Advertisement

ಬಂಡಾಯಗಾರರನ್ನೇ ಸಮ್ಮೇಳನಕ್ಕೆ ಕರೆ ತನ್ನಿ

01:06 PM Nov 03, 2017 | Team Udayavani |

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನ.24ರಿಂದ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿಂದಿನ ಎಲ್ಲಾ ಸಮ್ಮೇಳನಗಳಿಗಿಂತ ಅತ್ಯಂತ ಪರಿಣಾಮಕಾರಿಯಾಗಿ ಮಾಡುವಂತೆ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಸೂಚಿಸಿದರು.

Advertisement

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ಸಾಹಿತ್ಯ ಸಮ್ಮೇಳನ ಆಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸಿದ ಅವರು, ಸಮ್ಮೇಳನಕ್ಕಾಗಿ ಜಿಲ್ಲಾಡಳಿತ 10 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಲಿದೆ. ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನ ಕೊಡಿಸೋಣ. ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಬೇರೆ ಜಿಲ್ಲೆಗಳಿಗಿಂತ ಒಂದು ಹಂತ ಮೇಲೆ ಹೋಗಿ, ಮಾದರಿ ಆಗಬೇಕು ಎಂದರು.

ಬಂಡಾಯಗಾರರನ್ನೇ ಕರೆ ತನ್ನಿ: ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬಂಡಾಯ ಸಾಹಿತಿ ಪೊ›.ಚಂದ್ರಶೇಖರ ಪಾಟೀಲ ಅವರನ್ನು ಆಯ್ಕೆ ಮಾಡಿರುವುದರಿಂದ ಸಮ್ಮೇಳನದಲ್ಲಿ 3 ದಿನಗಳ ಕಾಲ ನಡೆಯಲಿರುವ ಗೋಷ್ಠಿಗಳಲ್ಲಿ ಬಂಡಾಯ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಮೈಸೂರಿನಲ್ಲಿರುವ ದೊಡ್ಡ ದೊಡ್ಡ ಬಂಡಾಯ ಸಾಹಿತಿಗಳನ್ನು ಜತೆಗೂಡಿಸಿ ಕರೆತನ್ನಿ ಎಂದು ಸಲಹೆ ನೀಡಿದರು.

ಕಾರ್ಯೋನ್ಮುಖರಾಗಿ: ಈಗಾಗಲೇ ರಚಿಸಲಾಗಿರುವ 13 ಉಪಸಮಿತಿಗಳವರು ಕಸಾಪ ವತಿಯಿಂದ ತಲಾ 15 ಜನರನ್ನು ನೇಮಕ ಮಾಡಿಕೊಳ್ಳಿ, ಜತೆಗೆ ಅಗತ್ಯಬಿದ್ದರೆ ಹೆಚ್ಚುವರಿ ಅಧಿಕಾರಿಗಳನ್ನೂ ನೇಮಕ ಮಾಡಿಕೊಂಡು, ನ.4ರೊಳಗೆ ಕ್ರಿಯಾಯೋಜನೆ ರೂಪಿಸಿ ಕಾರ್ಯೋನ್ಮುಖರಾಗಿ. ಶಾಸಕರು ವಿಧಾನಸಭೆ ಅಧಿವೇಶನದಲ್ಲಿರುವುದರಿಂದ ದೂರವಾಣಿ ಮೂಲಕ ಅವರ ಸಲಹೆ ಪಡೆದು, ಎಲ್ಲಾ ಉಪ ಸಮಿತಿಗಳ ಕಾರ್ಯಾಧ್ಯಕ್ಷರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಆದ್ಯತೆ ನೀಡಿ: ಸಮ್ಮೇಳನದ ಯಶಸ್ಸು ನಿಂತಿರುವುದೇ ಊಟ ಮತ್ತು ವಸತಿ ವ್ಯವಸ್ಥೆ ಮೇಲೆ. ಹೀಗಾಗಿ ಊಟ ಮತ್ತು ವಸತಿ ಜತೆಗೆ ಸಾರಿಗೆ ವ್ಯವಸ್ಥೆಗೂ ಆದ್ಯತೆ ನೀಡಿ ಎಂದರು. ಈ ಬಗ್ಗೆ ಮಾಹಿತಿ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ, ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯ ವೇದಿಕೆ, ಕಲಾ ಮಂದಿರ ಹಾಗೂ ಮಹಾರಾಜ ಕಾಲೇಜು ಶತಮಾನೋತ್ಸವ ಭವನದ ಉಪ ವೇದಿಕೆಗಳಲ್ಲಿ ಗೋಷ್ಠಿಗಳು ನಡೆಯಲಿವೆ.

Advertisement

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 10 ಸಾವಿರ ಪ್ರತಿನಿಧಿಗಳು ಬರುವ ನಿರೀಕ್ಷೆ ಇದೆ. 2 ಸಾವಿರ ಗಣ್ಯರು ಭಾಗವಹಿಸುವುದರಿಂದ ಇನ್ಫೋಸಿಸ್‌ ಸಂಸ್ಥೆಗೆ 1 ಸಾವಿರ ಕೊಠಡಿಗಳಿಗೆ ಬೇಡಿಕೆ ಸಲ್ಲಿಸಿದೆ. ಗೋಷ್ಠಿಗಳ ನಡುವೆ ಸಣ್ಣ ಸಣ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಸಸಂಜೆ ಏರ್ಪಡಿಸಬಹುದಾಗಿದೆ ಎಂದರು.

ಸಮ್ಮೇಳನಕ್ಕೆ ಬರುವ ಗಣ್ಯರಿಗೆ ಮುಖ್ಯ ವೇದಿಕೆ ಹಿಂಭಾಗ, ಪ್ರತಿನಿಧಿಗಳಿಗೆ ಅರಸು ಬೋರ್ಡಿಂಗ್‌ ಶಾಲೆ ಆವರಣ ಹಾಗೂ ನಿತ್ಯ ಸುಮಾರು 30 ಸಾವಿರ ಸಾರ್ವಜನಿಕರಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸಮ್ಮೇಳನದ ಯಶಸ್ಸಿಗೆ ದುಡಿಯಲು 2ಸಾವಿರ ಸ್ವಯಂಸೇವಕರನ್ನು ನೇಮಿಸಿಕೊಳ್ಳುವ ಸಂಬಂಧ ಗೃಹ ರಕ್ಷಕ ದಳ, ಎನ್‌ಎಸ್‌ಎಸ್‌, ಎನ್‌ಸಿಸಿ, ಸೇವಾದಳಗಳ ಮುಖ್ಯಸ್ಥರೊಂದಿಗೆ ಚರ್ಚಿಸುವಂತೆ ಸಚಿವರು ಹೇಳಿದರು. 

ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನಾ, ನಿಗಮ-ಮಂಡಳಿ ಅಧ್ಯಕ್ಷರಾದ ಡಿ.ಧ್ರುವಕುಮಾರ್‌, ಎಚ್‌.ಎ.ವೆಂಕಟೇಶ್‌, ಬಿ.ಸಿದ್ದರಾಜು, ಜಿಲ್ಲಾಧಿಕಾರಿ ರಂದೀಪ್‌ ಡಿ., ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮತ್ತಿತರರಿದ್ದರು.
 
ಸಚಿವರ ಸಲಹೆಗಳು
-ಅಕ್ಕಿ ಗಿರಣಿ ಮಾಲಿಕರ ಸಭೆ ಕರೆದು ಅಕ್ಕಿ ಸಂಗ್ರಹಿಸಿ.
-ಮೈಮುಲ್‌ಗೆ ಹಾಲು-ಮೊಸರು- ಪೇಡಾ ಸರಬರಾಜಿಗೆ ಬೇಡಿಕೆ ಇಡಿ.
-ಹೋಟೆಲ್‌-ಛತ್ರಗಳ ಮಾಲಿಕರ ಸಭೆ ಕರೆದು ವಸತಿ ವ್ಯವಸ್ಥೆ ಮಾಡಿಕೊಳ್ಳಿ.
-ಉರುವಲಿಗೆ ಸೌದೆ, ಅಡುಗೆ ಅನಿಲ ಹೊಂದಿಸಿಕೊಳ್ಳಿ.

ಸಭೆಯಲ್ಲಿ ಕೇಳಿ ಬಂದ ಸಲಹೆಗಳು
-ಆನೆ ಮೇಲೆ ಭುವನೇಶ್ವರಿ ದೇವಿ ಮೆರವಣಿಗೆ ಮಾಡಿಸಿ 
-ದಸರಾ ಮಾದರಿ ಸರ್ಕಾರಿ ಕಟ್ಟಡ, ಪ್ರಮುಖ ವೃತ್ತಗಳಿಗೆ ದೀಪಾಲಂಕಾರ  
-ನಾಡು-ನುಡಿ ಪ್ರತಿಬಿಂಬಿಸುವ ಸ್ತಬ್ಧಚಿತ್ರ ಮಾಡಿಸಿ.
-ಫ್ಲೆಕ್ಸ್‌ಗಳಿಗೆ ಅವಕಾಶಬೇಡ, ಬಟ್ಟೆ ಬ್ಯಾನರ್‌ಗೆ ಅವಕಾಶ ನೀಡಿ.
-ಊಟಕ್ಕೆ ಕಜಾಯ, ಹುರುಳಿ ಕಟ್ಟು ಸಾಂಬಾರು ಮಾಡಿಸಿ.

Advertisement

Udayavani is now on Telegram. Click here to join our channel and stay updated with the latest news.

Next