Advertisement

ಹಳಿಯಾಳದಲ್ಲಿ ಕುರುಡಾದ ಕ್ಯಾಮೆರಾ ಕಣ್ಣು!

04:14 PM Dec 09, 2019 | Suhan S |

ಹಳಿಯಾಳ: ಪಟ್ಟಣದಲ್ಲಿ ಹಲವಾರು ಪ್ರಕರಣ ಭೇದಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿದ್ದ ಸಿಸಿ ಕ್ಯಾಮೆರಾಗಳು ಕಳೆದ ಮೂರು ತಿಂಗಳಿಗೂ ಹೆಚ್ಚು ಸಮಯದಿಂದ ಕಣ್ಣು ಮುಚ್ಚಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಈವರೆಗೆ ರಿಪೇರಿಯಾಗದೇ ನಿಷ್ಪ್ರಯೋಜಕವಾಗಿವೆ.

Advertisement

ಸಂಚಾರಿ ನಿಯಮಗಳ ಪರಿಣಾಮಕಾರಿ ಅನುಷ್ಠಾನ, ಅಪರಾಧಿಗಳನ್ನು ಶೀಘ್ರ ಪತ್ತೆ ಹಾಗೂ ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸಲೆಂದು ಕಳೆದ ಒಂದೂವರೆ ವರ್ಷದ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚನೆ ಹಾಗೂ ವಿನಂತಿ ಹಿನ್ನೆಲೆಯಲ್ಲಿ ಹಳಿಯಾಳ ಪುರಸಭೆಯವರು ಅಳವಡಿಸಿದ್ದರು. ರಾಜ್ಯ ಹಣಕಾಸು ಆಯೋಗ ಮತ್ತು ಪುರಸಭೆ ನಿಧಿಯಿಂದ ಮೊದಲ ಬಾರಿಗೆ 20 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ 29 ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಬಳಿಕ ಮತ್ತೇ 15 ಲಕ್ಷ ರೂ. ವಿನಿಯೋಗಿಸಿ ಅವುಗಳನ್ನು ವೈರಲೆಸ್‌ ಸೇವೆಗೆ ಪರಿವರ್ತಿಸಲಾಗಿತ್ತು. ಒಟ್ಟೂ 35 ಲಕ್ಷ ರೂ. ಈ ಕ್ಯಾಮೆರಾಗಳಿಗೆ ವಿನಿಯೋಗಿಸಲಾಗಿತ್ತು.

ಬೆಂಗಳೂರಿನ ಮೌರ್ಯ ಇನೊಧೀಟೆಕ್‌ ಪ್ರೈವೆಟ್‌ ಲಿಮಿಟೆಡ್‌ನ‌ವರು ಈ ಕ್ಯಾಮೆರಾ ಅಳವಡಿಕೆಯ ಗುತ್ತಿಗೆ ಪಡೆದಿದ್ದರು. ಪಟ್ಟಣದ ಶಿವಾಜಿ ಸರ್ಕಲ್‌, ಬಸವೇಶ್ವರ ಸರ್ಕಲ್‌, ವನಶ್ರೀ ವೃತ್ತ, ಬೆಳಗಾವಿ ರಸ್ತೆ, ಬಸ್‌ ನಿಲ್ದಾಣ ಎದುರುಗಡೆ, ಅರ್ಬನ್‌ ಬ್ಯಾಂಕ್‌ ಸರ್ಕಲ್‌, ಮಾರುಕಟ್ಟೆ ಪ್ರದೇಶ, ಫಿಶ್‌ ಮಾರ್ಕೆಟ್‌ ಸಮೀಪ, ದೇಶಪಾಂಡೆ ರುಡಸೆಟ್‌ ಎದುರು, ಮಾಗವಾಡ, ಕೆಸರೊಳ್ಳಿ ಚೆಕ್‌ಪೋಸ್ಟ್‌ ಹೀಗೆ ಹಲವು ಪ್ರಮುಖ ಸ್ಥಳಗಳಲ್ಲಿ 29 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಕ್ಯಾಮೆರಾ ಅಳವಡಿಸಿದ ಕೆಲವು ತಿಂಗಳಿನಲ್ಲೇ ಹಲವು ಬಾರಿ ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿದ್ದ ಇವುಗಳು ಈಗ ಕಳೆದ ಮೂರು ತಿಂಗಳಿಂದ ಬ್ಯಾಕಪ್‌ ಕೂಡ ಇಲ್ಲದೇ ಕ್ಯಾಮೆರಾಗಳು ಧೂಳು ತಿನ್ನುತ್ತಿವೆ. ಅಲ್ಲದೇ ಕೆಲ ಕಡೆಗಳಲ್ಲಿ ಇವುಗಳ ವೈರ್‌ಗಳು ತುಂಡಾಗಿ ಜೋತಾಡುತ್ತಿವೆ.

ಪುರಸಭೆ ಅನುದಾನದಲ್ಲಿ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಬಳಿಕ ಅದನ್ನು ಹಳಿಯಾಳ ಪೊಲೀಸ್‌ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆದರೆ ನಿರ್ವಹಣೆ ಜವಾಬ್ದಾರಿ ಮಾತ್ರ ಪುರಸಭೆಗೆ ಇದ್ದು. ಕ್ಯಾಮೆರಾಗಳು ದುರಸ್ತಿಗೆ ಬಂದರೆ ಅಥವಾ ತಾಂತ್ರಿಕ ತೊಂದರೆಗಳಾದರೆ ಪುರಸಭೆಗೆ ಮಾಹಿತಿ ನೀಡಿದರೆ ಸಾಕು ಅವರು ಕ್ಯಾಮೆರಾ ಅವಳಡಿಕೆಯ ಗುತ್ತಿಗೆ ಪಡೆದವರನ್ನು ಸಂಪರ್ಕಿಸಿ ದುರಸ್ತಿ ಮಾಡಿಸುತ್ತಾರೆ. ಆದರೆ ಇಲ್ಲಿ ಕಳೆದ ನಾಲ್ಕೂ ತಿಂಗಳಿಂದ ಯಾವುದೇ ಕ್ರಮ ಜರುಗಿಸದೆ ಕ್ಯಾಮೆರಾಗಳು ಕಣ್ಮುಚ್ಚಿವೆ.

 

Advertisement

-ಯೋಗರಾಜ ಎಸ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next