Advertisement

ತೋಟಕ್ಕೆ ಬಂದವನು

06:00 AM Nov 01, 2018 | |

ನಿನ್ನೆ ರಾತ್ರಿ ದೊಡ್ಡ ಮಳೆ ಬಂದು ಗಿಡದಲ್ಲಿಯ ಹೂವುಗಳೆಲ್ಲ ಉದುರಿವೆ. ಚಿಗುರು ಎಲೆಗಳು ಹರಿದು ಚಿಂದಿಯಾಗಿ ಹಸಿರು ಹುಲ್ಲಿನ ಮೇಲೆ ಬಿದ್ದಿವೆ. ಬೇಲಿ ನೆಲ ಕಚ್ಚಿದೆ. ಕಾಲುದಾರಿಗಳಲ್ಲಿ ನೀರು ಹರಿಯುತ್ತಿದೆ. ಮರದ ರೆಂಬೆಗಳು ಧರೆಗೆ ಉರುಳಿವೆ. ಕೊಂಬೆಗಳೆಲ್ಲ ತುಂಡಾಗಿ ಅಲ್ಲಲ್ಲಿ ಬಿದ್ದಿವೆ. ತೋಟದಲ್ಲಿ ಎಂದಿನ ಸೊಬಗಿಲ್ಲ. ಹೂವಿನ ಪರಿಮಳವಿಲ್ಲ. ಹಕ್ಕಿಗಳ ದನಿ ಇಲ್ಲ. ಚಿಟ್ಟೆಗಳು ಅಲ್ಲಲ್ಲಿ ಹಾರಾಡುತ್ತಿಲ್ಲ. ಇಂತಹಾ ಸಮಯದಲ್ಲಿ ತೋಟದ ಮಾಲಿಕನ ಸ್ನೇಹಿತ ಪಟ್ಟಣದಿಂದ ಬಂದಿದ್ದಾನೆ. ತೋಟ ನೋಡಲು ಬಂದೆ ಅನ್ನುತ್ತಾನೆ.

Advertisement

“ಛೆ ಎಂತಹಾ ಸಮಯದಲ್ಲಿ ಬಂದೆಯಲ್ಲ’ ಎಂದು ಬೇಸರಪಟ್ಟುಕೊಳ್ಳುತ್ತಾನೆ ಈತ. ಆ ಪಟ್ಟಣದ ಗೆಳೆಯನಿಗೂ ಬೇಸರವಾಗುತ್ತದೆ. ಆದರೂ ಆತ ಆ ಹಾಳು ಬಿದ್ದ ತೋಟದಲ್ಲಿ ತಿರುಗಾಡುತ್ತಾನೆ. 

ತೋಟದ  ಮಾಲಿಕ “ನಿಲ್ಲು ಎಲ್ಲಾದರೂ ಒಂದು ಹೂವು ಉಳಿದಿರಬಹುದು, ಹುಡುಕಿಕೊಡುವೆ’ ಎಂದು ತೋಟದಲ್ಲಿ ಹುಡುಕಾಡುತ್ತಾನೆ. ಕೊನೆಗೆ ಮೂಲೆಯಲ್ಲಿ ಮುರಿದು ಬಿದ್ದ ಒಂದು ಪೊದೆಯ ಮರೆಯಲ್ಲಿ ಒಂದು ಕೆಂಪು ಗುಲಾಬಿ ಅವನಿಗೆ ಸಿಗುತ್ತದೆ. ಅದನ್ನೇ ತಂದು ಗೆಳೆಯನ ಮುಂದೆ ಹಿಡಿಯುತ್ತಾನೆ.

“ತೆಗೆದುಕೋ, ಹಾಳು ತೋಟದಲ್ಲಿ ಉಳಿದದ್ದು ಇದೊಂದೇ’
ಆ ಪೇಟೆಯ ಗೆಳೆಯ ಅದನ್ನು ಪ್ರೀತಿಯಿಂದ ಸ್ವೀಕರಿಸಿ ಅದರ ಸೊಬಗನ್ನು ನೋಡುತ್ತಾನೆ. ನೋಡಿ ಸಂತಸ ಪಡುತ್ತಾನೆ.

– ಡಾ. ನಾ. ಡಿಸೋಜ
(ಗುರುದೇವರ ಕತೆಗಳು, ಗೀತಾಂಜಲಿ ಪುಸ್ತಕ ಪ್ರಕಾಶನ)

Advertisement

ಪರಿಚಯ: 
ನಾಡಿನ ಹೆಸರಾಂತ ಕಾದಂಬರಿಕಾರ ನಾ. ಡಿ ಸೋಜ ಕಾದಂಬರಿ, ಕಿರುಗತೆ, ನಾಟಕ, ಮಕ್ಕಳ ಸಾಹಿತ್ಯ ಸೇರಿದಂತೆ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ಮಕ್ಕಳ ಕತೆಗಳು ನೇರವಾಗಿರುವಂತೆ ತೋರಿದರೂ, ಅದರೊಳಗೆ ಸಾಮಾಜಿಕ ಪ್ರಜ್ಞೆ ಮತ್ತು ಬದುಕಿನ ಕುರಿತು ವಿಭಿನ್ನ ನೋಟವನ್ನು ನೀಡುವ ಬೀಜ ಹುದುಗಿರುತ್ತದೆ. ಆನೆ ಬಂತೊಂದಾನೆ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ, ಆನೆ ಹುಡುಗ ಅಬ್ದುಲ್ಲಾ ಅವರ ಇತರೆ ಕಥೆಗಳು…

Advertisement

Udayavani is now on Telegram. Click here to join our channel and stay updated with the latest news.

Next