ಮಂಗಳೂರು: ಆತ ಇಶಾನ್. ಮುಂಬಯಿ ಮೂಲದ ಮೂರು ವರ್ಷದ ಪುಟ್ಟ ಬಾಲಕ. ಎಲ್ಲ ಮಕ್ಕಳಂತೆ ಬಾಲಲೀಲೆಗಳನ್ನು ತೋರಿಸಬೇಕಿದ್ದ ಕಂದಮ್ಮ ಕಳೆದ ಮೂರು ತಿಂಗಳಿನಿಂದ ರಕ್ತದ ಕ್ಯಾನ್ಸರ್ (ಲ್ಯುಕೇಮಿಯಾ)ಗೆ ತುತ್ತಾಗಿದ್ದು, ಬದುಕಿಗಾಗಿ ಹೋರಾಡುತ್ತಿದ್ದಾನೆ!
Advertisement
ಅತೀ ಅಪರೂಪದ ರಕ್ತ ಕ್ಯಾನ್ಸರ್ ಲ್ಯುಕೇಮಿಯಾದಿಂದ ನರಳುತ್ತಿರುವ ಮಗುವಿನ ಮುಖದಲ್ಲಿ ನಗು ಕಾಣಲು ಹೆತ್ತವರು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಆದರೆ ಆತನಿಗೆ ಸರಿಹೊಂದುವ ಬ್ಲಿಡ್ ಸ್ಟೆಮ್ ಸೆಲ್ ಸಿಗದೇ ಕೈಚೆಲ್ಲಿದ್ದಾರೆ. ಇದೇ ವೇಳೆ ಮಂಗಳೂರಿನ ಸಂಘಟನೆಯೊಂದು ಬಾಲಕನ ಬಾಳಲ್ಲಿ ಬೆಳಕು ಮೂಡಿಸಲು ಮುಂದಾಗಿದೆ.
ಕೊಡಿಯಾಲ್ ನ್ಪೋರ್ಟ್ಸ್ ಅಸೋಸಿಯೇಶನ್ ಬಾಲಕ ಇಶಾನ್‌ಗೆ ನೆರವಾಗಲು “ಸ್ಟೆಮ್ ಸೆಲ್ ಡೋನರ್ ಅಭಿಯಾನ’ವನ್ನು ಹಮ್ಮಿಕೊಂಡಿದೆ. ಜೂ. 17 ಮತ್ತು 18ರಂದು ನಡೆಯುವ ಜಿಎಸ್‌ಬಿ ಪ್ರೊ ಕಬಡ್ಡಿ ಲೀಗ್ ಸಂದರ್ಭದಲ್ಲಿ ಸಂಘಟನೆಯು ಧಾತ್ರಿ ಬ್ಲಿಡ್ ಸ್ಟೆಮ್ ಸೆಲ್ ರಿಜಿಸ್ಟ್ರಿಯ ಜತೆ ಸೇರಿ ಬಾಲಕನಿಗಾಗಿ ಈ ಅಭಿಯಾನ ನಡೆಸುತ್ತಿದ್ದು, ಬಿಜೈ ಭಾರತ್ ಮಾಲ್‌ನ ಮೇಲಿನ ಮಹಡಿಯಲ್ಲಿ ಜೂ. 18ರಂದು ಬೆಳಗ್ಗೆ 10ರಿಂದ ಸಂಜೆ ತನಕ ನೋಂದಣಿ ಅಭಿಯಾನ ಮುಂದುವರಿಯಲಿದೆ. ಸಾರ್ವಜನಿಕರು ಭಾಗವಹಿಸಿ ಬಾಲಕ ಇಶಾನ್‌ಗೆ ನೆರವಾಗುವಲ್ಲಿ ಸಹಕರಿಸಬಹುದು. ನೀವೇನು ಮಾಡಬೇಕು ?
“ವಿ ಕ್ಯಾನ್ ನಾಟ್ ಹೆಲ್ಪ್ ಎವ್‌ರಿವನ್ ಬಟ್ ಎವ್‌ರಿವನ್ ಕ್ಯಾನ್ ಹೆಲ್ಪ್ ಸಮ್‌ವನ್’ ಎಂಬ ಧ್ಯೇಯೋದ್ದೇಶ ಇಟ್ಟುಕೊಂಡು ಅಭಿಯಾನ ನಡೆಯಲಿದೆ. ಜಿಎಸ್‌ಬಿ ಸಮುದಾಯದವರು ಸೇರಿದಂತೆ ಸಮಾಜದ 18ರಿಂದ 50 ವರ್ಷದೊಳಗಿನ ಯಾರೂ ಕೂಡ ಈ ಅಭಿಯಾನದಲ್ಲಿ ಭಾಗವಹಿಸಿ ನೋಂದಣಿ ಮಾಡಿಸಿಕೊಳ್ಳಬಹುದು.
Related Articles
Advertisement
ಗಿಫ್ಟ್ ಎ ಲೈಫ್ಇಂತಹ ಪ್ರಕರಣಗಳಲ್ಲಿ ಸ್ಟೆಮ್ ಸೆಲ್ ಹೊಂದಾಣಿಕೆಯಾಗುವುದೂ ವಿರಳ. 20,000 ಮಂದಿಯಲ್ಲಿ ಒಬ್ಬರ ಸ್ಟೆಮ್ ಸೆಲ್ ಹೊಂದಿಕೆಯಾಗುತ್ತದೆ. ಎಲ್ಲರೂ ಕೈ ಜೋಡಿಸಿದಲ್ಲಿ ಬಾಲಕನಿಗೆ ಸಹಾಯ ಆಗಬಹುದು ಎಂಬುದು ಸಂಘಟನೆಯ ಉದ್ದೇಶ. ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅಸೋಸಿಯೇಶನ್ ಟ್ರಸ್ಟಿ ನರೇಶ್ ಶೆಣೈ, “ಸುಮಾರು 1,000 ಸ್ಟೆಮ್ ಸೆಲ್ ದಾನಿಗಳನ್ನು ನೋಂದಣಿ ಮಾಡಿಸಿಕೊಳ್ಳುವ ಗುರಿ ಹೊಂದಲಾಗಿದೆ. ಬಾಲಕ ಇಶಾನ್‌ಗೆ ಸರಿ ಹೊಂದುವ ಸ್ಟೆಮ್ ಸೆಲ್ ಅನ್ನು ಹೊಂದಿಸುವಂತೆ ಪ್ರಯತ್ನಿಸಲಾಗುವುದು. ಅಲ್ಲದೇ ನೋಂದಣಿ ಮಾಡಿಕೊಂಡಲ್ಲಿ ಭವಿಷ್ಯದಲ್ಲಿಯೂ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಈ ಅಭಿಯಾನ ಸಹಕಾರಿಯಾಗಬಹುದು’ ಎನ್ನುತ್ತಾರೆ. 30 ದಿನಗಳ ಪ್ರಕ್ರಿಯೆ
ಒಮ್ಮೆ ನೀವು ಧಾತ್ರಿಯೊಂದಿಗೆ ನೋಂದಣಿ ಮಾಡಿಕೊಂಡ ಅನಂತರ ಎಂಜಲು ಸ್ಯಾಂಪಲ್‌ನ್ನು ಎಚ್‌ಎಲ್‌ಎ ಟೈಪಿಂಗ್‌ಗೆ ಕಳುಹಿಸಲಾಗುತ್ತದೆ. ಎಚ್‌ಎಲ್‌ಎ ಟೈಪ್ ರೋಗಿಗೆ ಹೊಂದಿಕೆಯಾದಲ್ಲಿ ನಿಮ್ಮ ಬ್ಲಿಡ್ ಸ್ಟೆಮ್ ಸೆಲ್‌ನ್ನು ದಾನ ಮಾಡಲು ಕರೆ ಬರುತ್ತದೆ. ಅನಂತರ ನೀವು ದಾನಿಯಾಗಲು ಸಮರ್ಥರೇ ಎಂಬುದನ್ನು ಪರೀಕ್ಷಿಸಿಕೊಳ್ಳಲಾಗುತ್ತದೆ. ಅರ್ಹರಿದ್ದಲ್ಲಿ ಜಿಸಿಎಸ್‌ಎಫ್ ಚುಚ್ಚುಮದ್ದನ್ನು ನೀಡಲಾಗುತ್ತದೆ. ಇದು ನಿಮ್ಮ ಸ್ಟೆಮ್ ಸೆಲ್ ಅನ್ನು ಮೂಳೆ ಮಜ್ಜೆಯಿಂದ ಬಿಡುಗಡೆಗೊಳಿಸಲು ನೆರವಾಗುತ್ತದೆ. ಮುಂದಿನ 5 ಗಂಟೆಗಳಲ್ಲಿ ಬ್ಲಿಡ್ ಸ್ಟೆಮ್ ಸೆಲ್ ಸಂಗ್ರಹಿಸಿ ಟ್ರಾನ್ಸ್‌ಪ್ಲಾಂಟ್ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅನಂತರವೇ ರೋಗಿಗೆ ಇದನ್ನು ನೀಡಲಾಗುತ್ತದೆ. ಒಟ್ಟು 30 ದಿನಗಳ ಪ್ರಕ್ರಿಯೆ ಇದಾಗಿರುತ್ತದೆ. – ಧನ್ಯಾ ಬಾಳೆಕಜೆ