Advertisement

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

07:23 PM Apr 25, 2024 | Team Udayavani |

ದಾವಣಗೆರೆ :ಪ್ರಧಾನಿ ನರೇಂದ್ರ ಮೋದಿಯವರು ಏ.28 ಮತ್ತು 29 ರಂದು ರಾಜ್ಯದ ಐದು ಕಡೆ ಚುನಾವಣ ಪ್ರಚಾರ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರಿಗೆ ಮಾಹಿತಿ ನೀಡಿದ ವಿಜಯೇಂದ್ರ, ಏ. 28 ರಂದು ಬೆಳಗಾವಿ, ಉತ್ತರ ಕನ್ನಡ, ದಾವಣಗೆರೆ, ಹೊಸಪೇಟೆ, ಏ. 29 ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾನುವಾರ ಬೆಳಗ್ಗೆ10 ಗಂಟೆಗೆ ಬೆಳಗಾವಿ, ಮಧ್ಯಾಹ್ನ 12 ಗಂಟೆಗೆ ಉತ್ತರ ಕನ್ನಡ, 2 ಗಂಟೆಗರ ದಾವಣಗೆರೆ, ಸಂಜೆ 4 ಕ್ಕೆ ಹೊಸಪೇಟೆ ಯಲ್ಲಿನ ಸಭೆಯಲ್ಲಿ ಭಾಗವಹಿಸುವರು. 29 ರಂದು ಬಾಗಲಕೋಟೆಯಲ್ಲಿ ಪ್ರಚಾರ ಸಭೆ ನಡೆಯಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಹೆಚ್ಚು ಪ್ರವಾಸ ಕೈಗೊಳ್ಳುತ್ತಿರುವುದರಿಂದ ಕಾಂಗ್ರೆಸ್ ಸರ್ಕಾರದ ಜಾಹೀರಾತುಗಳು ಸಹ ಹೆಚ್ಚಾಗಿವೆ. ಏಕೆಂದರೆ, ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಆತ್ಮವಿಶ್ವಾಸವೇ ಕುಗ್ಗುತ್ತಿದೆ. ಮೋದಿಯವರ ಜನಪ್ರಿಯತೆಯಿಂದ ಕಾಂಗ್ರೆಸ್ ಕಂಗಾಲಾಗುತ್ತಿದೆ. ಮೋದಿ ಜನಪ್ರಿಯತೆ ಮುಂದೆ ಕಾಂಗ್ರೆಸ್‌ನದ್ದು ಏನೂ ನಡೆಯುವುದೇ ಇಲ್ಲ ಎಂಬ ಜ್ಞಾನೋದಯವಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರಿಂದ ಬಿಜೆಪಿಯ ಸಂಕಲ್ಪ ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾಗುತ್ತಿದೆ. ನಮ್ಮ ಎಲ್ಲ ಮುಖಂಡರು, ಕಾರ್ಯಕರ್ತರು, ಮೋದಿ ಅಭಿಮಾನಿಗಳ ಉತ್ಸಾಹದಿಂದ ಇಮ್ಮಡಿ ಆಗುತ್ತಿದೆ. ವಿಶ್ವವೇ ಮೆಚ್ಚಿರುವ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಲು ಒಂದೊಂದು ಕ್ಷೇತ್ರದ ಗೆಲುವು ಅತೀ ಮುಖ್ಯ. ಪ್ರತಿ ಕ್ಷೇತ್ರವನ್ನೂ ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂದರು.

ಕಾಂಗ್ರೆಸ್ ಗೆಲ್ಲುವುದರಿಂದ ಯಾವುದೇ ಅಭಿವೃದ್ಧಿ ಆಗುವುದಿಲ್ಲ. ಮೋದಿಯವರು 2047 ರಲ್ಲಿನ ಅಭಿವೃದ್ಧಿ ಭಾರತದ ನಿರ್ಮಾಣದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಹಾಗಾಗಿ ಎಲ್ಲ ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಮೋದಿಯವರ ಕೈ ಬಲಪಡಿಸಬೇಕು ಎಂದರು.

Advertisement

ಮಾಹಿತಿ ಇಲ್ಲ
‘ಹಾಸನ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ CD ಬಿಡುಗಡೆ ಮಾಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ’ ಎಂದರು.

ನಿರೀಕ್ಷೆ ಹುಸಿ

ಏ. 26 ರಂದು ಚಿತ್ರದುರ್ಗ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಒಳಗೊಂಡಂತೆ ಮೊದಲ ಹಂತದಲ್ಲಿ ನಡೆಯಲಿರುವ 14 ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆದ್ದೇ ಗೆಲ್ಲುವರು. ಎಲ್ಲ ಕ್ಷೇತ್ರಗಳನ್ನೂ ಗೆಲ್ಲುವ ಕಾಂಗ್ರೆಸ್‌ನ ಬಹಳ ನಿರೀಕ್ಷೆ ಹುಸಿಯಾಗಲಿದೆ ಎಂದರು.

‘ಸ್ಯಾಮ್ ಪಿತ್ರೋಡಾ ಅವರ ಅರ್ಧ ಪಿತ್ರಾರ್ಜಿತ ಆಸ್ತಿ ಸರ್ಕಾರಕ್ಕೆ ಎಂಬ ಹೇಳಿಕೆ ಅಲ್ಪಸಂಖ್ಯಾತರ ಖುಷಿ ಪಡಿಸುವ ಕಾಂಗ್ರೆಸ್‌ ಹುನ್ನಾರದ ಮುಂದುವರಿದ ಭಾಗ. ದೇಶದ ಅಲ್ಪಸಂಖ್ಯಾತರನ್ನು ಖುಷಿ ಪಡಿಸುವುದಕ್ಕಾಗಿಯೇ ಕಾಂಗ್ರೆಸ್, ರಾಹುಲ್ ಗಾಂಧಿ ಇತರರು ಪಿತ್ರೋಡಾ ಮೂಲಕ ಹೇಳಿಸಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯವನ್ನ ಖುಷಿ ಪಡಿಸುವುದಕ್ಕಾಗಿ ಏನೆಲ್ಲ ಹೇಳಿಕೆ ಕೊಡಿಸುತ್ತಿದೆ. ಹುನ್ನಾರ, ಪಿತೂರಿ ನಡೆಸುತ್ತದೆ ಎಂಬುದಕ್ಕೆ ಪಿತ್ರೋಡಾ ಹೇಳಿಕೆಯೇ ಸಾಕ್ಷಿ.ಇದರಿಂದ ಕಾಂಗ್ರೆಸ್‌ನ ಮಾನಸಿಕತೆ ಏನು ಎಂಬುದು ಗೊತ್ತಾಗುತ್ತದೆ. ಅಂದ ಮಾತ್ರಕ್ಕೆ ಬಿಜೆಪಿ ಎಂದೆಂದಿಗೂ ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಅಲ್ಲವೇ ಅಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next