Advertisement

ಕಲ್ಲಾಗು ನೀ ಕಷ್ಟಗಳಿಗೆ

01:15 AM Jan 20, 2020 | Sriram |

ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ. ಕಷ್ಟದ ಸನ್ನಿವೇಶವನ್ನು ನಾವು ದಿಟ್ಟವಾಗಿ ಎದುರಿಸಿದರೆ ಮುಂದೆ ಬರುವ ಒಳ್ಳೆಯ ದಿನಕ್ಕೆ ಸಾಕ್ಷಿಯಾಗುತ್ತೇವೆ. ಇಲ್ಲದಿದ್ದರೆ ಕಳೆದು ಹೋಗಿ ಬಿಡುತ್ತೇವೆ.
ಅದೊಂದು ಪುಟ್ಟ ಕುಟುಂಬ. ತಂದೆ, ತಾಯಿ, ಪುಟ್ಟ ಮಗಳನ್ನೊಳಗೊಂಡ ಸುಖೀ ಸಂಸಾರ. ಅದೊಂದು ದಿನ ರಸ್ತೆ ಅಪಘಾತದಲ್ಲಿ ತಂದೆ ತಾಯಿ ಮೃತಪಟ್ಟು ಏಳು ವರ್ಷದ ಕಂದಮ್ಮ ಅನಾಥವಾಯಿತು. ಬೇರೆ ಯಾರೂ ನೋಡಿಕೊಳ್ಳುವವರಿಲ್ಲದ ಕಾರಣ ಅನಿವಾರ್ಯವಾಗಿ ದೂರದ ಸಂಬಂಧಿಕರೊಬ್ಬರು ಸಾಕತೊಡಗಿದರು. ಅವರಿಗೆ ಅವಳು ಹೊರೆ ಎನಿಸತೊಡಗಿತ್ತು ಆರಂಭದಲ್ಲೇ. 10ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಅವಳು ಮುಂದೆ ಓದಲು ಇಚ್ಛಿಸಿದರೂ ಮನೆಯವರು ಖರ್ಚು ಸುಮ್ಮನೆ ಎಂದು ಓದಿಸಲಿಲ್ಲ.

Advertisement

ಅವಳಿಗೆ 18 ತುಂಬತ್ತಿದ್ದಂತೆ ಮನೆಯವರು ಅವಸರವಸರವಾಗಿ ಮದುವೆ ಮಾಡಿ ಹೊರೆ ಕಳೆದುಕೊಂಡ ಭಾವದಲ್ಲಿ ನಿಟ್ಟುಸಿರು ಬಿಟ್ಟರು. ಹಾಗೆ ಅವಳ ಹೊಸ ಬದುಕು ಪೇಟೆಯ ಸಣ್ಣ ಬಾಡಿಗೆ ಮನೆಯಲ್ಲಿ ಆರಂಭವಾಯಿತು. ಗಂಡನಿಗೆ ಫ್ಯಾಕ್ಟರಿಯೊಂದರಲ್ಲಿ ಸೆಕ್ಯೂರಿಟಿ ಕೆಲಸ. ಆರಂಭದಲ್ಲಿ ಚೆನ್ನಾಗೇ ಇದ್ದ. ಅನಂತರ ಕಂಠ ಮಟ್ಟ ಕುಡಿದು ಬರತೊಡಗಿದ. ಪತ್ನಿಗೂ ಮಗನಿಗೂ ಹಿಂಸಿಸುತ್ತಿದ್ದ. ಕ್ರಮೇಣ ಮನೆಗೆ ಬರುವುದೇ ಕಡಿಮೆಯಾಯಿತು.

ಅಂದು ಮನೆಯ ಯಜಮಾನ ಬಂದು ಎರಡು ತಿಂಗಳ ಮನೆ ಬಾಡಿಗೆ ಪಾವತಿಸದಿದ್ದರೆ ಖಾಲಿ ಮಾಡುವಂತೆ ಹೇಳಿ ಹೋದ. ಅವಳಿಗೆ ದಿಕ್ಕೇ ತೋಚದಂತಾಗಿತ್ತು. ತವರು ಮನೆಗೆ ಹೋಗುವಂತಿರಲಿಲ್ಲ. ಇತ್ತ ಗಂಡನ ಮನೆಯೂ ಇಲ್ಲ. 10ನೇ ತರಗತಿ ಓದಿದವಳಿಗೆ ಎಲ್ಲೂ ಕೆಲಸ ಕೊಡುತ್ತಿರಲಿಲ್ಲ. ಹತ್ತಿರದ ಮನೆಯವರೊಬ್ಬರು ಮನೆ ಕೆಲಸದವಳನ್ನು ಹುಡುಕುತ್ತಿರುವ ವಿಷಯ ತಿಳಿದು ಅಲ್ಲಿಗೆ ಹೋದಳು. ಇಡೀ ದಿನ ಕೆಲಸ ಇರಲಿಲ್ಲ. ಮನೆ ಗುಡಿಸಿ, ಒರೆಸಿ, ಪಾತ್ರೆ ತೊಳೆದಿಟ್ಟರಾಯಿತು. ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ ಎನ್ನುವಂತೆ ಸಮಾಧಾನಪಟ್ಟುಕೊಂಡಳು.ಕೆಲಸದಲ್ಲಿನ ಅವಳ ಶ್ರದ್ಧೆ, ಚುರುಕು ಗಮನಿಸಿ ಆ ಮನೆಯವರು ಬೇರೆಯವರಿಗೆ ತಿಳಿಸಿದರು. ಹೀಗೆ ತಿಂಗಳೊಳಗೆ ಅವಳಿಗೆ ಬೇರೆ ಐದು ಮನೆಯ ಕೆಲಸ ಸಿಕ್ಕಿತು. ಬಿಡುವಿನಲ್ಲಿ ಹೊಲಿಗೆ ತರಗತಿಗೆ ಸೇರಿದಳು. ಈಗ ಮನೆ ಕೆಲಸದ ಜತೆ ಹೊಲಿಗೆಯನ್ನೂ ಮಾಡುತ್ತಾಳೆ. ಮಗನನ್ನು ಶಾಲೆಗೆ ಸೇರಿಸಿದ್ದಾಳೆ.

ಅವಳು ಪರಿಸ್ಥಿತಿಗೆ ಶರಣಾಗಿದ್ದರೆ ಸೋತು ಬಿಡುತ್ತಿದ್ದಳು. ಆದರೆ ಅವಳು ಹೋರಾಡಿ ಗೆದ್ದುಬಿಟ್ಟಳು. ನಾವೂ ಅಷ್ಟೇ. ಕಷ್ಟದ ಸನ್ನಿವೇಶವನ್ನು ಧೈರ್ಯದಿಂದ ಎದುರಿಸದಿದ್ದರೆ ಇತಿಹಾಸದ ಪುಟ್ಟ ಭಾಗವಾಗಿ ಕಳೆದು ಹೋಗುತ್ತೇವೆ. ಅದರ ಬದಲು ಹೋರಾಡಿ ಗೆದ್ದರೆ ಅಥವಾ ಗೆಲುವಿಗ ಪ್ರಯತ್ನ ಪಟ್ಟರೆ ನಾವೇ ಇತಿಹಾಸವಾಗಿ ಇತರರಿಗೆ ಮಾದರಿಯಾಗುತ್ತೇವೆ.

ನಾಳೆ ನಿಮ್ಮದೇ
ನಮ್ಮ ಗಮನ ಸೆಳೆಯುವ ಸುಂದರ ಶಿಲ್ಪ ಮೊದಲು ಕಲ್ಲಾಗಿತ್ತು. ಶಿಲ್ಪಿ ನೀಡುವ ಒಂದೊಂದು ಏಟನ್ನೂ ತಾಳಿಕೊಂಡಿದ್ದರಿಂದಲೇ ಸುಂದರ ರೂಪ ಪಡೆದುಕೊಂಡಿತ್ತು. ನೋವು ಸಹಿಸದೆ ಮಧ್ಯದಲ್ಲೇ ತುಂಡಾಗಿದ್ದರೆ ಅನುಪಯುಕ್ತ ವಸ್ತುವಾಗಿ ಮೂಲೆಯಲ್ಲಿ ಧೂಳು ತಿನ್ನುತ್ತಾ ಬಿದ್ದಿರಬೇಕಿತ್ತು. ಇದೇ ರೀತಿ ನಮ್ಮ ಬದುಕು ಕೂಡಾ.

Advertisement
Advertisement

Udayavani is now on Telegram. Click here to join our channel and stay updated with the latest news.

Next