Advertisement
ದೂರದ ಆಸ್ಟ್ರೇಲಿಯಾದಲ್ಲಿ ಕೂತು ದೂರದರ್ಶಕವೊಂದು ಸಂಗ್ರಹಿಸಿದ ಮಾಹಿತಿಯನ್ನು ನಾರ್ಕೆವಿಕ್ ಯುವ ವಿಜ್ಞಾನಿಯೊಬ್ಬ ಪರಿಶೀಲಿಸುತ್ತಿದ್ದ. ಒಂದೆಡೆ ಆತನಿಗೆ ಅಂತರಿಕ್ಷದಲ್ಲಿ ಕ್ಯಾಮೆರಾ ಫ್ಲ್ಯಾಶ್ ಮಾಡಿದಂಥ ಮಾಹಿತಿ ದೊರಕಿತ್ತು. ಆ ಸಂಜ್ಞೆಯನ್ನು ಸುಧಾರಣೆಗೆ ಒಳಪಡಿಸಿದಾಗ ಅದು ಸಮೀಪದ ನಕ್ಷತ್ರ ಪುಂಜದಿಂದ ಬರುತ್ತಿರುವುದು ಗೊತ್ತಾಯಿತು. ನಮ್ಮ ಸೂರ್ಯ ಒಂದು ತಿಂಗಳ ಕಾಲ ಉರಿದಾಗ ಬಿಡುಗಡೆಯಾಗುವಷ್ಟು ಶಕ್ತಿಯನ್ನು ಆ ನಕ್ಷತ್ರ ಒಂದು ಮಿಲಿ ಸೆಕೆಂಡಿನಲ್ಲಿ ಬಿಡುಗೊಳಿಸುತ್ತಿತ್ತು. ಅದರಿಂದಾಗಿಯೇ ಫ್ಲ್ಯಾಶ್ ಮೂಡಿದ್ದು. ಈ ವಿದ್ಯಮಾನವನ್ನು “ಫಾಸ್ಟ್ ರೇಡಿಯೋ ಬರ್ಸ್ಡ್’ ಈಗ ಎಂದು ಕರೆಯಲಾಗುತ್ತದೆ.
ಯುವ ವಿಜ್ಞಾನಿ ನಾರ್ಕೆವಿಕ್ ಈ ಫ್ಲ್ಯಾಷ್ ಅನ್ನು ಪತ್ತೆಹಚ್ಚಿದ ನಂತರ ಸಂಶೋಧಕರು ಏನಿಲ್ಲವೆಂದರೂ ಸುಮಾರು 80 ಫ್ಲ್ಯಾಶ್‌ಗಳನ್ನು ಪತ್ತೆಹಚ್ಚಿದ್ದಾರೆ. ಅಲ್ಲದೆ, ವಿಶ್ವದಲ್ಲಿ ಪ್ರತಿ ಸೆಕೆಂಡಿಗೆ ಒಮ್ಮೆ ಈ ರೀತಿಯ ಫ್ಲ್ಯಾಶ್‌ಗಳು ಉಂಟಾಗುತ್ತವೆ ಎಂಬ ತೀರ್ಮಾನಕ್ಕೂ ವಿಜ್ಞಾನಿಗಳು ಬಂದಿದ್ದಾರೆ. ಈ ಫ್ಲ್ಯಾಶ್‌ಗಳು ಹಲವು ಸಂಶೋಧನಾ ತಂಡಗಳನ್ನು ಆಕರ್ಷಿಸಿದೆ. ಅದರಲ್ಲೂ ಅನ್ಯಗ್ರಹ ಜೀವಿಗಳ ಹುಡುಕಾಟದಲ್ಲಿ ತೊಡಗಿಕೊಂಡಿರುವ ತಂಡವೊಂದು ವಿಶೇಷ ಮುತುವರ್ಜಿಯಿಂದ ತೊಡಗಿಕೊಂಡಿದ್ದಾರೆ. ಕೋಟ್ಯಧಿಪತಿಯೊಬ್ಬರು ಅದನ್ನು ನಡೆಸುತ್ತಿರುವುದು ವಿಶೇಷ. ಹಿಂದೆಲ್ಲಾ ಮಹಾರಾಜರನ್ನು ಕಲಾ ಪೋಷಕರು ಎಂದು ಗುರುತಿಸಲಾಗುತ್ತಿತ್ತು. ಪ್ರತಿಭಾನ್ವಿತರಿಗೆ ಅಗತ್ಯ ನೆರವು ನೀಡಿ ಅವರ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದರು. ಇಂದು ಆ ಕೆಲಸದಲ್ಲಿ ಶ್ರೀಮಂತರು ತೊಡಗಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಯೂರಿ ಮಿಲ್ನರ್ ಸಾಕ್ಷಿ. ನಕ್ಷತ್ರಗಳ ಜಾಲಾಡಿದ ವಿಜ್ಞಾನಿಗಳು
ಅನ್ಯಗ್ರಹ ಜೀವಿಗಳ ಹುಡುಕಾಟ ನಡೆಸುತ್ತಿರುವ ಮನುಷ್ಯ ರೇಡಿಯೊ ತರಂಗ ಆವಿಷ್ಕಾರ ಆದ ದಿನದಿಂದಲೂ ಅಂತರಿಕ್ಷದಿಂದ ಕೇಳಿ ಬರುವ ಶಬ್ದಗಳನ್ನು ಆಲಿಸುತ್ತಲೇ ಇದ್ದಾನೆ. ನಮಗಿಂತಲೂ ಹೆಚ್ಚಿನ ಬುದ್ಧಿಮತ್ತೆ ಹೊಂದಿರುವ ಅನ್ಯಗ್ರಹ ಜೀವಿಗಳು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದ್ದಲ್ಲಿ ನಾನಾ ವಿಧಗಳಿಂದ ಭೂಮಿಯನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರಬಹುದು. ಕತ್ತಲಲ್ಲಿ ಪರಿಚಿತರು ತಮ್ಮ ಇರುವಿಕೆಯನ್ನು ತೋರ್ಪಡಿಸಲು ಟಾರ್ಚ್ ಬೆಳಕು ಬೀರುವಂತೆ ಇಲ್ಲವೇ ಒಂದೂ ಕೂಗು ಹಾಕುವಂತೆ ಏಲಿಯನ್ನುಗಳೂ ಮಾಡುತ್ತಿರಬಹುದು. ಇದು ಹಾಸ್ಯಾಸ್ಪದ ಎನ್ನಿಸಿದರೂ ವಿಜ್ಞಾನಿಗಳು ಹಾಗೆಂದುಕೊಳ್ಳದೆ ದಶಗಳಿಂದ ಅನ್ಯಗ್ರಹ ಜೀವಿಗಳ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ.
Related Articles
ಈ ಸಂಶೋಧನೆಗಾಗಿ ಅಮೆರಿಕದ ವೆಸ್ಟ್‌ವರ್ಜಿನಿಯಾ ಹಾಗೂ ಆಸ್ಟ್ರೇಲಿಯಾದಲ್ಲಿರುವ ಜಗತ್ತಿನ ಎರಡು ಶಕ್ತಿಶಾಲಿ ದೂರದರ್ಶಕಗಳನ್ನು ಬಳಸಿಕೊಳ್ಳಲಾಗಿತ್ತು. ಇಷ್ಟು ದಿನದ ಹುಡುಕಾಟ ಫಲಪ್ರದ ಆಗಿಲ್ಲದಿರುವುದಕ್ಕೆ ಸಂಶೋಧಕರು ಕೆಲ ಕಾರಣಗಳನ್ನು ನೀಡುತ್ತಾರೆ. ಅನ್ಯಗ್ರಹ ಜೀವಿಗಳ ಸಂಜ್ಞೆಗಳನ್ನು ಗುರುತಿಸುವ ತಂತ್ರಜ್ಞಾನ ನಮ್ಮಲ್ಲಿ ಇಲ್ಲದಿರುವುದು, ಅಥವಾ ಅನ್ಯಗ್ರಹ ಜೀವಿಗಳು ಇನ್ನೂ ಸುಧಾರಿತ ತಂತ್ರಜ್ಞಾನವನ್ನು ಹೊಂದಿಲ್ಲದಿರುವುದು. ಇವೆಲ್ಲಾ ಬರೀ ಸಾಧ್ಯತೆ, ಊಹಾಪೋಹಗಳಷ್ಟೇ. ಇಷ್ಟಕ್ಕೇ ಹುಡುಕಾಟ ನಿಂತಿಲ್ಲ. “ಬ್ರೇಕ್‌ಥ್ರೂ ಲಿಸನ್’ ಸಂಶೋಧನಾ ತಂಡ ಈ ಬಾರಿ ದಕ್ಷಿಣಆಫ್ರಿಕಾದಲ್ಲಿರುವ “ಮೀರ್‌ಕ್ಯಾಟ್’ ದೂರದರ್ಶಕವನ್ನು ಬಳಸಿಕೊಳ್ಳಲಿದೆ. ಅಂದ ಹಾಗೆ, 2025ರ ತನಕ ಕೋಟ್ಯಧಿಪತಿ ಮಿಲ್ನರ್, ಈ ಸಂಶೋಧನೆಗೆ ಹಣ ನೀಡಲಿದ್ದಾರೆ. ಅಷ್ಟರೊಳಗೆ ಏನಾದರೂ ಚಿಕ್ಕ ಕುರುಹು ಸಿಕ್ಕಲಿ ಎಂಬ ಆಶಾವಾದ ನಮ್ಮೆಲ್ಲರದೂ ಆಗಿರಲಿ.
Advertisement
ಸಾವಿರಾರು ನಕ್ಷತ್ರಗಳ ಜಾಲಾಟಶಕ್ತಿಶಾಲಿ ದೂರದರ್ಶಕವನ್ನಿಟ್ಟುಕೊಂಡು ಅಂತರಿಕ್ಷವನ್ನು ಜಾಲಾಡುತ್ತಿದ್ದಾರೆ. ರೇಡಿಯೋ ಸಂಜ್ಞೆಗಳನ್ನು ಕೇಳಿಸಿಕೊಂಡು ಅವನ್ನು ಅಧ್ಯಯನಕ್ಕೊಳಪಡಿಸುತ್ತಿದ್ದಾರೆ. ಈ ರೀತಿಯ ಅಧ್ಯಯನ ನಡೆಸುವ ಸಂಶೋಧನಾ ತಂಡವೊಂದನ್ನು ರಷ್ಯಾದ ಕೋಟ್ಯಧಿಪತಿ ಯೂರಿ ಮಿಲ್ನರ್ ಸ್ಥಾಪಿಸಿ ಅದಕ್ಕಾಗಿ ಕೋಟ್ಯಂತರ ಹಣವನ್ನು ಖರ್ಚು ಮಾಡುತ್ತಿದ್ದಾರೆ. “ಬ್ರೇಕ್‌ಥ್ರೂ ಲಿಸನ್’ ಎಂಬ ಹೆಸರಿನ ಆ ಸಂಶೋಧನಾ ತಂಡ ಈಗಾಗಲೇ 1327 ನಕ್ಷತ್ರಗಳನ್ನು ಜಾಲಾಡಿದೆ. ಅನ್ಯಗ್ರಹ ಜೀವಿಗಳ ಇರುವಿಕೆಯನ್ನು ಸಾಬೀತುಪಡಿಸುವ ಸ್ಪಷ್ಟ ಪುರಾವೆ ಇನ್ನೂ ಸಿಕ್ಕಿಲ್ಲ. ಹರ್ಷವರ್ಧನ್ ಸುಳ್ಯ