Advertisement

ಶಿಬಿರ ಸ್ನೇಹ ಪ್ರಸಂಗ

12:30 AM Jan 25, 2019 | |

ಎನ್‌ಎಸ್‌ಎಸ್‌ ಶಿಬಿರ ಎಂಬುದು ಅದ್ಭುತವಾದ ಒಂದು ಲೋಕ. ಅದರಲ್ಲಿ ಸಿಗುವ ಅನುಭವಗಳೂ ವೈವಿಧ್ಯಮಯ. ನಾನು ಮೊನ್ನೆ ಮೊನ್ನೆಯಷ್ಟೇ ಒಂದು ಎನ್‌ಎಸ್‌ಎಸ್‌ ಶಿಬಿರ ಮುಗಿಸಿ ಬಂದೆ. ಅದರ ಗುಂಗಿನಿಂದ ಈಗಲೂ ಹೊರಬರಲು ಸಾಧ್ಯವಾಗುತ್ತಿಲ್ಲ. ಅದನ್ನು ಸಾಧ್ಯವಾದಷ್ಟು ಮಟ್ಟಿಗೆ ಹೇಳಲು ಬಯಸುತ್ತೇನೆ.

Advertisement

ಅಂದು ಬೆಳಗ್ಗೆ ಐದು ಗಂಟೆಗೆ ಎದ್ದು ಕಾತರದಿಂದ ಹೊರಡಲನುವಾಗಿದ್ದೆ. ಮನೆಯಿಂದ ದೂರದ ಅಲೆವೂರಿನ ಗುಡ್ಡೆಯಂಗಡಿಗೆ ! ಈ ವರ್ಷದ ನಮ್ಮ ಶಿಬಿರ ಅಲ್ಲಿಯೇ ನಡೆದದ್ದು. ಬೆಳಗೆ ಸುಮಾರು 9 ಗಂಟೆ ಹೊತ್ತಿಗೆ ಎಲ್ಲ ಶಿಬಿರಾರ್ಥಿಗಳು ಜಮಾಯಿಸಿದ್ದರು. ಎಲ್ಲರಿಗೂ ಕುತೂಹಲ. ವೈಜ್ಞಾನಿಕ ಮನೋಧರ್ಮ ಮತ್ತು ಯುವಜನತೆ ಎಂಬುದು ನಮ್ಮ ಶಿಬಿರದ ಧ್ಯೇಯವಾಕ್ಯವಾಗಿತ್ತು. ಎಲ್ಲ ಶಿಬಿರಾರ್ಥಿಗಳು ಬಂದ ನಂತರ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು. ಮೊದಲ ದಿನ ಯಾರ ಪರಿಚಯವೂ ಇಲ್ಲ- ನಮ್ಮ ನಮ್ಮ ಸ್ನೇಹಿತರನ್ನು ಹೊರತುಪಡಿಸಿ. 

ಮೊದಲ ದಿನದ ಸಂಜೆಯ ವೇಳೆಯಲ್ಲಿ ಶಿಬಿರಾರ್ಥಿಗಳನ್ನು ಐದು ತಂಡಗಳಾಗಿ ವಿಭಜಿಸಲಾಯಿತು. ಈ ತಂಡಗಳಿಗೆ ಕವಿಗಳ ಕೃತಿಗಳ ಹೆಸರನ್ನು ನೀಡಲಾಯಿತು. ಬಳಿಕ ಸಮರ್ಥ ನಾಯಕರನ್ನು ಆ ತಂಡಗಳಿಗೆ ಆಯ್ಕೆ ಮಾಡಲಾಯಿತು. ಅಡುಗೆ, ಸ್ವತ್ಛತೆ, ಶ್ರಮದಾನ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಎಂಬ ಐದು ಕಾರ್ಯಗಳನ್ನು ಐದು ತಂಡಗಳಿಗೂ ಹಂಚಿಕೆ ಮಾಡಲಾಯಿತು. ಕೆಲವು ಮನರಂಜನೆ ಆಟಗಳನ್ನು ಉತ್ಸಾಹದಿಂದ ಆಡಿದ್ದರಿಂದ ನಮ್ಮಲ್ಲಿ ಪರಸ್ಪರ ಆತ್ಮೀಯತೆ ಬೆಳೆಯಿತು. ರಾತ್ರಿ ನಮಗಾಗಿ ಬಿಸಿಬಿಸಿಯಾದ ರುಚಿಕರ ಊಟ ಕಾದಿತ್ತು. ಭೋಜನದ ನಂತರ ನಮ್ಮ ನಮ್ಮ ಕೊಠಡಿಗೆ ಹೋಗಿ ವಿರಮಿಸಿದೆವು. ಅಲ್ಲಿ ಯಾವ ಕುಂದುಕೊರತೆಗಳೂ ಇರಲಿಲ್ಲ. ಸುಖನಿದ್ರೆ ಆವರಿಸಿತು.

ಮಾರನೆಯ ದಿನ ಶಿಬಿರದ ಚಟುವಟಿಕೆಗಳು ಆರಂಭಗೊಂಡವು. ಎಲ್ಲರೂ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ತಮ್ಮ ತಮ್ಮ ಗುಂಪಿಗೆ ಅನುಗುಣವಾಗಿ ಹೊಂದಿಕೊಂಡೆವು. ಕಾರ್ಯಕ್ರಮದ ಹಾಲ್‌ನಲ್ಲಿ ಸಾಲಾಗಿ ಬಂದು ನಿಂತೆವು. ಹೊರಗೆ ನೋಡಿದರೆ, ಮಂಜಿನ ಪರದೆಯನ್ನು ಸರಿಸುತ್ತ ಉದಯಿಸಿದ ಸೂರ್ಯನು ನಮ್ಮನ್ನು ಸ್ವಾಗತಿಸುವ ಹಾಗೆ ಕಾಣಿಸಿದ. ಧ್ವಜಾರೋಹಣವನ್ನು ಮುಗಿಸಿ ಎನ್‌ಎಸ್‌ಎಸ್‌ ಧ್ವಜಕ್ಕೆ ನಮಸ್ಕರಿಸಿದೆವು. ತಮಾಷೆಯಾಗಿ ಮಾತನಾಡುತ್ತ ಪಾಕಶಾಲೆಯಲ್ಲಿ ತಯಾರಾದ ಜೀರಿಗೆ ಕಷಾಯವನ್ನು ಸೇವಿಸಿದೆವು. ಬಳಿಕ, ಶ್ರಮದಾನಕ್ಕೆ ಗುಂಪುಗಳಾಗಿ ಸಾಗಿದೆವು. ಒಂದು ಗಂಟೆಯ ಶ್ರಮದಾನ ಮುಗಿಯಿತು. ಮತ್ತೆ ಬೆಳಗಿನ ಉಪಾಹಾರಕ್ಕೆ ಕರೆ ಬಂತು. ಅದನ್ನು ಸೇವಿಸಿದ ಬಳಿಕ ಮತ್ತೆ ಶ್ರಮದಾನದ ಬಯಲಿಗೆ. ಪುನಃ ಎರಡು ಗಂಟೆಯ ಶ್ರಮದಾನವೂ ನಡೆಯಿತು. 

ನಾವು ಶಿಬಿರಕ್ಕೆ ಬರುವ ಮೊದಲು ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದೆವು. ಗ್ರಾಮೀಣ ಸಮೀಕ್ಷೆ, ಪರಿಸರ ಪ್ರಜ್ಞೆ, ಶಾಲಾ ಆಟದ ಮೈದಾನ ವಿಸ್ತರಣೆ, ಹಕ್ಕು ಬಾಧ್ಯತೆಗಳ ಅರಿವು, ಸ್ವತ್ಛತೆಯ ಎಚ್ಚರ, ರಾಷ್ಟ್ರೀಯ ಭಾವೈಕ್ಯ ಮತ್ತು ಸಾಮರಸ್ಯದ ಪಸರಿಸುವಿಕೆಗಳಂಥ ಉದ್ದೇಶಗಳ ಬಗ್ಗೆ ಪೂರ್ವಭಾವಿ ತಯಾರಿ ನಡೆಸಿದ್ದೆವು. ಅದರ ಭಾಗವಾಗಿ ಅಲೆವೂರಿನ ಗುಡ್ಡೆಯಂಗಡಿಯ ನೆಹರು ಕ್ರೀಡಾಂಗಣವನ್ನು ಸ್ವತ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೆವು. ಎರಡು ದಿನಗಳ ಕಾಲ ಕ್ರೀಡಾಂಗಣವನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿದೆವು. ಇದರ ಜೊತೆಗೆ ರಸ್ತೆಗೆ ಮಣ್ಣು ಹಾಕುವುದು, ಗೋಡೆಬರಹಗಳನ್ನು ಅಳಿಸುವುದು- ಮುಂತಾದ ಕೆಲಸಗಳನ್ನು ತುಂಬ ಆಸಕ್ತಿಯಿಂದ ನಿರ್ವಹಿಸಿದೆವು. ಮಧ್ಯಾಹ್ನ 12.30ಕ್ಕೆ ಶ್ರಮದಾನದ ಕೆಲಸ ಮುಗಿಯುತ್ತಿತ್ತು. ಆನಂತರ ಅಲ್ಲಿರುವ ಕೆಲವು ಮನೆಗಳಿಗೆ ತೆರಳಿ ಸ್ನಾನ ಮಾಡಿ ಊಟಕ್ಕೆ ಸಿದ್ಧರಾದೆವು. 

Advertisement

ಇಷ್ಟಾಗುವಾಗ ಹೊಟ್ಟೆ ತುಂಬಾ ಹಸಿವಾಗುತ್ತಿತ್ತು. ಬೇಗ ಬೇಗನೆ ಎಲ್ಲರೂ ಊಟದ ಮನೆಯನ್ನು ಸೇರಿದೆವು. ಸ್ನಾನ, ಊಟ, ಶ್ರಮದಾನ ಎಲ್ಲಕೂ ಒಂದೊಂದು ಸಮಯ ನಿಗದಿಯಾಗಿತ್ತು. ಈ ಸಮಯವನ್ನು ನಾವು ಸರಿಯಾಗಿ ಪಾಲನೆ ಮಾಡಬೇಕಿತ್ತು. ಮಧ್ಯಾಹ್ನ ಊಟದ ನಂತರ‌ ಶೈಕ್ಷಣಿಕ ಕಾರ್ಯಕ್ರಮಗಳು ಜರಗುತ್ತಿದ್ದವು. ಶೈಕ್ಷಣಿಕ ತಂಡದವರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದ್ದರು. ಹಾಗೆಯೇ ನಮ್ಮನ್ನು ಚೇತನಗೊಳಿಸಲು ಹಿರಿಯ ವಿದ್ಯಾರ್ಥಿಗಳು ಮನೋರಂಜನಾ ಆಟಗಳನ್ನು ನಮಗೆ ಆಡಿಸುತ್ತಿದ್ದರು.

ಸಂಜೆ ಧ್ವಜಾವರೋಹಣ ನಡೆಸಿ ಸಾಂಸ್ಕೃತಿಕ  ಕಾರ್ಯಕ್ರಮಕ್ಕೆ ಸಜ್ಜಾಗುತ್ತಿ¨ªೆವು. ಸಾಂಸ್ಕೃತಿಕ ವಿಭಾಗದ ಜವಾಬ್ದಾರಿಯನ್ನು ಹೊತ್ತ ತಂಡವು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕೊಡುತ್ತಿತ್ತು. ಅದುವರೆಗೆ ವೇದಿಕೆಗಳನ್ನು ಹತ್ತದವರಿಗೆ ಅದೊಂದು ಸುಂದರ ಅವಕಾಶ.  ನಮ್ಮ ಸಂತೋಷದ ಕ್ಷಣಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರೂ ಉಪಸ್ಥಿತರಿರುತ್ತಿದ್ದರು. ತದನಂತರ ರಾತ್ರಿಯ ಊಟವನ್ನು ಮುಗಿಸಿ ದಿನಚರಿಯನ್ನು ಓದುವ ಅವಲೋಕನದ ಹೊತ್ತು. ನಾವು ಮಾಡಿದ ಸರಿ-ತಪ್ಪುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೆವು. ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದೆವು. ಅವಲೋಕನದ ನಂತರ ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತ ನಿದ್ರೆಗೆ ಜಾರುತ್ತಿದ್ದೆವು.

ದಿನಗಳು ಕಳೆದ ಹಾಗೆ ಎಲ್ಲರು ಒಂದೇ ಕುಟುಂಬದ ಸದಸ್ಯರ ಹಾಗೆ ಆತ್ಮೀಯರಾದೆವು. ದಿನಗಳು ಕಳೆದವು. ಇಷ್ಟು ದಿನದ ನಗು, ಅಳು, ದ್ವೇಷ, ಗೆಳೆತನ, ಊಟ, ವೇದಿಕೆ, ತಮಾಷೆ, ಆಟ-ಪಾಠಗಳು, ಹಿರಿ-ಕಿರಿಯದರ ಜೊತೆಗಿನ ತರಲೆ-ತುಂಟಾಟಗಳನ್ನು ಹೇಳಿದಷ್ಟೂ ಮುಗಿಯುವುದಿಲ್ಲ. 

ಶಿಬಿರದ ಕೊನೆಯ ಹಿಂದಿನ ದಿನದ ಅವಲೋಕನದಲ್ಲಿ ಭಾರತದ ಭೂಪಟದ ಚಿತ್ರವನ್ನು ಬಿಡಿಸಿ ಅದಕ್ಕೆ ಜ್ಯೋತಿಯನ್ನು ಅರ್ಪಿಸುವ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕೆಲವರಿಗೆ ಧನ್ಯವಾದ ಹೇಳಿದೆವು. ಕ್ಷಮೆ ಕೇಳಿದೆವು, ಕ್ಷಮಿಸಿದೆವು. 

ಕೊನೆಯ ರಾತ್ರಿ. ಹಗಲಿನ ಕೆಲಸಗಳಿಂದ ದಣಿದಿದ್ದರೂ ನಿದ್ದೆ ಬರುತ್ತಿರಲಿಲ್ಲ. ಕಣ್ಣುಗಳಲ್ಲಿ ನೀರು- ನಾಳೆ ಬಿಟ್ಟು ಹೋಗಬೇಕೆಂಬ ಬೇಸರ. 

ಬೇಡವೆಂದರೂ ಶಿಬಿರದ ಕೊನೆಯ ದಿನ ಬಂದೇಬಿಟ್ಟಿತ್ತು. ಪರಸ್ಪರ “ಬಾಯ್‌’ ಎನ್ನಲು ದನಿಯೇ ಬರುತ್ತಿರಲಿಲ್ಲ.

ರಮ್ಯಾ ಬಿ.
ದ್ವಿತೀಯ ಬಿ. ಎ. ಎಂಜಿಎಂ ಕಾಲೇಜು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next