ಕಲಬುರಗಿ: ಯುವಕರು ಅವಧಾನ ಶಕ್ತಿ ಮತ್ತು ಚಾರಿತ್ರ್ಯದ ಬಲ ಬೆಳಸಿಕೊಳ್ಳಬೇಕು ಎಂದು ನಗರದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಪರಮ ಪೂಜ್ಯ ಮಹೇಶ್ವರಾನಂದ ಸ್ವಾಮೀಜಿ ಕರೆ ನೀಡಿದರು.
ನಗರದ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವೇಕಾನಂದರ ಹಾಗೂ ನೇತಾಜಿ ಸುಭಾಶ್ಚಚಂದ್ರ ಬೋಸ್ ಅವರ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಮಿತ್ರರೇ ನಿಮ್ಮನ್ನು ನೀವು ನಂಬಿ. ನಿಮ್ಮೊಳಗೆ ಅಪಾರವಾದ ಶಕ್ತಿಯಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸ್ವಾಜೀಮಿ ಜತೆಗೆ ಆಗಮಿಸಿದ ಬಾಲ ವಿವೇಕಾನಂದರು ಮಾತನಾಡಿ, ನೀನು ನಿತ್ಯ; ನೀನು ಪರಿಪೂರ್ಣ; ನಿನ್ನಲ್ಲಿ ನಿನಗೆ ಶ್ರದ್ಧೆಯಿರಲಿ; ಓಡಬೇಡ ಎದುರಿಸಿ ನಿಲ್ಲು ಎಂಬ ವಿವೇಕದ ಮಾತುಗಳನ್ನಾಡಿ ಮೆಚ್ಚುಗೆ ಪಡೆದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಡಿ.ಟಿ. ಅಂಗಡಿ ಮಾತನಾಡಿ, ಸ್ವಾಮಿ ವಿವೇಕಾನಂದರಂತೆ ಏಕಾಗ್ರತೆಯಿಂದ ಅಭ್ಯಾಸ ಮಾಡಿ ಜಗತ್ತನ್ನೇ ಬೆರಗುಗೊಳಿಸಿರಿ. ಶಕ್ತಿಯೇ ಜೀವನ; ದೌರ್ಬಲ್ಯವೇ ಮರಣ. ಆದ್ದರಿಂದ ಬಲಾಡ್ಯರಾಗಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರೊ| ರೇಣುಕಾ ಕನಕೇರಿ, ಪ್ರೊ| ವಿ.ಬಿ. ಬಿರಾದಾರ, ಡಾ| ಸುರೇಶಕುಮಾರ ನಂದಗಾವ. ಪ್ರೊ| ಎಂ.ಎಸ್. ಪೊಲೀಸ್ ಪಾಟೀಲ, ಪ್ರೊ| ಜಗದೇವಿ ಕಲಶೆಟ್ಟಿ, ಡಾ| ಛಾಯಾ ಭರತನೂರ, ಪ್ರೊ| ಗಾಯಿತ್ರಿ, ಪ್ರೊ| ಶಶಿಕಲಾ ನಾವದಗಿ ಇದ್ದರು.
ಮಲ್ಲಿಕಾರ್ಜುನ ವಸ್ತ್ರದ ಮಠ ಅವರ ಪ್ರಾರ್ಥಿಸಿದರು. ಡಾ| ಶಿವರಾಜ ಶಾಸ್ತ್ರಿ ಹೇರೂರು ಸ್ವಾಗತಿಸಿದರು. ಮಹಾವಿದ್ಯಾಲಯದ ಯೋಜನಾಧಿಕಾರಿ ಪ್ರೊ| ವೆಂಕಣ್ಣ ಡೊಣ್ಣೇಗೌಡರ ನಿರೂಪಿಸಿ, ವಂದಿಸಿದರು.