ವಿಜಯಪುರ : ಮುಖ್ಯಮಂತ್ರಿ ಬದಲಾವಣೆ ಕುರಿತು ಹೈಕಮಾಂಡ್ ನಿರ್ಧರಿಸಲಿದೆ. ಎರಡೂವರೆ ವರ್ಷದ ಬಳಿಕ ರಾಜ್ಯ ಸರ್ಕಾರದ ಸಂಪುಣದಲ್ಲಿ ಸಂಪೂರ್ಣ ಬದಲಾವಣೆ ಆಗಲಿದ್ದು, ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಹೊಸದಾಗಿ 34 ಶಾಸಕರಿಗೆ ಅವಕಾಶ ಸಿಗಲಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ, ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.
ಶನಿವಾರ ನಗರಕ್ಕೆ ಆಗಮಿಸಿದ್ದಾಗ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ನಿರೀಕ್ಷೆ ಮೀರಿ 135 ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಆದರೆ ಸಂಪುಟದಲ್ಲಿ 34 ಮಂತ್ರಿಗಳನ್ನು ಮಾಡಲು ಮಾತ್ರ ಅವಕಾಶವಿದೆ. ಹೀಗಾಗಿ ಎಲ್ಲರಿಗೂ ಆವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ ಎಂದರು.
ಸಂಪುಟದಲ್ಲಿ ಅವಕಾಶ ನೀಡುವ ಕುರಿತು ಸಚಿವ ಮುನಿಯಪ್ಪ ಹೇಳಿಕೆಗೆ ಪಕ್ಷದ ಎಲ್ಲ ಶಾಸಕರಲ್ಲಿ ಸಂತಸ ತಂದಿದೆ. ಎರಡೂವರೆ ವರ್ಷದ ಬಳಿಕ ನಾವೆಲ್ಲ ಸಚಿವರು ಬದಲಾವಣೆ ಆಗೋಣ, ಹೊಸಬರಿಗೆ ಅವಕಾಶ ಕೊಡೋಣ ಎಂದಿದ್ದಾರೆ. 30 ಶಾಸಕರಂತೆ ಎರಡು ಬಾರಿ ನಿಗಮ ಮಂಡಳಿಗೆ ನೇಮಿಸಿದರೆ ಎಲ್ಲರಿಗೂ ಅವಕಾಶ ಸಿಗಲಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೂಪರ್ ಸಿಎಂ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಆಕ್ಷೇಪಿಸಿದ ವಿನಯ ಕುಲಕರ್ಣಿ, ಸಿದ್ಧರಾಮಯ್ಯ ಅವರು ಅತ್ಯಂತ ಬಲಿಷ್ಠವಾಗಿದ್ದು, ಬಲಿಷ್ಠರಾಗಿಯೇ ಇರುತ್ತಾರೆ. ಸಿದ್ಧರಾಮಯ್ಯ ಅವರನ್ನು ಯರೂ ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂದರು.
ಸಿದ್ಧರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಡಿ.ಕೆ.ಶಿವಕುಮಾರ ಎಲ್ಲಿಗೂ, ಯಾರ ಬಳಿಯೂ ಹೋಗಿಲ್ಲ. ಬಿಜೆಪಿ ಶಾಸಕ ಯತ್ನಾಳ ಅನಗತ್ಯವಾಗಿ ಇಂಥ ಹೇಳಿಕೆ ನೀಡುತ್ತಿದ್ದಾರೆ. ಸಂಪುಟದಲ್ಲಿರುವ ಎಲ್ಲ ಸಚಿವರು ಆಯಾ ಇಲಾಖೆ ನಿರ್ವಹಿಸುವಲ್ಲಿ ಸಮರ್ಥರಿದ್ದಾರೆ. ಹೀಗಾಗಿ ಒಬ್ಬರು ಸೂಪರ್ ಸಿಎಂ ಅಲ್ಲ, ಎಲ್ಲರೂ ಸೂಪರ್ ಸಾಮರ್ಥ್ಯ ಹೊಂದಿದ್ದಾರೆ ಎಂದರು.