Advertisement

ರಾಜಕಾರಣಕ್ಕೆ ದೇವರ ಕರೆಯುವುದು ಸೂಕ್ತವಲ್ಲ

07:23 AM Feb 11, 2019 | |

ಮಂಡ್ಯ: ರಾಜಕಾರಣಕ್ಕೆ ದೇವರನ್ನು ಕರೆಯುವುದು ಸೂಕ್ತವಲ್ಲ ಎಂದು ಮಾಜಿ ಸಚಿವ ಎನ್‌. ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ಮದ್ದೂರು ತಾಲೂಕಿನ ಬೆಸಗರಹಳ್ಳಿಯ ಮಾನಸ ವಿದ್ಯಾಸಂಸ್ಥೆಯ ಮಾನಸೋತ್ಸವ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಜಗತ್ತಿನ ಜನರಿಗೆ ನೆಮ್ಮದಿಯ ಆಶೀರ್ವಾದ ಮಾಡಲೆಂಬ ಕಾರಣಕ್ಕೆ ಧರ್ಮಸ್ಥಳದಲ್ಲಿ ಮಂಜುನಾಥನನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಯಾರಧ್ದೋ ವೈಯಕ್ತಿಕ ತೇಜೋವಧೆಗಾಗಿ ಆಣೆ ಪ್ರಮಾಣ ಮಾಡುವುದು, ದೇವರನ್ನು ಕರೆಯುವುದು ರಾಜಕಾರಣಿಗಳಿಗೆ ಸೂಕ್ತವಲ್ಲ ಎಂದು ಹೇಳಿದರು.

ಶಾಸಕರನ್ನು ಪಕ್ಷಕ್ಕೆ ಸೆಳೆಯುವ ಕುರಿತಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರೇ ತಪ್ಪು ಮಾಡಿದ್ದರೆ ತಪ್ಪೇ. ಅಥವಾ ಎಚ್.ಡಿ.ಕುಮಾರಸಾಮಿ ನಾನೇ ರೆಕಾರ್ಡ್‌ ಮಾಡಿಸಿದ್ದೆ ಎಂದು ಒಮ್ಮೆ ಹೇಳಿದ್ದರೆ, ಮತ್ತೂಮ್ಮೆ ಬೇರೆಯವರು ತಿಳಿಸಿದ್ದಾರೆ ಎಂದಿದ್ದಾರೆ.

ಯಾರು ಮಾಡಿದರೂ ಅದು ತಪ್ಪೇ, ಇಬ್ಬರಲ್ಲೂ ಗೊಂದಲಕಾರಿ ಹೇಳಿಕೆಗಳಿವೆ. ಒಟ್ಟಾರೆ ಜನ ನಮ್ಮಿಂದ ನಿರೀಕ್ಷೆ ಮಾಡುವುದು ರಾಜ್ಯದ ಅಭಿವೃದ್ಧಿ. ನಾಡಿನ ಜನರ ಭವಿಷ್ಯಕ್ಕೆ ಒಳ್ಳೆಯ ಕಾರ್ಯಕ್ರಮ ರೂಪಿಸುತ್ತಾರೆಂಬ ನಿರೀಕ್ಷೆ ಇರುತ್ತೆ ಎಂದರು.

ಪೈಪೋಟಿಗಿಳಿಯಬಾರದು: ಇಬ್ಬರೂ ನನಗಿಂತಲೂ ದೊಡ್ಡವರಿದ್ದಾರೆ. ಇದೇ ರೀತಿ ಇಬ್ಬರೂ ಪೈಪೋಟಿಗಿಳಿದರೆ ಅದು ಎಲ್ಲಿಗೆ ಮುಟ್ಟುತ್ತೋ ಗೊತ್ತಿಲ್ಲ. ಮುಂದೆ ಜನ ತೀರ್ಮಾನ ಮಾಡುತ್ತಾರೆ. ಅದು ಅವರಿಗೆ ಬಿಟ್ಟಿದ್ದು ಎಂದು ಪ್ರತಿಕ್ರಿಯಿಸಿದರು.

Advertisement

ಬಜೆಟ್ ಬಗ್ಗೆ ಕೆಟ್ಟದ್ದು ಅಥವಾ ಒಳ್ಳೆಯದ್ದು ಎಂದು ಹೇಳುವುದಕ್ಕಿಂತಲೂ ಬಜೆಟ್ ಎಂದ ಮೇಲೆ ಕಳೆದ ವರ್ಷ ಏನೆಲ್ಲಾ ಕೊಡಲಾಗಿದೆ ಅದು ಅನುಷ್ಠಾನವಾಗಿದೆಯೋ, ಇಲ್ಲವೋ ಎಂಬ ಅರಿವು ಇರಬೇಕು. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು ಅನುಷ್ಠಾನವಾದಾಗ ಮಾತ್ರ ಅದಕ್ಕೊಂದು ಅರ್ಥ ಬರುತ್ತೆ ಎಂದರು.

ಅಸ್ಥಿರಗೊಳಿಸುವುದು ಅಪರಾಧ: ಒಂದು ಸರ್ಕಾರ ರಚನೆಯಾದ ನಂತರ ಅದನ್ನು ಅಸ್ಥಿರಗೊಳಿಸುವುದು ಅಪರಾಧ. ಪೂರ್ಣಪ್ರಮಾಣದ ಸರ್ಕಾರ ಇರಬಹುದು. ಅಥವಾ ಸಮ್ಮಿಶ್ರ ಸರ್ಕಾರವೇ ಆಗಿರಬಹುದು. ಆ ಸರ್ಕಾರ ಸಂಪೂರ್ಣವಾಗಿ ನಡೆಯಲು ಅವಕಾಶ ಕೊಡಬೇಕು. ಬಹುಮತದ ವ್ಯತ್ಯಾಸವೋ ಅಥವಾ ನಾಯಕನ ಮೇಲೆ ವಿಶ್ವಾಸವಿಲ್ಲದಿದ್ದರೆ ಅವಿಶ್ವಾಸ ಮಂಡನೆ ಮಾಡಬಹುದು. ಅದು ಬಿಟ್ಟು ಆಪರೇಷನ್‌ ಮಾಡುವುದು ಸರಿಯಲ್ಲ ಎಂದರು.

ಅಸಮಾಧಾನಕ್ಕೆ ಯಾರು ಕಾರಣ: ಯಾಡಿಯೂರಪ್ಪನವರು ಯಾವ ಕಾರಣಕ್ಕೆ ಆಪರೇಷನ್‌ ಕಮಲ ಮಾಡಲು ಹೊರಟಿದ್ದಾರೋ ಅಥವಾ ಶಾಸಕರು ಏಕೆ ಅಸಮಾಧಾನಗೊಂಡಿದ್ದಾರೋ ಎಂಬುದನ್ನು ತಿಳಿದು ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು.

ಇದಕ್ಕೆ ಯಾರು ಕಾರಣ ಎಂಬುದರ ಕುರಿತಂತೆ ಚರ್ಚೆ ನಡೆಯಬೇಕು. ಅದು ಬಿಟ್ಟು ಗೊಂದಲಗಳಲ್ಲೇ ಮುಳುಗಿ ಸರ್ಕಾರದ ಯೋಜನೆಗಳು ಸರಿಯಾದ ರೀತಿಯಲ್ಲಿ ನಡೆಯದಿದ್ದರೆ ಅದು ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗುತ್ತದೆ. ಜೊತೆಗೆ ಅಪರೇಷನ್‌ ಕಮಲದಂತಹ ಪ್ರಕ್ರಿಯೆ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next