರ್ಯಕರ್ತರ ದೊಡ್ಡ ಗುಂಪಿನೊಂದಿಗೆ ಪ್ರಚಾರಕ್ಕೆ ತೆರಳಿದರೆ ಪಕ್ಷೇತರ ಅಭ್ಯರ್ಥಿಗಳು ಹೆಚ್ಚಿನ ಗದ್ದಲವಿಲ್ಲದೆ ಸೀಮಿತ ಬೆಂಬಲಿಗರೊಂದಿಗೆ ಪ್ರಚಾರ ನಡೆಸುವುದು ಕಂಡು ಬರುತ್ತಿತ್ತು.

ದೇರೆಬೈಲು ಪೂರ್ವ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಪ್ರಸನ್ನ ರವಿ ಅವರು ಎರಡನೇ ಸುತ್ತಿನ ಮನೆ ಮನೆ ಪ್ರಚಾರ ಕಾರ್ಯವನ್ನು ಮುಕ್ತಾಯಗೊಳಿಸಿದ್ದರು. ಅಲ್ಲದೆ ವಾಹನಗಳಿಗೆ ಮೈಕ್‌ ಕಟ್ಟಿ ತಮ್ಮ ಭರವಸೆ, ವಾರ್ಡ್‌ನ ಅಭಿವೃದ್ಧಿ ಕುರಿತಾದ ಯೋಜನೆಗಳನ್ನು ಮತದಾರರ ಮುಂದಿಡುವ ಕೆಲಸ ಮಾಡುತ್ತಿದ್ದರು.

  ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next