ಎಲ್ಲಾ ಕಡೆಯಲ್ಲೂ ಅವರದೇ “ಭರಾಟೆ…’ ಹೌದು, ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ಇನ್ನೇನು ಪ್ರೇಕ್ಷಕರ ಎದುರು ಬರೋಕೆ ಸಜ್ಜಾಗುತ್ತಿದೆ. ಈಗಾಗಲೇ ಪೋಸ್ಟರ್, ಹಾಡು, ಟೀಸರ್ ಮೂಲಕ ಜೋರು ಸದ್ದು ಮಾಡಿದ್ದ “ಭರಾಟೆ’, ಈಗ ಟ್ರೇಲರ್‌ನಲ್ಲೂ ಭರ್ಜರಿ ಸೌಂಡು ಮಾಡುವ ಮೂಲಕ ಮತ್ತಷ್ಟು ಸುದ್ದಿಯಾಗಿದೆ.
ಹೌದು, ಮಂಗಳವಾರ ಚಿತ್ರದ ಟ್ರೇಲರ್ ಹೊರಬಂದಿದ್ದು, ಕೇವಲ ನಾಲ್ಕು ಗಂಟೆಯಲ್ಲೇ ಎರಡು ಲಕ್ಷ ವೀಕ್ಷಣೆಯಾಗಿರುವುದಕ್ಕೆ ಚಿತ್ರತಂಡ ಸಹಜವಾಗಿಯೇ ಖುಷಿಯ ಅಲೆಯಲ್ಲಿ ತೇಲುತ್ತಿದೆ. “ಭರಾಟೆ’ ಸಖತ್ ಹೈವೋಲ್ಟೇಜ್ ಆ್ಯಕ್ಷನ್ ಇರುವ ಚಿತ್ರ ಅನ್ನೋದು, ಮೊದಲ ಟೀಸರ್‌ನಲ್ಲೇ ಸಾಬೀತು ಮಾಡಿತ್ತು. ಈಗ ಬಿಡುಗಡೆಯಾಗಿರುವ ಟ್ರೇಲರ್ ನೋಡಿದವರಿಗೆ, ಅದು ಮತ್ತಷ್ಟು ಖಚಿತಪಡಿಸುವಂತಿದೆ.
ಪವರ್‌ಫುಲ್ ಡೈಲಾಗ್ ಜೊತೆ, ಸ್ಟಂಟ್ಸ್ ನೋಡಿದವರು ಫುಲ್ ಖುಷ್ ಮೂಡ್‌ನಲ್ಲಿದ್ದಾರೆ. ಫ್ಯಾನ್ಸ್‌ಗಷ್ಟೇ ಅಲ್ಲ, ಟ್ರೇಲರ್ ನೋಡಿದವರಿಗೆಲ್ಲರಿಗೂ, ಒಂದೊಮ್ಮೆ “ಭರಾಟೆ’ ನೋಡಬೇಕೆನ್ನುವಷ್ಟರ ಮಟ್ಟಿಗೆ ಟ್ರೇಲರ್ ಕಟ್ ಮಾಡಿ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ “ಬಹದ್ದೂರ್’ ಚೇತನ್‌ಕುಮಾರ್.
ಟ್ರೇಲರ್‌ನಲ್ಲಿ ಮೂವರು ಪವರ್‌ಫುಲ್ ಖಳನಟರ ಡೈಲಾಗ್ ಕೇಳಿದವರಿಗಂತೂ, ಮತ್ತೊಂದು ಇಂಟ್ರೆಸ್ಟಿಂಗ್ ಆ್ಯಕ್ಷನ್ ದೃಶ್ಯಗಳನ್ನು ಸವಿಯಬಹುದು ಎಂಬ ಗ್ಯಾರಂಟಿ ಸಿಗುತ್ತೆ. ಅಂದಹಾಗೆ, ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಾಯಿಕುಮಾರ್, ರವಿಶಂಕರ್ ಹಾಗೂ ಅಯ್ಯಪ್ಪ ಅವರು ಖಳನಟರುಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ಚಿತ್ರದ ಹೈಲೈಟ್.
ಇನ್ನು, ಈಗಾಗಲೇ ಹಾಡುಗಳು ಕೂಡ ಮೆಚ್ಚುಗೆ ಪಡೆದಿದ್ದು, ಈಗ ಟ್ರೇಲರ್‌ಗೆ ಎಲ್ಲೆಡೆಯಿಂದಲೂ ಮೆಚ್ಚುಗೆಯಾಗಿದೆ. ಬಿಡುಗಡೆಯಾಗಿ ಕೇವಲ ನಾಲ್ಕು ಗಂಟೆಗಳಲ್ಲೇ, ಲಕ್ಷಗಟ್ಟಲೆ ಮಂದಿ ವೀಕ್ಷಿಸಿದ್ದಾರೆ. ಸುಪ್ರೀತ್ ನಿರ್ಮಾಣದ ಈ ಚಿತ್ರದಲ್ಲಿ ಶ್ರೀಮುರಳಿ ಅವರಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದಾರೆ. ಉಳಿದಂತೆ ಶರತ್ ಲೋಹಿತಾಶ್ವ, ಅವಿನಾಶ್ ಇತರರು ಇದ್ದಾರೆ.