Advertisement

ಚಾಮರಾಜೇಶ್ವರ ರಥಕ್ಕೆ ಬೆಂಕಿ: ಆರೋಪಿ ಬಂಧನ

03:41 PM Feb 24, 2017 | Team Udayavani |

ಚಾಮರಾಜನಗರ: ತೀವ್ರ ಚರ್ಚೆಗೆ ಕಾರಣವಾಗಿದ್ದ, ನಗರದ ಚಾಮರಾಜೇಶ್ವರ ಸ್ವಾಮಿ ದೊಡ್ಡ ರಥಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬುಧವಾರ ರಾತ್ರಿ ನಗರದಲ್ಲಿ ಬಂಧಿಸಿದ್ದಾರೆ.

Advertisement

ನಗರದ ಉಪ್ಪಾರ ಬೀದಿ 2ನೇ ಕ್ರಾಸ್‌ ನಿವಾಸಿ ಮೋಹನ್‌ ಕುಮಾರ್‌ ಅಲಿಯಾಸ್‌ ಕುಮಾರ್‌ (32) ಬಂಧಿತ. ಈತ ಕಂಬಿ ಕಟ್ಟುವ ಕೆಲಸ ಮಾಡುತ್ತಾನೆ. ಚಾಮರಾಜೇಶ್ವರ ದೇವಾಲಯದ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಶಿಥಿಲವಾಗಿರುವ ದೊಡ್ಡ ರಥವನ್ನೂ ಹೊಸದಾಗಿ ನಿರ್ಮಿಸಲಿ ಎಂಬ ಉದ್ದೇಶದಿಂದ ರಥಕ್ಕೆ ಬೆಂಕಿ ಹಚ್ಚಿದೆ ಎಂದು ತಪ್ಪೊಪ್ಪಿಗೆ ನೀಡಿದ್ದಾನೆ ಎಂದು ಎಸ್ಪಿ ಕುಲದೀಪಕುಮಾರ್‌ ಜೈನ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಕುರಿತು ಎಸ್ಪಿ ಹೇಳಿದ್ದಿಷ್ಟು: ಫೆ.19ರ ಮುಂಜಾನೆ 1.15ರ ಸುಮಾರಿನಲ್ಲಿ ನಗರದ ದೊಡ್ಡರಥಕ್ಕೆ ಕಿಡಿಗೇಡಿಗಳು ಬೆಂಕಿ ಹೆಚ್ಚಿದ್ದಾರೆಂದು ಫೆ.19ರಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಂಜೇಶ್‌ ದೂರು ನೀಡಿದ್ದರು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಆರೋಪಿಗಳ ಪತ್ತೆಗೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್‌ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದರು. ಡಿವೈಎಸ್‌ಪಿ ಗಂಗಾಧರಸ್ವಾಮಿ ಈ ತಂಡಗಳ ಉಸ್ತುವಾರಿ ವಹಿಸಿಕೊಂಡಿದ್ದರು. 

ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ, ರಥದ ಸಮೀಪವಿದ್ದ ಬ್ಯಾಂಕ್‌ಗಳ ಮುಂದೆ ಅಳವಡಿಸಲಾಗಿದ್ದ ಸಿಸಿಟೀವಿಯಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳು ಲಭ್ಯವಾಗಿದ್ದವು. ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಅಧಿಕಾರಿಗಳು ಅದರ ಆಧಾರದ ಮೇಲೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಬುಧವಾರ ಸಂಜೆ ಆರೋಪಿಯನ್ನು ವಶಕ್ಕೆ ಪಡೆದು, ತನಿಖೆಗೆ ಒಳಪಡಿಸಿದಾಗ ಸತ್ಯಾಂಸ ಬೆಳಕಿಗೆ ಬಂದಿದ್ದು, ಆರೋಪಿ ತಾನೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. 

ಬೇರೆಯವರ ಕೈವಾಡವಿಲ್ಲ: ಕೃತ್ಯ ಹಿಂದೆ ಬೇರೆಯವರ ಕೈವಾಡ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪಿ, ನಾವು ಇಲ್ಲಿಯ ತನಕ ನಡೆಸಿರುವ ತನಿಖೆಯ ಪ್ರಕಾರ ಈ ಪ್ರಕರಣದಲ್ಲಿ ಬೇರೆಯವರ ಕೈವಾಡ ಇರುವ ಸಣ್ಣ ಸುಳಿವೂ ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಆದಾಗ್ಯೂ ತನಿಖೆ ಇನ್ನೂ ನಡೆಯುತ್ತಿದೆ. ಬೇರೆ ಯಾರಾದರೂ ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು. ಡಿವೈಎಸ್ಪಿ ಎಸ್‌.ಇ. ಗಂಗಾಧರಸ್ವಾಮಿ,  ಇನ್ಸ್‌ಪೆಕ್ಟರ್‌ ಮಹದೇವಯ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advertisement

ಆರೋಪಿ ಕುಮಾರ್‌ ಪತ್ತೆಯಾಗಿದ್ದು ಹೀಗೆ   
ರಥ ನಿಲ್ಲಿಸಿದ್ದ ಸುತ್ತಮುತ್ತಲ ಕಟ್ಟಡಗಳಲ್ಲಿದ್ದ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದರು. ರಥದ ಪಕ್ಕದಲ್ಲೇ ರಾಷ್ಟ್ರೀಯ ಬ್ಯಾಂಕ್‌ ಹಾಗೂ ಖಾಸಗಿ ಬ್ಯಾಂಕ್‌ಗಳಿದ್ದು, ಅವುಗಳ ಮುಂದೆ ಅಳವಡಿಸಿರುವ ಸಿಸಿಟೀವಿ ಕ್ಯಾಮೆರಾದಲ್ಲಿನ ದೃಶ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದರು. ಅದರಲ್ಲಿ ಶನಿವಾರ ಮಧ್ಯರಾತ್ರಿ 1.10ರ ಸಮಯದಲ್ಲಿ ಬಣ್ಣದ ಪಂಚೆ ಧರಿಸಿದ ವ್ಯಕ್ತಿ ರಥ ನಿಲ್ಲಿಸಿರುವ ಜಾಗಕ್ಕೆ ಹೋಗುವ ದೃಶ್ಯ ದಾಖಲಾಗಿತ್ತು. ಇದರಲ್ಲಿ ವ್ಯಕ್ತಿಯ ಬೆನ್ನು ಮಾತ್ರ ಕಾಣುತ್ತಿತ್ತು. ಇದಕ್ಕೂ 10ರಿಂದ 15 ನಿಮಿಷ ಮುಂಚೆ ಇದೇ ವ್ಯಕ್ತಿ ನಗರದ ಸಂತೆಮರಹಳ್ಳಿ ವೃತ್ತ ದಾಟುತ್ತಿರುವುದು ಅಲ್ಲಿ ಪೊಲೀಸರು ಅಳವಡಿಸಿರುವ ಸಿಸಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. 

ಅಲ್ಲದೇ ಘಟನೆ ನಡೆದ 4-5 ನಿಮಿಷಗಳ ಬಳಿಕ ಇದೇ ವ್ಯಕ್ತಿ ಭುವನೇಶ್ವರಿ ವೃತ್ತದಲ್ಲಿ ಆಟೋ ಚಾಲಕನೊಬ್ಬನ ಬಳಿ ಮಾತನಾಡುವುದು ಕಂಡು ಬಂದಿತ್ತು.. ಇದರ ಬೆನ್ನುಹತ್ತಿ ಹೋದ ಪೊಲೀಸರು ಆಟೋ ಚಾಲಕರನ್ನು ವಿಚಾರ ಮಾಡಿದ್ದಾರೆ. ಅಂದು ಮಧ್ಯರಾತ್ರಿ ಆರೋಪಿ ಕುಮಾರ್‌ ತನ್ನ ಬಳಿ ಬಂದು ರಥಕ್ಕೆ ಬೆಂಕಿ ಬಿದ್ದಿದೆ ಎಂದು ತಿಳಿಸಿದ ಎಂದು ಆಟೋ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 

ಇದರ ಆಧಾರದ ಮೇಲೆ ಆರೋಪಿ ಕುಮಾರ್‌ನನ್ನು ಬುಧವಾರ ಸಂಜೆ ಆತನ ಮನೆಯಲ್ಲೇ ಪೊಲೀಸರು ಬಂಧಿಸಿದರು. ಬಳಿಕ ವಿಚಾರಣೆಗೊಳಪಡಿಸಿದಾಗ ಕುಮಾರ್‌ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಿಸಿ ಕ್ಯಾಮೆರಾದಲ್ಲಿನ ದೃಶ್ಯಗಳು, ಆಟೋ ಚಾಲಕನ ಹೇಳಿಕೆ, ಇನ್ನು ಆರೋಪಿಯೇ ತಪ್ಪನ್ನು ಒಪ್ಪಿಕೊಂಡಿದ್ದು ಕುಮಾರನೇ ಈ ಕೃತ್ಯ ಎಸಗಿರುವುದು ಖಚಿತವಾಗಿದೆ ಎಂದು ಎಸ್ಪಿ ಕುಲದೀಪ್‌ಕುಮಾರ್‌ ವಿವರಿಸಿದರು.

ತನಿಖಾ ತಂಡದ ವಿವರ
1ನೇ ತಂಡ:
ಪಟ್ಟಣ ಠಾಣೆ ಇನ್ಸ್‌ಪೆಕ್ಟರ್‌ ಮಹದೇವಯ್ಯ, ಸಿಬ್ಬಂದಿ ಮಂಜುನಾಥ, ವೀರಭದ್ರಪ್ಪ, ಕೃಷ್ಣಮೂರ್ತಿ.
2ನೇ ತಂಡ: ಗ್ರಾಮಾಂತರ ಎಸ್‌ಐ ಲೋಹಿತ್‌ಕುಮಾರ್‌, ಸಿಬ್ಬಂದಿ ಕುಮರೇಶ್‌, ಪ್ರಭುಸ್ವಾಮಿ, ಚಿನ್ನಸ್ವಾಮಿ.
3ನೇ ತಂಡ: ಸಂಚಾರಿ ಠಾಣೆ ಎಸ್‌ಐ ದೀಪಕ್‌, ಸಿಬ್ಬಂದಿ ಸುರೇಶ್‌, ಮಹೇಶ್‌, ವಿನಯ್‌ ಕುಮಾರ್‌. 

Advertisement

Udayavani is now on Telegram. Click here to join our channel and stay updated with the latest news.

Next