Advertisement

ಶಾ ಟಿಪ್ಪಣಿಯ ಮೇಲೆ ಕ್ಯಾಮೆರಾ ಕಣ್ಣು!

05:52 PM Aug 06, 2019 | Sriram |

ಕಾಶ್ಮೀರ ವಿಚಾರದಲ್ಲಿ ಕೇಂದ್ರ ಸರಕಾರ ಯಾವ ರೀತಿಯ ತಯಾರಿ ಮಾಡಿಕೊಂಡಿದೆ ಎಂಬುದನ್ನು ವಿದೇಶಿ ಸುದ್ದಿ ಸಂಸ್ಥೆ ಎಎಫ್ಪಿ ಕೆಮರಾ ಕಣ್ಣು ಸೆರೆ ಹಿಡಿದಿದೆ. ಸಂಸತ್‌ ಭವನಕ್ಕೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಗೃಹ ಸಚಿವ ಅಮಿತ್‌ ಶಾ ಆಗಮಿಸುವಾಗ ಅವರ ಕೈಯಲ್ಲಿ ಒಂದು ಟಿಪ್ಪಣಿ ಇತ್ತು. ಇದನ್ನು ಕೆಮರಾಮನ್‌ ಸೆರೆ ಹಿಡಿದಿದ್ದು, ಗೃಹ ಸಚಿವರು ಯಾವ ತಯಾರಿ ಮಾಡಿಕೊಂಡಿದ್ದಾರೆ ಎಂಬುದರ ವಿವರ ಈ ಟಿಪ್ಪಣಿಯಲ್ಲಿದೆ.

Advertisement

ಸಾಂವಿಧಾನಿಕ, ರಾಜಕೀಯ ಮತ್ತು ಕಾನೂನು ಸುವ್ಯವಸ್ಥೆ ಎಂಬ ಮೂರು ವಿಭಾಗಗಳಲ್ಲಿ ಹಲವು ಕ್ರಮಗಳ ಬಗ್ಗೆ ಈ ಟಿಪ್ಪಣಿಯಲ್ಲಿ ನಮೂದಿಸಲಾಗಿದೆ. ಸಂವಿಧಾನ ವಿಭಾಗದಲ್ಲಿ ರಾಷ್ಟ್ರಪತಿಗೆ ಮಾಹಿತಿ, ಉಪರಾಷ್ಟ್ರಪತಿಗೆ ಮಾಹಿತಿ, ಸಂಪುಟ ಸಭೆ, ರಾಷ್ಟ್ರಪತಿ ಅಧಿಸೂಚನೆ, ಸಂಸತ್ತಿನಲ್ಲಿ ಮಸೂದೆ ಮಂಡನೆ, ರಾಜ್ಯಸಭೆಯಲ್ಲಿ ಭದ್ರತೆ ಎಂಬ ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಇದೇ ರೀತಿ ರಾಜಕೀಯ ಎಂಬ ವಿಭಾಗದಲ್ಲೂ ದೇಶವನ್ನುದ್ದೇಶಿಸಿ ಪ್ರಧಾನಿ ಮಾತನಾಡುವುದು, ಸರ್ವಪಕ್ಷಗಳ ಸಭೆ, ಎನ್‌ಡಿಎ ಸಂಸದರಿಗೆ ಮಾಹಿತಿ ಸೇರಿದಂತೆ ಹಲವು ಅಂಶಗಳನ್ನು ನಮೂದಿಸಲಾಗಿದೆ.

ಪರಿಸ್ಥಿತಿ ವಿಷಮಿಸದಂತೆ ನೋಡಿಕೊಳ್ಳಿ: ಭಾರತ, ಪಾಕ್‌ಗೆ ವಿಶ್ವಸಂಸ್ಥೆ
ಭಾರತ-ಪಾಕಿಸ್ಥಾನ ನಡುವೆ ದಿಢೀರ್‌ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ಆತಂಕಕ್ಕೊಳಗಾಗಿರುವ ವಿಶ್ವಸಂಸ್ಥೆ, ಎರಡೂ ರಾಷ್ಟ್ರಗಳಿಗೆ ಮನವಿ ಮಾಡಿ, ಪರಿಸ್ಥಿತಿ ಇನ್ನಷ್ಟು ವಿಷಮವಾಗದಂತೆ ನೋಡಿಕೊಳ್ಳಿ ಎಂದು ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್‌ ಆ್ಯಂಟೊನಿಯೊ ಗುಟೆರಸ್‌, ಎರಡೂ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ಚಟುವಟಿಕೆಗೆ ಹೆಚ್ಚಿದೆ ಎನ್ನುವುದು ನಮ್ಮ ಗಮನಕ್ಕೆ ಬಂದಿದೆ. ಆದ್ದರಿಂದ ಎರಡೂ ರಾಷ್ಟ್ರಗಳು ಪರಿಸ್ಥಿತಿ ಇನ್ನಷ್ಟು ವಿಷಮಿಸದಂತೆ ನೋಡಿಕೊಳ್ಳಲು ಗರಿಷ್ಠ ಯತ್ನ ಹಾಕಬೇಕು ಎಂದು ವಿನಂತಿಸಿದ್ದಾರೆ. ಎರಡೂ ರಾಷ್ಟ್ರಗಳಲ್ಲಿ ಸೇನಾ ಪರಿಸ್ಥಿತಿಯ ಮೇಲೆ ನಿಗಾ ಇಡಲು ವಿಶ್ವಸಂಸ್ಥೆಯ ವೀಕ್ಷಕ ಗುಂಪು 1949ರಲ್ಲಿ ರಚನೆಯಾಗಿದೆ. 1972ರ ಶಿಮ್ಲಾ ಒಪ್ಪಂದದ ನಂತರ ಈ ಗುಂಪು ತನ್ನ ಮಾನ್ಯತೆ ಕಳೆದುಕೊಂಡಿದೆ ಎಂದು ಭಾರತ ವಾದಿಸಿದೆ.

ಕಣಿವೆಯೀಗ ಬೂದಿ ಮುಚ್ಚಿದ ಕೆಂಡ
ಸೋಮವಾರದ ಬೆಳವಣಿಗೆಗಳ ಬಳಿಕ ಕಣಿವೆ ರಾಜ್ಯವು ಸಂಪೂರ್ಣ ಸ್ತಬ್ಧವಾದಂತೆ ಕಾಣುತ್ತಿದ್ದರೂ, ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಮೊದಲೇ ಕೇಂದ್ರ ಸರಕಾರವು ಎಲ್ಲ ಸಂಭಾವ್ಯ ಹಿಂಸಾಚಾರ, ಪರಿಸ್ಥಿತಿಗಳನ್ನು ಮನಗಂಡು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಭಾನುವಾರ ರಾತ್ರಿಯೇ ಗೃಹಬಂಧನದಲ್ಲಿ ಇರಿಸಲಾಗಿದೆ. ಹಿಂಸಾಚಾರ ಭುಗಿಲೇಳದಂತೆ ತಡೆಯಲು, ವದಂತಿಗಳು ಹಬ್ಬದಂತೆ ನೋಡಿಕೊಳ್ಳಲು ಜಮ್ಮು-ಕಾಶ್ಮೀರದಾದ್ಯಂತ ಇಂಟರ್ನೆಟ್‌, ಮೊಬೈಲ್‌ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ. ಈಗಾಗಲೇ ಭಾರೀ ಸಂಖ್ಯೆಯ ಅರೆಸೇನಾ ಪಡೆ ಸಿಬ್ಬಂದಿ ರಾಜ್ಯದಲ್ಲಿ ನಿಯೋಜಿತರಾಗಿದ್ದು, ಎಲ್ಲೆಲ್ಲೂ ಹದ್ದಿನ ಕಣ್ಣಿಟ್ಟಿದ್ದಾರೆ. ಸೋಮವಾರ ಮತ್ತೆ 8 ಸಾವಿರ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ರವಾನಿಸಲಾಗಿದೆ.

ಎಲ್ಲ ರಾಜ್ಯಗಳಿಗೂ ಸಂದೇಶ
ಭದ್ರತಾ ಪಡೆಗಳನ್ನು ಗರಿಷ್ಠ ಅಲರ್ಟ್‌ ಆಗಿರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಗೃಹ ಸಚಿವಾಲಯವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಅಲ್ಲದೆ, ರಾಜ್ಯಗಳಲ್ಲಿ ನೆಲೆಸಿರುವಂಥ ಜಮ್ಮು-ಕಾಶ್ಮೀರದ ನಿವಾಸಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ವಿಶೇಷವಾಗಿ ಗಮನ ಇಡುವಂತೆಯೂ ನಿರ್ದೇಶಿಸಿದೆ.

Advertisement

ಕಾಶ್ಮೀರಿಗರು ಏನಂತಾರೆ?
ಕೇಂದ್ರದ ಕ್ರಮದಿಂದಾಗಿ ಕಾಶ್ಮೀರದ ಜನರಲ್ಲಿ ಮತ್ತೆ ಹಿಂಸೆ ಭುಗಿಲೇಳುವ ಆತಂಕ ಮನೆ ಮಾಡಿದೆ. ಅಲ್ಲದೆ ಈ ನಿರ್ಧಾರದಿಂದಾಗಿ ಮುಸ್ಲಿಂ ಬಾಹುಳ್ಯದ ರಾಜ್ಯ ಎಂಬ ಗುರುತು ಕೂಡ ಬದಲಾಗುವ ಸಾಧ್ಯತೆಯಿದೆ. ಈ ನಿರ್ಧಾರದಿಂದಾಗಿ ನಮಗೆ ಆಘಾತವಾಗಿದೆ. 370ನೇ ವಿಧಿಯೊಂದಿಗೆ ನಾವು ಭಾವನಾತ್ಮಕವಾಗಿ ಸಂಬಂಧ ಹೊಂದಿದ್ದೇವೆ. ಇದನ್ನು ತೆಗೆದುಹಾಕಿದರೆ ಮುಸ್ಲಿಂ ಬಾಹುಳ್ಯದ ರಾಜ್ಯ ಎಂಬ ಗುರುತು ಕಳೆದುಹೋಗುತ್ತದೆ ಎಂದು ಶ್ರೀನಗರ ನಿವಾಸಿ ಫ‌ರೂಕ್‌ ಅಹಮದ್‌ ಶಾ ಹೇಳುತ್ತಾರೆ.

ಕಳೆದ 70 ವರ್ಷಗಳಲ್ಲಿ ಆಡಳಿತ ಪಕ್ಷಗಳು 370ನೇ ವಿಧಿಯನ್ನು ಕೇವಲ ಅಸ್ಥಿಪಂಜರವನ್ನಾಗಿಸಿವೆ. ಇದನ್ನು ಹಿಂತೆಗೆದರೆ ಜನರು ಹಿಂಸಾಚಾರಕ್ಕೆ ಮುಂದಾಗುತ್ತಾರೆ. ನಮ್ಮನ್ನು ಎಷ್ಟು ದಿನಗಳವರೆಗೆ ಸರಕಾರ ಗೃಹಬಂಧನದಲ್ಲಿ ಇಡುತ್ತದೆ ಎಂದು ಕಾಶ್ಮೀರದ ಅರ್ಶಿದ್‌ ವಾರ್ಸಿ ಪ್ರಶ್ನಿಸುತ್ತಾರೆ. 370 ನೇ ವಿಧಿಯನ್ನು ಹಿಂತೆಗೆದ ಮಾತ್ರಕ್ಕೆ ನಮ್ಮ ಧ್ವನಿಯನ್ನು ಹತ್ತಿಕ್ಕಲಾಗದು ಎಂದು ಆಕ್ಷೇಪ ವ್ಯಕ್ತಪಡಿಸುತ್ತಾನೆ.

ಕಾಶ್ಮೀರದಲ್ಲಿ ಪದೇ ಪಡೆ ನಡೆಯುತ್ತಿರುವ ಹಿಂಸಾಚಾರದಿಂದಾಗಿ ನನ್ನ ಉದ್ಯಮ ನಷ್ಟ ಅನುಭವಿಸಿತು. ಹೀಗಾಗಿ ಮುಚ್ಚಿದ್ದೇನೆ. ಅದೇ ನನ್ನ ಜೀವನೋಪಾಯವಾಗಿತ್ತು. ಕರ್ಫ್ಯೂ ವಿಧಿಸಿರುವುದರಿಂದ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಕಾಶ್ಮೀರದ ಉದ್ಯಮಿಯೊಬ್ಬ ಹೇಳಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next