ದಾವಣಗೆರೆ: ಭಾರೀ ವಾಹನ ಚಾಲಕರೇ, ಇನ್ನು ಮುಂದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುವಂತಿಲ್ಲ. ಹೆದ್ದಾರಿಯಲ್ಲಿಯೂ ಪೊಲೀಸ್ ಇಲಾಖೆ ಕ್ಯಾಮೆರಾ ಕಣ್ಗಾವಲು ಹಾಕುತ್ತಿದ್ದು ಸಂಚಾರಿ ನಿಯಮ ಉಲ್ಲಂಘಿಸಿದರೆ ದಂಡ ಗ್ಯಾರಂಟಿ!
ಹೌದು, ರಾಜ್ಯ ಪೊಲೀಸ್ ಇಲಾಖೆ ಇಂಥದ್ದೊಂದು ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದು ಯೋಜನೆ ಅನುಷ್ಠಾನಕ್ಕೆ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ದುಕೊಂಡಿದೆ. ಬೆಂಗಳೂರಿನಿಂದ ಬೆಳಗಾವಿವರೆಗಿನ ಏಳು ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕ್ಯಾಮೆರಾ ಅಳವಡಿಸಲು ಯೋಜನೆ ರೂಪಿಸಿಕೊಂಡಿದ್ದು, ಪ್ರಥಮ ಹಂತದಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕ್ಯಾಮೆರಾ ಅಳವಡಿಸಲು ಮುಂದಾಗಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ನಿಯಮ ಮೀರಿ ಸಂಚರಿಸುವ ಲಾರಿ, ಹತ್ತಕ್ಕೂ ಹೆಚ್ಚು ಚಕ್ರದ ಭಾರೀ ವಾಹನಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಪೊಲೀಸ್ ಇಲಾಖೆ ಈ ಯೋಜನೆ ರೂಪಿಸಿದೆ. ಹೀಗಾಗಿ ಇನ್ನು ಮುಂದೆ ಭಾರೀ ವಾಹನಗಳು ಹೆದ್ದಾರಿಯಲ್ಲಿ ತಮಗಾಗಿಯೇ ಇರುವ ಮಾರ್ಗದಲ್ಲಿಯೇ (ಮೂರನೇ ಲೈನ್) ಸಂಚರಿಸಬೇಕು. ಅದನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸಿದರೆ ಕ್ಯಾಮೆರಾಗಳು ಅಂಥ ವಾಹನಗಳ ಮಾಹಿತಿಯನ್ನು (ನಂಬರ್ ಪ್ಲೇಟ್ ಫೋಟೋ ಸಹಿತ) ಟೋಲ್ ಬಳಿ ಸರ್ವರ್‌ಗೆ ರವಾನಿಸುತ್ತವೆ.ನಿಯಮ ಉಲ್ಲಂಘಿಸಿದ ವಾಹನ ಮುಂದಿನ ಟೋಲ್ ಬಳಿ ಬಂದಾಗ ಅಲ್ಲಿ ಇದಕ್ಕಾಗಿಯೇ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿಗೆ 500 ರೂ. ದಂಡ ಕಟ್ಟಿಯೇ ಮುಂದೆ ಸಾಗಬೇಕಾಗುತ್ತದೆ.
ಎಎನ್‌ಪಿಆರ್ ಕ್ಯಾಮೆರಾ: ಹೆದ್ದಾರಿಯಲ್ಲಿ ಕ್ಯಾಮೆರಾ ಅಳವಡಿಸುವ ಈ ಯೋಜನೆಯಲ್ಲಿ ಅಂತರದ ಆಧಾರದಲ್ಲಿ ಒಂದೊಂದು ಜಿಲ್ಲಾ ವ್ಯಾಪ್ತಿಯಲ್ಲಿ ಹೆದ್ದಾರಿಯ ಮೂರ್‍ನಾಲ್ಕು ಸ್ಥಳಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ಎಎನ್‌ಪಿಆರ್ (ಆಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನೆಜೇಷನ್) ಕ್ಯಾಮೆರಾ ಅಳವಡಿಸಲಾಗುತ್ತದೆ. ಒಂದು ಸ್ಥಳದಲ್ಲಿ ಮೂರ್‍ನಾಲ್ಕು ವಿವಿಧ ಕೋನಗಳ, ವಿವಿಧ ಬಗೆಯ ಕ್ಯಾಮೆರಾ ಅಳವಡಿಸಲಾಗುತ್ತದೆ. ಈ ಕ್ಯಾಮೆರಾಗಳು ಟೋಲ್ ಬಳಿ ಇರುವ ಸರ್ವರ್‌ಗೆ ನಿಯಮ ಉಲ್ಲಂಘಿಸಿದ ವಾಹನಗಳ ಮಾಹಿತಿ ರವಾನಿಸಲಿವೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಭಾರೀ ವಾಹನಗಳು ರಸ್ತೆ ನಿಯಮ ಮೀರಿ ಸಂಚರಿಸುವುದರಿಂದ ಉಂಟಾಗುವ ಅಪಘಾತಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯ ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಪ್ರಾಯೋಗಿಕವಾಗಿ ನಡೆಯುತ್ತಿರುವ ಈ ಯೋಜನೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಂದು ಕಾದು ನೋಡಬೇಕಿದೆ.
ಸೂಚನಾ ಫಲಕ ಗಮನಿಸಿ
ಹೆದ್ದಾರಿಯಲ್ಲಿ ಯಾವ ವಿಧದ ವಾಹನ, ಯಾವ ಲೈನ್‌ನಲ್ಲಿ ಸಂಚರಿಸಬೇಕು ಎಂಬ ಬಗ್ಗೆ ಹೆದ್ದಾರಿಗುಂಟ ಈಗಾಗಲೇ ಸೂಚನಾ ಫಲಕ ಹಾಕಲಾಗಿದೆ. ಅದನ್ನು ಗಮನಿಸಿಯೇ ವಾಹನ ಚಾಲಕರು ವಾಹನ ಚಾಲನೆ ಮಾಡಬೇಕು. ಪೊಲೀಸ್ ಇಲಾಖೆ ಪ್ರಸ್ತುತ ಭಾರೀ ವಾಹನಗಳ ನಿಯಮ ಉಲ್ಲಂಘನೆಗೆ ಸೀಮಿತವಾಗಿ ಯೋಜನೆ ಮಾಡಿದೆಯಾದರೂ ಮುಂದಿನ ದಿನಗಳಲ್ಲಿ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲ ವಾಹನಗಳ ಸಂಚಾರಿ ನಿಯಮ (ವೇಗಮಿತಿ, ಸಂಚಾರ ಮಾರ್ಗ ಸೇರಿದಂತೆ ಇನ್ನಿತರ ನಿಯಮ) ಪಾಲನೆಯ ನಿಗಾವಹಿಸಲು ಬಳಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಹೆದ್ದಾರಿಯಲ್ಲಿ ಭಾರೀ ವಾಹನಗಳ ರಸ್ತೆ ನಿಯಮ ಉಲ್ಲಂಘನೆ ನಿಯಂತ್ರಣಕ್ಕೆ ಕ್ಯಾಮೆರಾ ಅಳವಡಿಸುವ ಯೋಜನೆ ಪ್ರಥಮವಾಗಿ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲಾ ವ್ಯಾಪ್ತಿಯ ಹೆದ್ದಾರಿಯಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಜನವರಿಯಲ್ಲಿ ಈ ಯೋಜನೆ ಆರಂಭವಾಗುವ ಸಾಧ್ಯತೆ ಇದೆ.
ಸಿ.ಬಿ. ರಿಷ್ಯಂತ್, ಎಸ್ಪಿ, ದಾವಣಗೆರೆ
*ಎಚ್.ಕೆ. ನಟರಾಜ