ವರದಿ :ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ: ಕೊರೊನಾ ಕರ್ಫ್ಯೂಗೆ ಬೇಸ್ತು ಬಿದ್ದಿರುವ ಸ್ಥಳೀಯ ಕಾಮಿಕರು ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳಿಗೆ ಹಿಂದೇಟು ಹಾಕುತ್ತಿದ್ದು, ಹೊರ ರಾಜ್ಯಗಳಿಂದ ಬಂದಿರುವ ಕಾರ್ಮಿಕರೇ ಯೋಜನೆಯ ಕಾಮಗಾರಿಗಳ ಕೈ ಹಿಡಿದಿದ್ದಾರೆ.
ಕೋವಿಡ್-19 ನಿಯಮಗಳನ್ನು ಅಳವಡಿಸಿಕೊಂಡು ಪ್ರಗತಿಯಲ್ಲಿರುವ ಎಲ್ಲಾ ಕಾಮಗಾರಿಗಳು ಸರಾಗವಾಗಿ ನಡೆಯುತ್ತಿವೆ. ಕೋವಿಡ್ ಮೊದಲ ಅಲೆ ವೇಳೆಗೆ ಘೋಷಣೆ ಮಾಡಿದ್ದ ಲಾಕ್‌ಡೌನ್ ಸಂದರ್ಭದಲ್ಲಿ ಹುಟ್ಟೂರಿಗೆ ಹೋದರೆ ಸಾಕು ಹೇಗಾದರೂ ಜೀವನ ಮಾಡಬಹುದು ಎಂದು ನಗರವನ್ನೇ ತೊರೆದಿದ್ದರು. ಹೀಗಾಗಿ ಅಗತ್ಯ ಕಾಮಗಾರಿಗಳಿಗೆ ಕೌಶಲ ಕಾರ್ಮಿಕರ ಸಮಸ್ಯೆಯ ಪರಿಣಾಮ ಸುಮಾರು 4-5 ತಿಂಗಳು ಕಾಲ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿದ್ದವು.
ಸೋಂಕಿನ ಪ್ರಮಾಣ ಕಡಿಮೆಯಾಗಿ ರೈಲ್ವೆ ಸೇವೆ ಸಹಜ ಸ್ಥಿತಿಗೆ ಬರುತ್ತಿದ್ದಂತೆ ತಮ್ಮ ರಾಜ್ಯಗಳಿಗೆ ತೆರಳಿದ್ದ ಕಾರ್ಮಿಕರು ವಾಪಸ್ ಆಗಮಿಸಿದ್ದರ ಪರಿಣಾಮ ಸಹಜ ಸ್ಥಿತಿಗೆ ಬಂದಿತ್ತು. ಇನ್ನೇನು ಎಲ್ಲವೂ ಸಹಜ ಸ್ಥಿತಿಗೆ ಬಂದವು ಎನ್ನುವಾಗಲೇ ಮಹಾಮಾರಿ ನರ್ತನ ಮತ್ತೆ ಶುರುವಾಗಿದೆ.
ಪೂರಕ ವ್ಯವಸ್ಥೆ: ಉಳಿದುಕೊಂಡಿರುವ ಕ್ಯಾಂಪ್ ಕಾರ್ಮಿಕರಿಗೆ ಸೂಕ್ತ ವಸತಿಯೊಂದಿಗೆ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಗುತ್ತಿಗೆದಾರರಿಂದ ನಡೆಯುತ್ತಿವೆ. ಇನ್ನೂ ಕಾಮಗಾರಿ ನಡೆಯುತ್ತಿರುವ ಸ್ಥಳದ ಅಕ್ಕಪಕ್ಕದಲ್ಲೇ ಇವರಿಗೆ ವಸತಿ ಸೌಲಭ್ಯ ಕಲ್ಪಿಸಿರುವುದಂದ ಓಡಾಡುವ ಪ್ರಶ್ನೆ ಉದ್ಭವಿಸಿಲ್ಲ. ಕಾರ್ಮಿಕರು ದೊರೆಯುವುದು ಕಷ್ಟ ಎನ್ನುವ ಕಾರಣಕ್ಕೆ ಇವರಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಗುತ್ತಿಗೆದಾರರು ಕಲ್ಪಿಸಿದ್ದಾರೆ. ಬೆಳಗ್ಗೆ ಕಾಮಗಾರಿ ಆರಂಭವಾದರೆ ಎರಡು ಪಾಳಿಯಲ್ಲಿ ಕೆಲವೆಡೆ ಕೆಲಸಗಳು ನಡೆಯುತ್ತಿವೆ.