Advertisement
“ಕಪ್ಪು ಹಲಗೆಯ ಮೇಲೆ ಗೀಚಿದ ಅಕ್ಷರ ಇನ್ನೂ ನನ್ನೊಳಗೆ ಅಳಿಸಿ ಹೋಗಿಲ್ಲ’ ಅಂದರು, ಶಿವಲಾಲ್. ಅವರು 90ರ ದಶಕದಲ್ಲಿ ಗಂದೇರ್‌ಬಾಲ್‌ನ ಸರ್ಕಾರಿ ಶಾಲೆಯಲ್ಲಿ ವಿಜ್ಞಾನದ ಮೇಷ್ಟ್ರು. ಅವತ್ತು ಖಗೋಳ ಗ್ರಹಗಳ ಕುರಿತ ಪಾಠದ ಬೋಧನೆಯಿತ್ತು. ಕಪ್ಪು ಫಲಕದ ಮೇಲೆ ಮಕ್ಕಳು ಉರ್ದುವಿನಲ್ಲಿ ಏನೇನೋ ಗೀಚಿಬಿಟ್ಟಿದ್ದವು. ಒರೆಸು ಬಟ್ಟೆಯಿಂದ ಅವುಗಳನ್ನೆಲ್ಲ ಅಳಿಸುತ್ತಾ ಮೇಲಕ್ಕೆ ಬಂದಾಗ, ದಪ್ಪಾಕ್ಷರಗಳಲ್ಲಿ ನಡುವೆ ಕಣ್ಣಿಗೆ ಬಿದ್ದಿದ್ದು, “ಪಾಕಿಸ್ತಾನ್ ಜಿಂದಾಬಾದ್’ ಎನ್ನುವ ಸಾಲು. ಶಿವಲಾಲ್ ಅದನ್ನು ಅಳಿಸುವ ಧೈರ್ಯ ತೋರಲೇ ಇಲ್ಲ. ನಲ್ವತ್ತು ನಿಮಿಷ ಅಂತರಿಕ್ಷದ ಪಾಠ; ಮೇಷ್ಟ್ರ ಮನಸ್ಸು ಕಕ್ಷೆಯಲ್ಲೇ ಇದ್ದಿರಲಿಲ್ಲ. ಅತೀವ ಚಳಿಯಲ್ಲೂ ಉಕ್ಕಿದ ಬೆವರನ್ನು ಉತ್ತರೀಯದಿಂದ ಒರೆಸಿಕೊಳ್ಳುತ್ತಾ, ಮಬ್ಬು ಮಬ್ಟಾಗಿ ಕಾಣುತ್ತಿದ್ದ ದಾರಿಯಲ್ಲಿ ಮನೆಗೆ ಬಂದರಂತೆ. ಅದು ಮೇಷ್ಟ್ರಿಗೆ ಪ್ರತ್ಯೇಕವಾದಿಗಳು ನೀಡಿದ್ದ, ಮೂರನೇ ಮತ್ತು ಕೊನೆಯ ವಾರ್ನಿಂಗ್!
Related Articles
Advertisement
ಪಂಡಿತರು ನಿರಾಶ್ರಿತ ಶಿಬಿರದಲ್ಲಿ ಬೀಡುಬಿಟ್ಟು, ಎರಡು-ಮೂರು ದಶಕಗಳೇ ಉರುಳಿವೆ. ಸಿಹಿನೀರಿನ ಮೀನು, ಸಮುದ್ರ ಸೇರಿ ಹೇಗೆ ಚಡಪಡಿಸುತ್ತವೋ ಹಾಗೆ ಬದುಕು ನಿಧಾನಕ್ಕೆ ಮಾರ್ಪಾಡಾಗುತ್ತಿದೆ. ಸದಾ ಜತೆಗಿದ್ದು, ಕಣಿವೆಯ ಘೋರ ಚಳಿಯನ್ನು ಸೋಲಿಸುತ್ತಿದ್ದ ಕಾಂಗ್ರಿ ಬುಟ್ಟಿ (ಕೆಂಡ ತುಂಬಿದ ಕಟ್ಟಿಗೆಯ ಬುಟ್ಟಿ) ಇಲ್ಲೆಲ್ಲೂ ಕಾಣಿಸಲಿಲ್ಲ. ನಲ್ವತ್ತು ವಯಸ್ಸು ಮೀರಿದ, ಉದ್ದುದ್ದ ಶರೀರಗಳಲ್ಲಿ ಮಾತ್ರವೇ ಫಿರಾನ್ (ನಿಲುವಂಗಿ) ತೂಗಿಬಿದ್ದಿತ್ತು. ಈಗಿನ ಪಂಡಿತ ಮಕ್ಕಳು ಜೀನ್ಸ್ ಟಿ ಶರ್ಟ್ ಧರಿಸುವುದರಲ್ಲಿಯೇ ಖುಷಿ ಕಾಣುತ್ತಿದ್ದರು. ಸಮೋವರ್‌ನಲ್ಲಿ ಚಹಾ ಕಾಯಿಸುವುದು, ಕಣಿವೆಯ ಹಳ್ಳಿಗಳ ಒಂದು ವಿಶಿಷ್ಟ ಸುಖಗಳಲ್ಲಿ ಒಂದು. ನವಿಲಿನ ಮೂತಿಯ, ಎತ್ತರದ ಪಾತ್ರೆ. ನಡುವೆ ಹಬೆಯ ಕೊಳವೆ. ಅದರಲ್ಲಿ ಗ್ರೀನ್ ಟೀ ಎಲೆ, ಏಲಕ್ಕಿ, ದಾಲಿcನ್ನಿ, ಜೇನು, ಕೇಸರಿ ಬೆರೆತ ಕಾವಾ ಚಹಾವು ಗಂಟೆಗಟ್ಟಲೆ ಕುದ್ದೂ ಕುದ್ದು, ಮನೆಯೆಲ್ಲ ಪರಿಮಳಗೊಳ್ಳುವುದು ಇದೇ ಪಾತ್ರೆಯಲ್ಲಿಯೇ. ಆ ಸಮೋವರ್‌ಗಳೆಲ್ಲ ಎಲ್ಲೋ ಮೂಲೆಯಲ್ಲಿ ಕುಳಿತು, ಕಣಿವೆಯ ಕೊರೆಯುವ ಚಳಿಯನ್ನು ನೆನಪಿಸುತ್ತಿದ್ದವು.
ಕಲ್ಹಣನ “ರಾಜತರಂಗಿಣಿ’ಯಲ್ಲಿ ಧೂಮಕೇತುವಿನ ಉಲ್ಲೇಖ ಸೊಗಸಾಗಿದೆ. ಅದು ಆಕಾಶದಲ್ಲಿ ಕಂಡರೆ, ರಾಜನಿಗೆ ಕೇಡುಗಾಲ ಎನ್ನುವ ತಾತ್ಪರ್ಯ. ಪೂರ್ವದಲ್ಲಿ ಸುದೀರ್ಘ ಬಾಲದ ಕೇತು ಕಾಣಿಸಿಕೊಂಡಿದ್ದನ್ನು, ರಾಜ್ಯದ ಜನರಿಗೂ ಮೊದಲೇ ಸುಲ್ತಾನ ಬರ್ಹಾಂ ಖಾನ್ ನೋಡುತ್ತಾನೆ. ಒಂದೆರಡು ತಿಂಗಳಲ್ಲಿ ಅವನ ಅಂತ್ಯವಾಗುತ್ತೆ. ಈಗ ಅಂಥದ್ದೇ ಧೂಮಕೇತು ಕಾಣಿಸಿಕೊಳ್ಳಲೆಂದೇ ಪ್ರಾರ್ಥಿಸುತ್ತಿದ್ದ ಪಂಡಿತ ಸಮುದಾಯಕ್ಕೆ, ಈಗ ಅಲ್ಲಿನ ಆಡಳಿತ ಅಂತ್ಯದ ಸುದ್ದಿ ಯಾವುದೋ ಆಶಾಭಾವ ಹುಟ್ಟಿಸಿದೆ. ಸ್ವರ್ಗದ ಬಾಗಿಲಿನ ಬುಡದಲ್ಲೇ ಕಾದು ಕುಳಿತ ಜೀವಗಳಿಗೆ, ಮತ್ತೆ ಹುಟ್ಟೂರಿನ ಕನಸುಗಳು ಬೀಳುತ್ತಿವೆ.
ಪಂಡಿತರು ಪುನಃ ಕಾಶ್ಮೀರಕ್ಕೆ ಹೋಗ್ತಾರ?ಇದು ದೇಶದ ಪ್ರತಿ ನಾಗರಿಕನೊಳಗಿನ ಪ್ರಶ್ನೆ. 90ರ ದಶಕದಲ್ಲಿ ಕಣಿವೆ ತೊರೆದು ನಿರಾಶ್ರಿತ ಶಿಬಿರದಲ್ಲಿ ನೆಲೆನಿಂತ, ಈಗಿನ ಹಿರಿಯ ಜೀವಗಳಲ್ಲಿ ಮತ್ತೆ ಕಾಶ್ಮೀರದ ಕಣಿವೆ ಸೇರುವ ತವಕವೇನೋ ಎದ್ದು ಕಾಣುತ್ತಿದೆ. ಆದರೆ, ನಿರಾಶ್ರಿತರ ಶಿಬಿರದಲ್ಲಿ ಹುಟ್ಟಿ, ಬೆಳೆಯುತ್ತಿರುವ ಪೀಳಿಗೆಗೆ ಕಾಶ್ಮೀರದ ಮೇಲೆ ಹಿರಿಯರಂತೆ ಒಲವಿಲ್ಲ. ಅವರು ಆ ಸ್ವರ್ಗ ಸುಖವನ್ನು ಅನುಭವಿಸಿದವರೂ ಅಲ್ಲ. ಕಾಶ್ಮೀರವೆಂದರೆ, ಭಯ, ರಕ್ತಪಾತ, ಮತಾಂತರ- ಈ ದೃಶ್ಯಗಳೇ ಅವರ ಕಣ್ಣಲ್ಲಿ ಜೀಕುತ್ತಿವೆ. ಪೂರ್ವಜರು ಪಟ್ಟ ಸಂಕಷ್ಟಗಳ ಕತೆ ಕೇಳುತ್ತಲೇ ಬೆಳೆದ ಮಕ್ಕಳು, ದೇಶದ ಬೇರೆ ಬೇರೆ ನಗರದ ಸುಂದರ ಬದುಕಿನತ್ತ ಮುಖ ಮಾಡುತ್ತಿದ್ದಾರೆ. ಭವಿಷ್ಯದ ಕಾಶ್ಮೀರದಲ್ಲಿನ ಜೀವಭದ್ರತೆ, ಉದ್ಯೋಗ, ಉನ್ನತ ಶಿಕ್ಷಣ, ಕೃಷಿಯ ಸವಾಲುಗಳು ಎಲ್ಲವೂ ಈ ಹೊಸಪೀಳಿಗೆಯ ಮುಂದೆ ಪ್ರಶ್ನೆಗಳಾಗಿ ಜಿಗಿಯುತ್ತಿವೆ. ಕಣಿವೆಯಲ್ಲಿ ಕಾಲೊನಿ ನಿರ್ಮಿಸುವ ಮುನ್ನ, ಪಂಡಿತ ಕುಟುಂಬಗಳ ಒಳಗಿನ ಈ ದ್ವಂದ್ವವನ್ನು ನಿವಾರಿಸಿ, ಧೈರ್ಯ ತುಂಬುವ, ಅಗತ್ಯ ಸೌಕರ್ಯ ಕಲ್ಪಿಸುವ ಸವಾಲು ಕೇಂದ್ರ ಸರ್ಕಾರದ ಮುಂದಿದೆ. 90.4! ಇದು “ರೇಡಿಯೊ ಶಾರದಾ’!
ಜಮ್ಮುವಿನಲ್ಲಿರುವ ಈ ಎಫ್ಎಂ ಸ್ಟೇಷನ್, ಕಾಶ್ಮೀರಿ ಪಂಡಿತ ಸಮುದಾಯದ ಮುಖ್ಯ ಧ್ವನಿ. ಹುಟ್ಟಿದ ನೆಲ ಕಳಕೊಂಡು, ದೇಶಾದ್ಯಂತ ಚದುರಿ, ಜೀವನ ರೂಪಿಸಿಕೊಳ್ಳುತ್ತಿರುವ ಪಂಡಿತರು, ಸಂಸ್ಕೃತಿಯ ಬೇರುಗಳನ್ನು ಮರೆಯಬಾರದೆಂಬ ಉದ್ದೇಶದಿಂದಲೇ ಹುಟ್ಟಿಕೊಂಡ ರೇಡಿಯೊ ಕೇಂದ್ರ. ಪಂಡಿತರ ಕುರಿತ ನಿತ್ಯದ ಸುದ್ದಿಗಳು, ಕಾಶ್ಮೀರದ ಇಂದಿನ ವಿದ್ಯಮಾನ, ಪಂಡಿತರ ಜೀವನಗಾಥೆ, ಭಜನೆ, ಕಾಶ್ಮೀರದ ಹಳೆಯ ಕತೆಗಳನ್ನೆಲ್ಲ ಕೇಳುವ ಸುಖ ಇಲ್ಲಿ ಸಿಗುತ್ತದೆ. – ಕೀರ್ತಿ ಕೋಲ್ಗಾರ್
– ಚಿತ್ರಗಳು: ರೋಹಿತ್ ಪಂಡಿತ